ಅಂಕಣಗಳು

Subscribe


 

ಮೂರನೇ ವಾರ್ಷಿಕ ಸಂಭ್ರಮಕ್ಕೆ ಸಾಕ್ಷಿಯಾಗಿ

Posted On: Monday, February 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕಾದು, ಕಾತರಿಸಿ, ಕನವರಿಸಿ, ನೊಂದು-ಬೆಂದು ನಡೆದು ಪಡೆದ ಖುಷಿ ಎಂದೆಂದಿಗೂ ಇಮ್ಮಡಿಯಾಗುತ್ತಲೇ ಇರುತ್ತದೆ ಎಂಬ ಮಾತು ಸುಳ್ಳಲ್ಲ. ಇಂದಿಗೆ ವಿಶಾಲ ಬಯಲಿನಲ್ಲಿ, ಎತ್ತರದ ಅವಕಾಶದಲ್ಲಿ, ಅನಂತ ಸಾಗರದ ಅಲೆಗಳ ನಡುವೆ ಜೋರಾಗಿ ‘ಹುರ್ರೇ’ ಎಂದು ಮನಬಿಚ್ಚಿ ಕೂಗಿ ಧ್ವನಿಗೈಯ್ಯಬೇಕೆನ್ನಿಸುತ್ತಿದೆ. ಅವು ಮಾರ್ದನಿಯಾಗಿ ನಿತ್ಯವೂ ಅನುರಣಿಸಬೇಕೆನ್ನಿಸುತ್ತಿದೆ. ಕಾರಣ ; ನೂಪುರ ಭ್ರಮರಿ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಫಾರ್ ಇಂಡಿಯಾದಿಂದ ನೋಂದಾವಣೆಗೊಂಡಿದೆ ! ಇದರಲ್ಲೇನಿದೆ? ಸಾಮಾನ್ಯ. ಕಾಣಿಸುವುದು ಸಹಜ. ಆದರೆ ಕಳೆದ ಮೂರು ವರ್ಷಗಳಲ್ಲಿ ನೂಪುರದ ಗೆಳೆಯರ ಬಳಗ ಅದಕ್ಕಾಗಿ ನಡೆಸಿದ ಹೋರಾಟ, ಪ್ರತೀ ಅಂಚೆಯೂ ‘ಸಾನ್ನಿಧ್ಯ’ಕ್ಕೆ ಬಂದಾಗ ಕುತೂಹಲ-ಆತಂಕದಿಂದ ಕಾದು ನೋಡುತ್ತಿದ್ದ ಕಣ್ಣುಗಳು ; ಖಾಸಗೀ ಪ್ರಸಾರದ ಪತ್ರಿಕೆಯೆಂಬ ಬಂಧಗಳಿಂದ ಹೊಸ ಹೊಸಿಲಿಗೆ ಬಂದು ನಿಂತು ಇಂದಿಗೆ ಸಂತಸದ ಹನಿಗೂಡಿರುವುದನ್ನು ಕಾಣುವಾಗ ಸಾರ್ಥಕವೆನಿಸುತ್ತದೆ. ಹೌದು ; ಚಿಕ್ಕಪುಟ್ಟ ಸಂತಸಗಳೇ ಬದುಕಿನ ಸಮೃದ್ಧತೆಯನ್ನು ಬದುಕಿಸುತ್ತವೆ.

ಇವೆಲ್ಲದಕ್ಕೂ ‘ಮುದ್ರಾರ್ಣವ’ವೇ ಮುನ್ನುಡಿ ಬರೆದಿರಬೇಕೆನ್ನಿಸುತ್ತಿದೆ. ಸಂಶೋಧನೆಯ ಚಿಂತನೆ ಪಡಿ ಮೂಡಿದ ಕ್ಷಣಕ್ಕೆ ಮತ್ತಷ್ಟು ಹುಡುಕುವಿಕೆಯ ಎಳೆಗಳು ಸಂಲಗ್ನಗೊಂಡಿವೆ. ನೂಪುರದ ನಾಂದಿ ಧ್ವನಿಸಿದೆ. ನಂತರ, ಕೃತಿ ಅನಾವರಣಗೊಂಡ ಶುಭಲಗ್ನವೋ ಏನೋ, ಮೂರರ ವರ್ಷವನ್ನು ಸ್ವಾಗತಿಸುವ, ನಾಲ್ಕನೇ ಸಂಪುಟವನ್ನು ತೆರೆಯುತ್ತಿರುವ ಘಳಿಗೆಗೆ ಪ್ರೇರಕವಾಗಿ, ಪೂರಕವಾಗಿ ಕೈಯ್ಯಲ್ಲಿ ನೋಂದಾಯಿತಪತ್ರದ ಸಾನ್ನಿಧ್ಯವಿದೆ. ಜೊತೆಗೆ ಶ್ರೀ ಸಾನ್ನಿಧ್ಯ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಇದೀಗ ಹೊಸ ಹುರುಪಿನಿಂದ ತನ್ನ ನಂತರದ ಸದಭಿರುಚಿಯ ಪುಸ್ತಕದ ಆವೃತ್ತಿಗಳಿಗೆ ಸಜ್ಜಾಗಿ ನಿಂತಿದೆ ! ಒಟ್ಟಿನಲ್ಲಿ ಸಂಭ್ರಮದ ಮೂರನೇ ವರ್ಷದ ಆಚರಣೆಗೆ ಅಡಿಯಿಡುವ ಮುನ್ನ ಹೊರೆಯೆನಿಸದ ಹೊಣೆಗಾರಿಕೆಯ ಪ್ರೀತಿ ಹೆಗಲನ್ನು ತಟ್ಟಿದೆ. ಇನ್ನೊಂದಷ್ಟು ಖುಷಿಯ ಕ್ಷಣಗಳನ್ನು ಮುಂದಿನ ದಿನಗಳಲ್ಲಿ ಬರಮಾಡಿಕೊಳ್ಳುವ ನಿರೀಕ್ಷೆಗಳೂ ಇವೆ !

ಹಾಗೆ ನೋಡಿದರೆ, ಪ್ರಾರಂಭದ ದಿನಗಳಲ್ಲಿ ಮೂದಲಿಕೆಯ ಮಾತುಗಳೇ ಸುತ್ತಲಿನಿಂದ ಪ್ರತಿಧ್ವನಿಸಿತ್ತು. ‘ಲಾಭದ ಲವಲೇಶ ಆಶೆಗೂ ಬಗ್ಗದೆ ಅದ್ ಹೇಗೆ ಪತ್ರಿಕೆ ನಡೆಸುವಿರಿ ? ಸಾಕಷ್ಟು ದೂರಗಾಮಿ ಚಿಂತನೆಗಳಿರಬೇಕು. ಪತ್ರಿಕೆ ನಡೆಸುವುದು ಅಂದರೆ ಬೆಂಕಿಯ ಜೊತೆಗಿನ ಬದುಕು. ಮೂರೇ ದಿನದಲ್ಲಿ ಮುಚ್ಚಿ ಹೋಗುತ್ತದೆ’ ಎಂಬ ಹಾರೈಕೆ(?), ಪ್ರಶ್ನೆಗಳು ಇದಿರು ನಿಂತು ಅಣಕಿಸಿದ್ದವು. ಹಾದಿ ನಿಚ್ಚಳವಾಗತೊಡಗಿದಾಗ ಗಮ್ಯದೆಡೆಗೆ ಗಮನ ಸಹಜವಾಗಲೇಬೇಕಲ್ಲವೇ? ಅಡಿ ಮುಂದಿಟ್ಟದ್ದನ್ನು ಹಿಂದೆಗೆಯುವ ಪ್ರಶ್ನೆಯೇ ಇರಲಿಲ್ಲ. ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಅದರ ಮಟ್ಟವನ್ನು ವರ್ಷದಿಂದ ವರ್ಷಕ್ಕೆ ಎತ್ತರಕ್ಕೇರಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಆದ್ದರಿಂದ ಪ್ರಶೆಗಳನ್ನೇ ಸವಾಲುಗಳಾಗಿ ಮಾಡಿಕೊಂಡು ಬೆಂಕಿಯೆಂಬ ಉರಿಯ ಕಲ್ಪನೆಯಿದ್ದರೂ ಅದರಿಂದಲೂ ಸ್ವಾದಿಷ್ಟ, ಆರೋಗ್ಯಕರ ಅಡುಗೆಯನ್ನೂ ಸಾಧಿಸಿ ಉಣಿಸಬಹುದಾದರೆ ಯಾಕಾಗಬಾರದು ಎಂದು ಹೊರಟಿದ್ದೇ ; ಈವರೆಗೆ ಸಂಗ್ರಹಿಸುವ ಪದಾರ್ಥಗಳಲ್ಲೇ ಪಾಕವೈವಿಧ್ಯವನ್ನು ಸಮಗ್ರವಾಗಿ ಉಣಬಡಿಸುತ್ತಲಿದ್ದೇವೆ. ಇದು ದಣಿದು ಬಂದವರಿಗೆ ನೆರಳಾಗಿದೆ ; ಬಾಯಾರಿದವರಿಗೆ ನೀರುಣಿಸಿದೆ ; ತಂಬೆಲರಾಗಿ ಗಾಳಿ ಬೀಸಿದೆ ; ಬೆಳೆಯುವ ಸಸಿಗಳಿಗೆ ಪೋಷಣೆಯನ್ನೀಯುತ್ತಿದೆ; ಆರೋಗ್ಯವಾದ ಆಹಾರದ ಮಾದರಿಗಳನ್ನು ನೀಡುತ್ತಲಿದೆ ; ಶಕ್ತಿಯನ್ನು ರೂಢಿಸುತ್ತಲಿದೆ ; ಹಳತಿನ ಆಸರೆಯಲ್ಲಿ ಹೊಸ ದಿಕ್ಕಿನೆಡೆಗೆ ನಡೆವ ಸ್ಫೂರ್ತಿಯನ್ನೀಯುತ್ತಿದೆ ; ಹಂಚಿಕೊಳ್ಳುವ ವೇದಿಕೆಯಾಗಿದೆ ಎಂಬುದು ನಮ್ಮ ನೆಮ್ಮದಿ.

ಪತ್ರಿಕೆಯ ಜೊತೆಗಿನ ಪಯಣ ಅಷ್ಟೊಂದು ಸುಲಭವೇ? ನಿರಂತರ ಬದ್ಧತೆಯನ್ನು ಬೇಡುವ ಮತ್ತು ಸವಾಲು, ಸ್ಪರ್ಧೆಗಳನ್ನು ನೀಡುವ ರಂಗವಿದು. ಹಾಗಾಗಿ ಸಂಬಂಧ, ಚಿಂತನೆಗಳ ಗುಣಾಕರ ಭಾಗಾಕಾರಗಳು ನಿರಂತರ ನಡೆದೇ ಇವೆ. ಇಂದಿನ ಖರ್ಚುವೆಚ್ಚಗಳ ನಡುವಿನಲ್ಲೂ ಕಲಾರಸಿಕ ಓದುಗರ ಸಹಕಾರದಿಂದ ಮುನ್ನಡೆದಿದ್ದೇವೆ. ಗೆಳೆಯರ ಬಳಗದ ಅದ್ಭುತ ಸಹಕಾರದ ನಡುವೆಯೂ ಟೀಕೆಗಳು ತಿವಿದಿವೆ; ಎಚ್ಚರಿಸಿವೆ; ವಿರೋಧಾಭಾಸಗಳು, ಮೇಲಾಟಗಳು ಬೆನ್ನು ಬಿಡದೆ ಹಿಂಬಾಲಿಸಿವೆ ; ಒಳಿತು ಕೆಡುಕುಗಳ ದರ್ಶನ ಆಗಿದೆ ; ಒತ್ತಾಸೆ ಬೇಡಿವೆ. ಅಷ್ಟೇ ಅಲ್ಲ; ಇದು ಜೀವನಕ್ಕೊಂದು ನಿಶ್ಚಿತ ಶಿಸ್ತನ್ನು ಕೊಟ್ಟಿದೆ. ಆ ಶಿಸ್ತು ನಮ್ಮ ಕಡಲತಡಿಯ ಮುತ್ತಿನಂತಾದರೂ ; ಮತ್ತಷ್ಟು ಮಣಿಗಳನ್ನು ಪೋಣಿಸುವೆಡೆಗೆ ಹೆಜ್ಜೆ ಹೊರಟಿದೆ. ನಮ್ಮೆಲ್ಲಾ ಪ್ರಯತ್ನಗಳಿಗೂ ನೂತನ ಭಾಷ್ಯ ಬರೆದಿದೆ.

ಇದೆಲ್ಲವೂ ಸಾಧ್ಯವಾದದ್ದು ನೂಪುರದಿಂದ. ನಮ್ಮೆಲ್ಲರಿಂದ ಬೆಳೆದು, ಇದೀಗ ನಮ್ಮನ್ನು ಬೆಳೆಸುತ್ತಿರುವ ನೂಪುರವೆಂಬ ಪ್ರೀತಿಗೆ ನಾವು ಋಣಿಗಳೇ ಹೌದು ! ಜೊತೆಗೆ ಬೆಳೆಸಿದ ಓದುಗರಾದ ನಿಮಗೂ ಋಣಿ. ‘ಯೋಚನೆಗಳಿಗೆ ಕಾಲುಗಳಿದ್ದರೆ ಆದರ್ಶಗಳಿಗೆ ರೆಕ್ಕೆಗಳಿರುತ್ತವೆ.’ ಆದರ್ಶವೂ ಒಂದು ಭ್ರಮೆಯೇನೋ ಎಂಬುದು ಕಾಡುತ್ತಲಿದ್ದರೂ ; ಅದರ ಉತ್ಪನ್ನ ವಿಚಾರಧಾರೆಗಳ ಬೆಂಬಲದ ನಡೆಗೆ ತಿರುವು-ಮುರುವುಗಳು, ಕಲ್ಲುಕೊರಕುಗಳು ಅಗಾಧವೆನಿಸಿದರೂ ; ದೀರ್ಘಕಾಲಕ್ಕೆ ಅವೇ ವಿಚಾರಗಳು ನಿತ್ಯವಿನೂತನವಾಗಿ, ಉತ್ಕೃಷ್ಟವೆನಿಸಿ ಬಾಳುತ್ತವೆ. ಅದಕ್ಕೆ ಉದಾಹರಣೆ, ಕಟ್ಟಿದ ಪುಟ್ಟ ಪುಟ್ಟ ಕನಸುಗಳು ನಡೆಸಿದ ಹೆಜ್ಜೆಗಳು ಅಗಾಧ ಸಾಧ್ಯತೆಗಳ ಮಹಾಪೂರವನ್ನೇ ಇಂದಿಗೆ ತೋರಿಸಿಕೊಡುತ್ತಿರುವುದು. ನೃತ್ಯ ವಲಯದಲ್ಲಿ ಈಗಾಗಲೇ ಮನ್ನಣೆ, ಪ್ರೋತ್ಸಾಹಗಳ ದಿಂಡು ಬೆನ್ನು ತಟ್ಟುತ್ತಿದೆ. ಕೆಲವೆಲ್ಲಾ ಅಚ್ಚರಿಯೆಂಬಂತೆ ಒದಗಿಬಂದಿವೆ. ಹಾಗಾಗಿ ಒದಗಿದ, ಒದಗುವ, ದುಡಿದ, ದುಡಿಯುವ ಕೈಗಳಿಗೆಲ್ಲರಿಗೂ ಅಭಿವಂದನೆಗಳಿವೆ, ಅನಂತ ಅರ್ಪಣೆಗಳಿವೆ.

ಆದರೆ ಗುರಿಯೆಂಬುದು ತಾಣವಲ್ಲ. ಅದು ನಡೆದಷ್ಟೂ ಸವೆಯದ ಹಾದಿ. ಹಾಗಾಗಿ ಕೂಡಿ ಮುನ್ನಡೆಯುವ ಬಲವಿದ್ದರೆ ದಾರಿಯ ಆಯಾಸ, ಏರು ತಗ್ಗುಗಳು ಅಷ್ಟಾಗಿ ನಮ್ಮನ್ನು ಕಾಡದು. ಇನ್ನೂ ಮುಂದಕ್ಕೂ ಹೆಜ್ಜೆಗಳ ಬವಳಿಕೆ ಗೊತ್ತಾಗದಂತೆ ನೀವು ಬೇಕು. ಕಾಳಜಿ, ಅನುಸರಣೆ, ಜೊತೆಗಿರುವ ಹುಮ್ಮಸ್ಸು, ಒಮ್ಮನಸ್ಸು ಬೇಕು. ನೋವು, ಸಂಕಟ ಬಿಗುಮಾನಗಳ ಬಿಮ್ಮಗಿನ ಮುಖ ಹೊತ್ತು ಕೂರದೆ, ಪ್ರೀತಿ-ಕಕ್ಕುಲತೆಗಳನ್ನು ಬರಮಾಡಿಕೊಳ್ಳಬೇಕು. ನಿಮ್ಮ ಸಹಕಾರ, ಆಶೀರ್ವಾದ ಎಂದೆಂದಿಗೂ ನೂಪುರವನ್ನು ಹರಸಬೇಕು. ಈ ಬೆಳವಣಿಗೆಯ ನಿರಂತರ ಅಭೀಪ್ಸೆಗೆ ಜೊತೆಗೆ ಇರುತ್ತೀರಲ್ವಾ? ನೂಪುರ ನಮ್ಮೆಲ್ಲರದು.. ನೆನಪಿರಲಿ.. ಮೂರನೇ ವಸಂತದಲ್ಲೂ ನೂಪುರದ ದನಿ ಮಾರ್ದನಿಸಲಿ, ನಿನಾದ ಗುನುಗುನಿಸುವಂತಾಗಲಿ. ಗುಣಾತ್ಮಕ ಸುಧಾರಣೆಗಳ ಶಕೆ ಬರೆಯಲಿ..

ಪ್ರತೀ ವರ್ಷದ ಮಹಾಶಿವರಾತ್ರಿಯ ಆಸುಪಾಸಿಗೆ ನೂಪುರದ ವರ್ಷದ ಹಬ್ಬ ನಮ್ಮ ಸಂಪ್ರದಾಯ. ನರ್ತನದ ಅಧಿದೇವನಿಗೆ ಒಂದರ್ಥದಲ್ಲಿ ಅರ್ಪಿಸುವ ಅಂಜಲಿಯಿದು ಎಂದೇ ನಮ್ಮೆಲ್ಲರ ಭಾವನೆ. ನಟರಾಜನ ಅನಂತ ಕೃಪೆ, ಕಾರುಣ್ಯ ಎಲ್ಲರನ್ನೂ, ಎಲ್ಲವನ್ನೂ ಕಾಪಿಡಲಿ.

– ಪ್ರೀತಿಯಿಂದ

ಸಂಪಾದಕರು

Leave a Reply

*

code