Author: ಮನೋರಮಾ. ಬಿ.ಎನ್
ಆತ್ಮೀಯರೇ,
ಯಾವುದೇ ಕ್ಷೇತ್ರವನ್ನಾದರೂ ತೆಗೆದುಕೊಳ್ಳಿ,.. ಕಾಲೆಳೆಯುವವರ ಸಂಖ್ಯೆಗೆ ಕಡಿಮೆಯೇನಿಲ್ಲ. ಪತ್ರಿಕೋದ್ಯಮ, ನೃತ್ಯಗಳೂ ಇದಕ್ಕೆ ಹೊರತಲ್ಲ. ಬಹಳಷ್ಟೂ ಸಲ ಸೃಜನಶೀಲತೆಯನ್ನೂ ಕದಿಯುವ ಅಪಾಯಗಳಿರುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಸೃಜನಶೀಲತೆಯ ಅಭಿವ್ಯಕ್ತಿಯ ನಂತರ ಬೇರೆಯವರಿಗೆ ಅದರ ಬಗ್ಗೆ ಜ್ಞಾನೋದಯವಾಗುವುದು! ವಿಪರೀತವೆಂದರೆ ಅಂತವುಗಳನ್ನು ತಮ್ಮದೇ ಸ್ವಂತ ಎಂಬ ರೀತಿಯಲ್ಲಿ ಬಳಸಿಕೊಳ್ಳುವುದು! ಇದು ವಿಪರ್ಯಾಸವೋ ಅಥವಾ ಅಂಟಿದ ಸಂಪ್ರದಾಯವೋ ತಿಳಿಯದು. ಒಟ್ಟಿನಲ್ಲಿ ಇಂತಹ ಸಂಗತಿಗಳೇ ಪವಿತ್ರ ಕ್ಷೇತ್ರಗಳಿಗೆ ಅಂಟಿದ ಕಳಂಕವನ್ನು ಮತ್ತಷ್ಟು ಹೆಚ್ಚಿಸುತ್ತಿರುವುದು ಖೇದಕರ.‘ಭ್ರಮರಿ ಗೆ ಇಂತಹ ಸಂಗತಿಗಳು ಹೊಸದಲ್ಲವಾದರೂ, ನೋವುಗಳು ಉಳಿದುಹೋಗುವುದರಲ್ಲಿ ಸಂಶಯವಿಲ್ಲ.
ವಿಷಯವೊಂದರ ಶೋಧನೆಯ-ಸಂಶೋಧನೆಯನ್ನು ಇನ್ನೊಂದೆಡೆ ಪುನರ್ ಬಳಸುವಲ್ಲಿ ಸೌಜನ್ಯದ ಸಂಭೋಧನೆಗಳು ಬಳಸಲ್ಪಟ್ಟ ಕೃತಿಯ ಅಧ್ಯಯನ ಮೌಲ್ಯವನ್ನು ಹೆಚ್ಚಿಸುತ್ತವೆ. ಈ ಸೌಜನ್ಯ ಯಾವುದೇ ವ್ಯಕ್ತಿಯ ಅಥವಾ ವಿಷಯದ ಸೃಜನಶೀಲತೆಯನ್ನು ಬಳಸಿಕೊಳ್ಳುವಾಗಲೂ ಬೇಕು. ಇಲ್ಲವಾದರೆ ನಂಬಿಕೆಯ ಅಡಿಪಾಯ ಕುಸಿದುಹೋಗುವುದು ಖಂಡಿತ.
ಆದರೂ ಸಹೃದಯ ಓದುಗರ ಪ್ರತಿಕ್ರಿಯೆಗಳು ನಮ್ಮ ‘ಭ್ರಮರಿಗೆ ಮತ್ತಷ್ಟು ಹರಿದು ಬಂದಿದೆ. ನರ್ತನ ಜಗತ್ತಿಗೊಂದು ಇಂತಹ ಸದಭಿರುಚಿಯ ಪತ್ರಿಕೆಯ ಅಗತ್ಯವಿತ್ತು ಎನ್ನುವ ಪ್ರೋತ್ಸಾಹದ ನುಡಿಗಳು ಬೆನ್ನು ತಟ್ಟುತ್ತಿವೆ. ಬೆಂಗಳೂರಿನಿಂದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜೆ ಶ್ಯಾಮಲಾಭಾವೆ, ಉಡುಪಿಯ ನೃತ್ಯ ವಿಮರ್ಶಕಿ ಪ್ರತಿಭಾ ಸಾಮಗ, ಶಿವಮೊಗ್ಗದ ನಾಟ್ಯಾಚಾರ್ಯ ಜನಾರ್ಧನ್, ಪತ್ರಕರ್ತ ಮಿತ್ರರಾದ ಹರೀಶ್ ಆದೂರು, ದುರ್ಗಾಕುಮಾರ್ ನಾಯರ್ಕೆರೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿಯೋ ಎಂಬಂತೆ ಸಾಹಿತಿ ನಡಿಬೈಲು ಉದಯಶಂಕರ್ ಮತ್ತು ಇನ್ನೀರ್ವರು ಮಿತ್ರರು ಪತ್ರಿಕೆಯ ಈ ಸಂಚಿಕೆಯ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಪತ್ರಿಕೆಯನ್ನು ನಿರೂಪಿಸುವ ಹಿಂದಿನ ಶ್ರಮವನ್ನು ಗುರುತಿಸಿ ಆರ್ಥಿಕವಾಗಿಯೂ ಸಹಕಾರ ನೀಡಿದ ಹಿತೈಷಿಗಳೆಲ್ಲರಿಗೂ ಕೃತಜ್ಞತೆಯ ಸಾದರ ನಮನಗಳು.
ಈ ಹಿಂದಿನ ಸಂಚಿಕೆಗೆ ಪತ್ರಿಸಿ ಹೇಳಿದವರು ಕಡಿಮೆಯಾದರೂ,ಫೋನಾಯಿಸಿ, ಈ ಮೂಲಕ ಓದುಗರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆಂಬ ಭರವಸೆ ನೀಡಿದ್ದಾರೆ. ಆದರೂ ಬಹಳಷ್ಟು ಸಹೃದಯರು ತಮ್ಮ ಮನೆಯ ಅಂಗಣಕ್ಕೆ ಪತ್ರಿಕೆ ತಲುಪಿದ ಬಗ್ಗೆ ತಿಳಿಸದಿರುವುದರಿಂದ ಪತ್ರಿಕೆಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುವಲ್ಲಿ ವಿಳಂಬವಾಗುತ್ತಿದೆ. ಅಂಚೆ ಮೂಲಕ ಕಳಿಸುವಾಗ ಪತ್ರಿಕೆ ಸಿಗದೇ ಹೋದ ಸಂದರ್ಭಗಳೂ ಇದೆ. ಹಾಗಾಗಿ ಪತ್ರಿಕೆಯ ಜವಾಬ್ದಾರಿ ನಿರೂಪಣೆಗಾಗಿ ತಮ್ಮ ಸಹಕಾರ ಈ ನಿಟ್ಟಿನಲ್ಲಾದರೂ ಮುಂದುವರಿದರೆ ಸಹಕಾರಿ. ನಿಮ್ಮ ಒಂದು ಅಂಚೆ ಕಾರ್ಡು, ಒಂದು ಫೋನು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ. ಜೊತೆಗೆ ಪತ್ರಿಕೆಯನ್ನು ಗುಣಮಟ್ಟದ ದೃಷ್ಟಿಯಿಂದ ಶ್ರೀಮಂತಗೊಳಿಸಲು ತಮ್ಮ ಹೆಜ್ಜೆ ನಮ್ಮೊಂದಿಗೆ ಇದ್ದೀತು …ಅಲ್ಲವೇ?
ನೀವೂ ಬರೆಯಿರಿ… ಎಂದು ಕಲಾವಿದರನ್ನು, ನೃತ್ಯಶಿಕ್ಷಕರನ್ನು ಕೇಳಿಕೊಂಡದ್ದಿದೆ. ಆದರೆ ಬಹಳಷ್ಟು ಸಲ ಹಿಂದೇಟು ಹಾಕಿದ್ದು ಕಂಡುಬಂದಿದೆ. ಏಕೆ?… ಭಯವೇ? ಮುಜುಗರವೇ? ಪತ್ರಿಕೆಯ ಗುಣಮಟ್ಟದ ಬಗ್ಗೆ ಸಂಶಯವೇ? ಅಥವಾ ಪತ್ರಿಕೆ ಎಷ್ಟು ದಿನ ಮುಂದುವರಿದೀತೆಂಬ ಅಸ್ತಿತ್ವದ ಪ್ರಶ್ನೆಯೇ? ಏನಿದ್ದರೂ ಮುಕ್ತವಾಗಿ ಹೇಳಿಕೊಳ್ಳಿ…ನಿಮ್ಮ ಅರಿವಿಗೆ ಬಂದಂತಹ ನೃತ್ಯ ವಿಚಾರಗಳು ಏನೇ ಇರಲಿ, ಚಿಂತನೆಯ ಒರೆಗೆ ಹಚ್ಚುವ ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ… ಕ್ಲೀಷೆಯೆನಿಸಿಕೊಳ್ಳುವ ನೃತ್ಯಕಾರ್ಯಕ್ರಮ ವಿಮರ್ಶೆಗಳನ್ನು ಹೊರತುಪಡಿಸಿದಂತೆ ಸದಭಿರುಚಿಯ ಲೇಖನ ,ಅಭಿಪ್ರಾಯ, ಚರ್ಚೆ ಏನೇ ಇದ್ದರೂ ಅದನ್ನು ಹಂಚಿ ಹರಡಿ. ಹಿಂದೊಮ್ಮೆ ಹೇಳಿದಂತೆ, ಗುರು ಕಲಾವಿದರಿಗಷ್ಟೇ ಅಲ್ಲದೆ, ಜನಸಾಮಾನ್ಯರಿಗೂ ನೃತ್ಯವನ್ನು ಒಯ್ದು ತಲುಪಿಸಬೇಕೆಂಬ ಹಂಬಲವೇ ಹೊರತು ಬೇರಾವ ಲಾಭದ ಉದ್ದೇಶವೂ ಇಲ್ಲ.
ಕಲರ್ ಪ್ರಿಂಟ್, ಒಂದಷ್ಟು ವರ್ಣರಂಜಿತ ಫೋಟೋಗಳು ನೃತ್ಯ ಪತ್ರಿಕೆಯ ಆವರಣವನ್ನು ಚೆಂದ ಮಾಡೀತು ಎಂಬ ಅಭಿಪ್ರಾಯಗಳು ಬಂದಿವೆ. ಆದರೆ ಪತ್ರಿಕೆಯ ಆವರಣಕ್ಕಿಂತ ಹೂರಣವನ್ನು ಚೆಂದ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಮುಖ್ಯ ಎನ್ನುವುದು ಕೆಲವು ಮಿತ್ರರ ಅಭಿಮತ. ಏಕೆಂದರೆ ಆವರಣ ಚೆಂದ ಕಾಣುವ ಬಹಳಷ್ಟು ಪತ್ರಿಕೆಗಳು ತನ್ನ ಗುಣಮಟ್ಟವನ್ನು ಕಾದುಕೊಳ್ಳುವಲ್ಲಿ ಸೋತಿದೆ ಎನ್ನುವುದು ಅವರ ನಂಬಿಕೆ. ಹಾಗಾಗಿ ‘ಭ್ರಮರಿಯದ್ದೇನಿದ್ದರೂ ಮೊದಲು ಸತ್ವಯುತವಾದ ಹೂರಣದೆಡೆಗೆ ಗಮನ. ಪತ್ರಿಕೆಯೊಂದನ್ನು ನೋಡಿ ತೆಗೆದು ಪಕ್ಕಕಿಟ್ಟುಕೊಳ್ಳುವಂತಾದರೆ ಅದು ಪತ್ರಿಕೋದ್ಯಮಕ್ಕೂ, ನಾವು ಮೆಚ್ಚುವ ಆಸಕ್ತಿ, ಆದರ್ಶಗಳಿಗೂ ಅಷ್ಟು ಒಳಿತಲ್ಲ ಎನ್ನುವುದು ನಮ್ಮ ಅನಿಸಿಕೆ. ಮುಂದಿನ ದಿನಗಳಲ್ಲಿ ಆವರಣವನ್ನೂ ಚೆಂದ ಮಾಡುವತ್ತ ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ.
ಪತ್ರಿಕೆ ಇನ್ನೂ ಪ್ರಾರಂಭದ ಹಂತದಲ್ಲಿರುವುದರಿಂದ ಮತ್ತು ಅದರ ಬೇರುಗಳು ಗಟ್ಟಿಯಾಗಬೇಕಿರುವುದರಿಂದ ಸದ್ಯದ ಹರಿಸ್ಥಿತಿಯಲ್ಲಿ ಖಾಸಗಿ ಪ್ರಸಾರಕ್ಕಷ್ಟೇ ಮುಂದುವರಿಯಲಿದೆ. ಹಾಗಂದ ಮಾತ್ರಕ್ಕೆ ಪತ್ರಿಕೆಯ ಉಳಿವಿನ ಬಗ್ಗೆ ಅಪನಂಬಿಕೆಗಳು ಬೇಡ. ಏಕೆಂದರೆ, ಪತ್ರಿಕೆಯನ್ನು ನೋಂದಾಯಿಸುವ ಕಾರ್ಯಗಳು ಜಾರಿಯಲ್ಲಿವೆ.
ಪತ್ರಿಕೆ ಇನ್ನೂ ಪ್ರಾರಂಭದ ಹಂತದಲ್ಲಿರುವುದರಿಂದ ಲೇಖನ ಬರೆಯುವವರಿಗೂ ಉಚಿತವಾಗಿ, ನಿಯಮಿತವಾಗಿ ಪತ್ರಿಕೆ ತಲುಪಿಸುವುದೊಂದೇ ಸದ್ಯದ ಮಟ್ಟಿಗೆ ಸಂಭಾವನೆಯ ಬದಲಾಗಿ ಅರ್ಪಿಸುವ ಧನ್ಯವಾದ. ಈ ಬಗ್ಗೆ ಬೇಸರವಿಲ್ಲ ತಾನೇ?
ಇಂತಹ ಪುಟ್ಟ ವಿಷಯಗಳನ್ನು ತಮ್ಮಲ್ಲಿ ಅರಿಕೆ ಮಾಡಿಕೊಂಡರಷ್ಟೇ ಓದುಗ ಸಹೃದಯರು ಅರ್ಥ ಮಾಡಿಕೊಂಡಾರು ಎನ್ನುವ ಧಾರ್ಷ್ಟ್ಯ ನಮ್ಮದಲ್ಲ. ಬದಲಾಗಿ ಪತ್ರಿಕೆಯ ಇತಿಮಿತಿಗಳನ್ನು ತಿಳಿಸುವುದು ಕರ್ತವ್ಯವೆಂಬುದು ನಮ್ಮ ಭಾವನೆ. ನಿಮ್ಮ ಹೃದಯ ಶ್ರೀಮಂತಿಕೆಯ ಮುಂದೆ ನಮ್ಮ ಪ್ರಯತ್ನಗಳು ಫಲ ಕೊಡಬೇಕೆನ್ನಿಸುವುದಷ್ಟೇ ನಮ್ಮ ಆಶಯ. ಪತ್ರಿಕೆಯ ನಿರೂಪಣೆಯ ಹಿಂದೆ ನಮ್ಮಷ್ಟೇ ಜವಾಬ್ದಾರಿ ನಿಮಗೂ ಇದೆ. ಸಾಂಸ್ಕೃತಿಕ ಪತ್ರಿಕೆಗಳ ಸಾಲಿನಲ್ಲಿ ‘ನೂಪುರ ಭ್ರಮರಿ ಮೈಲಿಗಲ್ಲಾದರೆ ಅದರ ಯಶಸ್ಸು ನಿಮಗೆ ಸೇರಬೇಕಾದದ್ದು ಅನ್ನುವುದೂ ನೆನಪಿರಲಿ.
ಹಾಗಾದರೆ ಬರೆಯುತ್ತೀರಿ ತಾನೇ?.. ಕ್ಲೀಷೆ, ಸಾಮಾನ್ಯ ವಿಮರ್ಶೆಗಳನ್ನು ಬದಿಗಿಟ್ಟು.. ಮನವನ್ನು ಮುಕ್ತವಾಗಿ ತೆರೆದಿಟ್ಟು…ನಮ್ಮ ಹೆಜ್ಜೆಯ ಜೊತೆಯಲ್ಲಿ ಹೆಜ್ಜೆಯಿಟ್ಟು…
ಪ್ರೀತಿಯಿಂದ ನಿಮ್ಮ
ಮನೋರಮಾ ಬಿ. ಎನ್