Author: ಮನೋರಮಾ. ಬಿ.ಎನ್
ನಮಸ್ತೆ
ಆತ್ಮೀಯರೇ,
ನೂಪುರ ಭ್ರಮರಿ ವಿಶೇಷ ಸಂಚಿಕೆ, ಕಥಾ ಸಂಕಲನ, ನೃತ್ಯಮಾರ್ಗ ಮುಕುರ-ನೃತ್ಯ ಕೃತಿ ಬಿಡುಗಡೆ, ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ.ಭರತನಾಟ್ಯ ಕಾರ್ಯಕ್ರಮ
ಸ್ಥಳ: ನಯನ ಸಭಾಂಗಣ, ಜೆ.ಸಿ.ರಸ್ತೆ, ಕನಡ ಭವನ, ಬೆಂಗಳೂರು
ದಿನಾಂಕ: 13 ಫೆಬ್ರವರಿ, 2011, ಸಂಜೆ ೪ ಗಂಟೆ.
ನೃತ್ಯ ಮಾರ್ಗ ಮುಕುರ’ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣ
ನೂಪುರ ಭ್ರಮರಿಯ ಸಂಪಾದಕಿ, ಕಲಾವಿದೆ ಮನೋರಮಾ ಬಿ. ಎನ್ ಅವರ ನೃತ್ಯಸಂವೇದನೆಯ ‘ಮುದ್ರಾರ್ಣವ’-ಹಸ್ತಮುದ್ರೆಗಳ ಸಂಶೋಧನಾ ಕೃತಿಯ ತರುವಾಯ ಶ್ರೀ ಸಾನಿಧ್ಯ ಪ್ರಕಾಶನದಿಂದ ಅನಾವರಣಗೊಳ್ಳುತ್ತಿರುವ ಪುಸ್ತಕ ‘ನೃತ್ಯಮಾರ್ಗ ಮುಕುರ’. ಭರತನಾಟ್ಯದ ಮಾರ್ಗಪದ್ಧತಿಯ ಮಜಲುಗಳನ್ನು, ನೃತ್ಯಾಂಗಗಳನ್ನು ದಾಖಲಿಸುವ, ಸಮಗ್ರ ಸಂಕ್ಷಿಪ್ತ ವಿವರವನ್ನೀಯುವ ೧೬೦ ಪುಟಗಳ ಈ ಕೃತಿ, ಆಸಕ್ತ ಸಹೃದಯರ ಪಾಲಿಗೆ ಸಾಕಲ್ಯ ದೃಷ್ಟಿಯ ಅಧ್ಯಯನಸಾಮಗ್ರಿ.
೨೦೧೦-ವರ್ಷದ ಅತ್ಯುತ್ತಮ ನೃತ್ಯ ವಿಮರ್ಶೆ ಪ್ರಶಸ್ತಿ ಪ್ರದಾನ
ದಿನದಿಂದ ದಿನಕ್ಕೆ ಸಾಂಸ್ಕೃತಿಕ ರಂಗದ ಅದರಲ್ಲೂ ನರ್ತನ ಕ್ಷೇತ್ರದ ವಿಮರ್ಶಾಪರಂಪರೆ ಕುಸಿಯುತ್ತಿರುವಾಗ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ಕರ್ನಾಟಕದಲ್ಲೇ ಮೊತ್ತ ಮೊದಲಬಾರಿಗೆ ನೂಪುರ ಭ್ರಮರಿ ಆರಂಭಿಸುತ್ತಿದೆ. ಅದರಲ್ಲೂ ಯುವ ಮನಸುಗಳನ್ನು ಪ್ರೇರೇಪಿಸಿ, ಪ್ರೋತ್ಸಾಹಿಸಿ, ಉತ್ತಮ ವಿಮರ್ಶೆಗಳನ್ನು ಬರೆಯುವ ಮನಸ್ಸನ್ನು ಹುಟ್ಟುಹಾಕುವ ಕಾರ್ಯದ ಮುನ್ನುಡಿಯಾಗಿ ಈ ಪ್ರಶಸ್ತಿಯ ಚಿಂತನೆ ಅನಾವರಣಗೊಂಡಿದೆ. ಮುಂದಿನ ದಿನಗಳಲ್ಲಿ ಈ ಕುರಿತಾಗಿ ಮಾಧ್ಯಮ ಮತ್ತು ಕಲೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ಕಟ್ಟಿಕೊಡುವ ದಿಸೆಯಲ್ಲಿ ಚಿಂತನಾರ್ಹವಾದ, ಪ್ರಾಯೋಗಿಕ ನೆಲೆಗಟ್ಟು ಭವಿಷ್ಯದಲ್ಲಿ ತೆರೆದುಕೊಳ್ಳಲಿದೆಯೆಂಬ ಆಶಯ ನಮ್ಮದು.
೨೦೧೦ನೇ ಸಾಲಿನಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಗೆ ಮೊದಲು ಭಾಜನರಾಗುತ್ತಿರುವವರು ಶ್ರೀಮತಿ ಪ್ರಿಯಾ ರಾಮನ್. ನವದೆಹಲಿಯ ಸಂಸ್ಕೃತಿ ಫೌಂಡೇಶನ್‌ನ ಕಾರ್ಯಕ್ರಮ ಸಂಯೋಜಕರಾಗಿ, ಟೈಮ್ಸ್ ಆಫ್ ಇಂಡಿಯಾದ ಜೊತೆ ಭಾರತೀಯ ಶಾಸ್ತ್ರೀಯ ನೃತ್ಯಗಳ ಶೈಕ್ಷಣಿಕ ಉದ್ದೇಶಗಳ ಕುರಿತಂತೆ ಕಾರ್ಯ ನಿರ್ವಹಿಸಿದ ಪ್ರಿಯಾರಾಮನ್ ಹಲವು ಶೈಕ್ಷಣಿಕ ಮತ್ತು ಸಂಶೋಧನೆಯ ನೆಲೆಗಟ್ಟಿನ ಕೆಲಸಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಬೆಂಗಳೂರಿನ ಶುಭಾ ಧನಂಜಯ್ ಮತ್ತು ದೆಹಲಿಯ ಪದ್ಮಶ್ರೀ ಗೀತಾ ಚಂದ್ರನ್, ಚೆನ್ನೈನ ಬ್ರಾಘ್ಹಾ ಬೆಸಲ್ಸ್ ಬಳಿಯಲ್ಲಿ ನೃತ್ಯಾಭ್ಯಾಸ ಮಾಡಿದ ಪ್ರಿಯಾ; ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಷ್ಟೇ ಅಲ್ಲದೆ ನಿರೂಪಣೆಯನ್ನೂ ನಿರ್ವಹಿಸಿದವರು. ರಾಷ್ಟ್ರೀಯ ಯುವ ಉತ್ಸವ ಪ್ರಶಸ್ತಿ, ವಿದ್ಯಾರ್ಥಿವೇತನಗಳನ್ನು ಪಡೆದ ಪ್ರಿಯಾರಾಮನ್ ನೃತ್ಯಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಅನನ್ಯ ಕಲಾಸಂಘಟನೆಯ ಸ್ವಯಂಸೇವಕಿಯಾಗಿರುವ ಪ್ರಿಯಾರಾಮನ್; ರೋಟರಿ ಫೌಂಡೇಶನ್‌ನ ರಾಯಭಾರಿಯಾಗಿ, ನೃತ್ಯ ಶಿಕ್ಷಣ ವಕ್ತಾರೆಯಾಗಿ ಯುಎಸ್‌ಎಗೆ ಭೇಟಿಯಿತ್ತಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿ, ಪ್ರಸ್ತುತ ಹೈದರಾಬಾದಿನಲ್ಲಿ ತಮ್ಮ ವಾಸ್ತವ್ಯ ಹೂಡಿದರೂ ನೃತ್ಯಸಂಬಂಧೀ ಕಾರ್ಯಕ್ರಮಗಳಿಗೆ ಆಗಾಗ್ಗೆ ಕರ್ನಾಟಕದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡು ಹವ್ಯಾಸಿ ಪತ್ರಕರ್ತೆಯಾಗಿ ದುಡಿಯುತ್ತಿದ್ದಾರೆ. ಚಂದನ ದೂರದರ್ಶನ ಕಲಾವಿದೆಯಾಗಿರುವ ಪ್ರಿಯಾರಾಮನ್ ‘ಜಯಾ’ ಟಿವಿ ನಡೆಸಿಕೊಡುವ ‘ತಕಧಿಮಿತಾ’ ನೃತ್ಯ ಸ್ಫರ್ಧೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು. ೧೯೯೭ರಲ್ಲಿ ವಿದ್ವತ್ ಮತ್ತು ಅರಂಗೇಟ್ರಂ ಪೂರ್ಣಗೊಳಿಸಿದ್ದು; ಧಾರವಾಡದ ಯುವ ಸೌರವ, ಸಾಗರದ ಕಲೋತ್ಸವ, ಅಂಕುರ ಉತ್ಸವ, ಯವನಿಕಾ ಸಾಂಸ್ಕೃತಿಕ ಸಂಜೆ, ಸಾಯಿ ನೃತ್ಯೋತ್ಸವ, ಅನನ್ಯ ನೃತ್ಯಧಾರೆ, ದೆಹಲಿಯ ಲೋಕ್ ಕಲಾ ಮಂಚ್, ಹೈದರಾಬಾದ್‌ನ ನೃತ್ಯ ನೀರಾಜನ್, ಸಪ್ತಪರ್ಣಿ, ಶಿಲ್ಪರಾಮಂಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದಾರೆ. ಅವರು ಅನನ್ಯ ಕಲಾಸಿಂಚನ, ನರ್ತನಂ ಮತ್ತು ನರ್ತಕಿ ನಿಯತಕಾಲಿಕಗಳಲ್ಲಿ ಬರೆದ ಮೂರು ವಿಮರ್ಶೆಗಳನ್ನಾಧರಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ನಿಮ್ಮ ಉಪಸ್ಥಿತಿ ನಮ್ಮ ಹೆಮ್ಮೆ…ನಿಮ್ಮ ಆಸಕ್ತ ಮಿತ್ರರಿಗೂ ತಿಳಿಸಿ, ಕರೆದುಕೊಂಡು ಬನ್ನಿ. ಬರುತ್ತೀರಲ್ವಾ?