ಅಂಕಣಗಳು

Subscribe


 

ವರುಷ ಕಳೆಯುವ ಹೊತ್ತಿನಲ್ಲಿ

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಆತ್ಮೀಯ ಓದುಗರೇ,

ಒಂದಷ್ಟು ಭಾವಗಳನ್ನು ಹಂಚಿಕೊಳ್ಳುವುದಿದೆ..,

ವರುಷದ ಹಿಂದೆ ನೃತ್ಯ ಮಂಟಪದ ನಟರಾಜೋತ್ಸವದಲ್ಲಿ ವಿದುಷಿ ರೂಪಾ ಉಪಾಧ್ಯ, ಶಕ್ತಿಯ ಬಿ. ಜಿ. ಅನಂತಶಯನ, ಡಾ| ನಡಿಬೈಲು ಉದಯಶಂಕರ್ ಅವರು ನೂಪುರ ಭ್ರಮರಿಯ ಮೊದಲ ಸಂಚಿಕೆಯನ್ನು ಅನಾವರಣಗೊಳಿಸುವ ಹೊತ್ತಿಗೆ ಇಷ್ಟೊಂದು ಆತಂಕ ಇರಲಿಲ್ಲವೇನೋ! ಆಗ ಇದ್ದದ್ದು-ಹೊಸ ಪತ್ರಿಕೆಯನ್ನು ಹುಟ್ಟುಹಾಕುವ ಹುಚ್ಚು, ಭವಿಷ್ಯದೆಡೆಗೆ ಒಂದಷ್ಟು ಸುಂದರ ಕನಸುಗಳು. ಆದರೆ ಕ್ರಮಿಸಿದ ವರುಷದ ಸಿಂಹಾವಲೋಕನವನ್ನು ಮಾಡುವ ಹೊತ್ತಿಗೆ, ಕನಸುಗಳತ್ತ ಸ್ಪಷ್ಟವಾಗಿ ಯೋಜಿಸುವ ಸಂದರ್ಭಕ್ಕೆ ಸಾಕಷ್ಟು ಆತಂಕಗಳು ಕಣ್ಣ ಮುಂದಿದ್ದವು. ಪತ್ರಿಕೆ ಸಾಕಷ್ಟು ಕಲಿಸಿಕೊಡುತ್ತದೆ, ಒಂದಷ್ಟು ವರುಷ ಕಳೆದರೆ ಅನುಭವಗಳ ಮೂಟೆಯೇ ಗಂಟು ಕಟ್ಟಿರುತ್ತದೆ. ಯಾವುದೇ ಪತ್ರಿಕೆಯಾಗಲೀ, ಅದನ್ನು ನಡೆಸಿಕೊಂಡು ಹೋಗುವುದು ಸಿದ್ಧಾಂತ ಕಲಿತಷ್ಟು ಸುಲಭವಲ್ಲ ಎನ್ನುವ ಚೈತ್ರರಶ್ಮಿಯ ಗೆಳೆಯ ರಾಮುವಿನ ಮಾತು ಸುಳ್ಳೆನಿಸಲಿಲ್ಲ. ಅದೂ ಸಾಂಸ್ಕೃತಿಕ ನೆಲೆಯ ಪತ್ರಿಕೋದ್ಯಮದ ಕೊಂಡಿಗಳು ಕಳಚಿಕೊಳ್ಳುತ್ತಿರುವಾಗಲೇ; ಅದೇ ಹಿನ್ನಲೆ-ಆಧಾರದ ಪ್ರದರ್ಶನ ಕಲೆಗಳ ಕುರಿತಾದ ಪತ್ರಿಕೆಯ ಜವಾಬ್ದಾರಿ ಸಾಕಷ್ಟು ಸವಾಲೆನಿಸಿದ್ದು ಹೌದು. ಅದರಲ್ಲೂ ನೂಪುರದ ಪ್ರಾರಂಭಕ್ಕೆ, ನಡೆಯುವ ಹಾದಿಗೆ, ಮಾತಾಡಿದವರಿಗಿಂತ ಮೂಗು ಮುರಿದ, ಮೂತಿ ತಿವಿದವರ ಸಂಖ್ಯೆಯೇ ಹೆಚ್ಚಿರುವಾಗ, ಭ್ರಮರಿಯ ಭ್ರಮಣದ ಅವಲೋಕನಕ್ಕೆ ಒಟ್ಟಾಗಿ ಎಲ್ಲರೂ ಮುಂದಾಗುವುದೆಂದರೆ ಸಂಭ್ರಮಗಳ ನಡುವೆಯೂ ಅದೊಂದು ರೀತಿಯ ಆತಂಕ !

ಈ ಆತಂಕ ಖಂಡಿತವಾಗಿಯೂ ಭ್ರಮರಿಯ ಅಸ್ತಿತ್ವದ ಕುರಿತಾಗಿ ಅಲ್ಲ. ಏಕೆಂದರೆ ಲಾಭ, ಹೆಸರು, ವಾಣಿಜ್ಯ ಉದ್ದೇಶಗಳಿಗಾಗಿಯೇ ಹುಟ್ಟಿಕೊಂಡ ಪತ್ರಿಕೆಯಾಗಿದ್ದರೆ ಅದರ ಭವಿಷ್ಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ನಿಂತುಹೋಗಿಬಿಡುತ್ತಿತ್ತೇನೋ ! ಆದರೆ ನೂಪುರ ಹುಟ್ಟಿಕೊಂಡದ್ದು ನಮ್ಮೊಳಗಿನ ಅರಿವಿಗೆ ಕಿಚ್ಚು ಹಚ್ಚಲು, ಹಚ್ಚಿದ ಕಿಚ್ಚಿನ ಕಾವು ಹಂಚಿಕೊಳ್ಳಲು; ಕಲೆಯ ಪ್ರೀತಿಗೆ, ತೃಪ್ತಿ-ನೆಮ್ಮದಿಗಳ ರೀತಿಗೆ, ಸೌಹಾರ್ದ ಸಂಬಂಧಗಳ ನಿರೂಪಣೆಗೆ, ಕಲಾಪ್ರಜ್ಞೆಯನ್ನೂ ಒಳಗೊಂಡಂತೆ ನಮ್ಮೆಲ್ಲರ ಉತ್ಥಾನಕ್ಕೆ! ಈ ಹಂಬಲ ನಿತ್ಯ ನಿರತ! ಹಾಗಾಗಿ ವಾರ್ಷಿಕ ಸಂಭ್ರಮವೆಂಬುದು ನಮ್ಮ ಭಾವ-ಅನುಭವ-ಸಂತಸಗಳ ಮಿಲನವಾಯಿತೇ ಹೊರತು; ಲೆಕ್ಕಪತ್ರಗಳ, ವಾರ್ಷಿಕ ವರದಿ ವಾಚನಗಳ ವಿನಿಮಯಕ್ಕೆ ವೇದಿಕೆಯಾಗಲಿಲ್ಲ, ಹೊಗಳಿಕೆ-ಪೊಗಳಿಕೆ-ಆಡಂಬರ-ಉಪಚಾರಗಳ ಅತಿಥೇಯ ಎನಿಸಲಿಲ್ಲ.

ಆದರೆ ಆತಂಕ ಇದ್ದದ್ದು ಹೌದು! ನಮ್ಮಲ್ಲಿಲ್ಲದ ಓಲೈಸುವಿಕೆಯ ಸ್ವಾಗತೋಪಚಾರಕ್ಕೆ, ಔಪಚಾರಿಕತೆಯ ಬೆನ್ನು ಚಪ್ಪರಿಸಬಾರದೆಂದಿದ್ದ ಹಟಕ್ಕೆ ! ಯಾವುದೇ ಒಂದು ವಿಷಯಕ್ಕೆ ಬ್ರಾಂಡ್ ಆಂತಲೋ, ಸಂಸ್ಥೆಯ ಮುಖವಾಣಿ ಅಂತಲೋ ಆಗದೆ; ಯಾರ ಮಾತಿಗೂ-ಮರ್ಜಿಗೂ ಕಾಯದೇ ಪತ್ರಿಕೆಯನ್ನು ಅದರದ್ದೇ ಆದ ಧರ್ಮದಲ್ಲಿ ನಡೆಸಿಕೊಂಡು ಹೋಗಬೇಕೆನ್ನುವ ಪುಟ್ಟ ಆದರ್ಶಕ್ಕೆ! ಆಗಷ್ಟೇ ಪತ್ರಿಕೆಯೂ ನಮ್ಮನ್ನು ಪ್ರೀತಿಸಬಲ್ಲುದು; ಅಂತಹ ಪ್ರೀತಿ ನಮಗೆ ಎಂದೆಂದಿಗೂ ಬೇಕು ಎಂಬ ನಂಬಿಕೆಗೆ!

ಸಹಕರಿಸಿದವರನ್ನು ಸ್ಮರಿಸುವುದು ನಮ್ಮ ಗುಣ. ಆದರೆ ಅದೇ ಹೆಚ್ಚುಗಾರಿಕೆಯೆನಿಸಬಾರದು, ಮೌಲ್ಯವನ್ನು ಕಡಿಮೆ ಮಾಡಬಲ್ಲುದೆಂದು ಬಳಗದ ತರ್ಕ. ಈ ಹಿನ್ನಲೆಯಲ್ಲಿ ಸಂಪಾದಕೀಯವನ್ನೂ ಒಳಗೊಂಡಂತೆ ಪತ್ರಿಕೆಯ ಪ್ರತೀ ಪುಟಕ್ಕೂ ರೂಪುರೇಷೆ, ಆಯಾಮಗಳನ್ನು ಹಾಕಿದ್ದಿದೆ. ಆದರೆ ಸಾಮಾನ್ಯವಾಗಿ ನಮ್ಮ-ನಿಮ್ಮೆಲ್ಲರನ್ನೂ ಕಾಡುವ ಕಾಯಿಲೆಯೊಂದಿದೆ ; ಔಪಚಾರಿಕ ಮಾನ್ಯತೆಗಳ ಬಗ್ಗೆ ನಿರೀಕ್ಷೆ, ಆಡಂಬರಿಕೆ, ಓಲೈಸುವಿಕೆ, ಪ್ರಚಾರಪ್ರಿಯತೆ ! ಕಲಾವಿದರನೇಕರು ಇದರ ಸಂತ್ರಸ್ತರು. ಈ ನಿಟ್ಟಿನಲ್ಲಿ ಬೇಸರದ ಬಿಸುಪುಗಳೇಳುವ ಭಯವಿತ್ತು. ಆದರೆ ಕರ್ನಾಟಕದ ಗಡಿಯನ್ನೂ ಮೀರಿ ಮುಂಬೈ, ದೆಹಲಿ, ಯು‌ಎಸ್‌ಎ ವರೆಗೂ ವಿಸ್ತರಿಸಿ ಪ್ರಶಂಸೆ ಗಳಿಸುತ್ತಿರುವ ನೂಪುರವನ್ನು ಪ್ರೀತಿಸುವ ಓದುಗ ಬಳಗವಿದೆ. ಆತ್ಮೀಯವಾಗಿ ವಿಚಾರಿಸಿಕೊಳ್ಳುವ ಬಂಧುರ ಬಂಧದ ಬಳಗ ಭರವಸೆಗಳನ್ನಿತ್ತಿದೆ. ಹಾಗಾಗಿ, ಪ್ರೀತಿಪಾತ್ರರೆಲ್ಲಾ ಪ್ರೀತಿಯಿಟ್ಟು ಬಂದಿದ್ದರು.

ವರುಷದ ಹಾದಿಯಲ್ಲಿ ಸಾಕಷ್ಟು ಕಲಿಸಿಕೊಟ್ಟಿದೆ ನೂಪುರ ಭ್ರಮರಿ. ಮೆಚ್ಚುಗೆ, ನಿಂದನೆ, ಅವಮಾನ, ತೆಗಳಿಕೆ, ಶಹಬ್ಭಾಸ್, ಪ್ರೋತ್ಸಾಹ…ಹೀಗೆ ಗಮ್ಯದ ಹಾದಿಗೆ ನೋವು, ನಲಿವಿನ ಮಬ್ಬಾದ ಕಣ್ಣುಗಳ ಮಾತು, ಮೌನ! ಪ್ರತೀ ಸಂಚಿಕೆಯ ಹುಟ್ಟಿನಲ್ಲೂ ಆಗ ತಾನೇ ಹುಟ್ಟಿದ ಕೂಸಿನ ತಂದೆತಾಯಂತೆ ಖುಷಿಯ ಸಾಕ್ಷಾತ್ಕಾರ!. ಈ ಚಲನಶೀಲತೆಯನ್ನು ನೂಪುರಭ್ರಮರಿಯ ಪ್ರತೀ ಹೆಜ್ಜೆಯಲ್ಲೂ ನಾವು ಕಾಣಬೇಕು ಎಂಬುದೇ ನಮ್ಮ ಅಪೇಕ್ಷೆ. ಹಾಗಾಗಿ ಸಂಪಾದಕಿಯಾಗಿ ನನ್ನ ಮತ್ತು ನಮ್ಮ ಬಳಗದ ಪತ್ರಿಕೆಯಷ್ಟೇ ಅಲ್ಲ,..ನೂಪುರ ಭ್ರಮರಿ! ನಮ್ಮ-ನಿಮ್ಮೆಲ್ಲರದು, ಕಲೆಯದ್ದು! ಅದರ ಸುಖ-ದುಃಖಗಳಲ್ಲಿ ಪ್ರತಿಯೊಬ್ಬರದೂ ಸಮಪಾಲು. ನಮ್ಮೆಲ್ಲರ ಪ್ರೀತಿ, ನಮ್ಮೆಲ್ಲರ ಜವಾಬ್ದಾರಿಯಿದು.

ವಾರ್ಷಿಕ ಸಂಭ್ರಮದ ಅಧ್ಯಕ್ಷ ಸರ್ಪಂಗಳ ಈಶ್ವರ ಭಟ್ಟರು ನೂಪುರದ ಅವಲೋಕನ ಮಾಡುತ್ತಾ ಹೇಳಿದ್ದು ಇದನ್ನೇ.. ಕಲೆಯ ಕುರಿತಾದ ಪತ್ರಿಕೆ ನಡೆಸುವುದು ನಿಜವಾಗಿಯೂ ಒಂದು ಸಂಘರ್ಷ. ಯಾವುದೇ ವಿಷಯ ಸೀಮೋಲ್ಲಂಘನ ಮಾಡಿದೆ ಅಂತಾದರೆ, ನಂತರದ ದೃಷ್ಟಿ ಅನಂತದತ್ತಲೇ !

ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಲಿ…ಏನಂತೀರಿ?

ನಲುಮೆಯಿಂದ ನಿಮ್ಮ

ಸಂಪಾದಕರು

Leave a Reply

*

code