Author: ಮನೋರಮಾ. ಬಿ.ಎನ್
ನೂಪುರ ಭ್ರಮರಿ’ ದ್ವೈಮಾಸಿಕ ಮತ್ತು ಪ್ರತಿಷ್ಠಾನ(ರಿ.) ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ಮತ್ತು ವಿಮರ್ಶಾ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ’ ಪ್ರಶಸ್ತಿಯನ್ನು ೨೦೧೦ರಲ್ಲಿ ಆರಂಭಿಸಿದ್ದು ತಮಗೆ ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ೨೦೧೧ನೇ ಸಾಲಿನ ಪ್ರಶಸ್ತಿಗೆ ಡಾ. ಶತಾವಧಾನಿ ಗಣೇಶ್ ಅವರ ಅಧ್ಯಕ್ಷತೆಯ ಪ್ರಶಸ್ತಿ ನಿರ್ಣಾಯಕ ಸಮಿತಿಯು ವಿಮರ್ಶೆಗಳ ಮೌಲ್ಯ, ಉದ್ದೇಶ, ಸ್ವರೂಪ, ಗುಣಮಟ್ಟವನ್ನಾಧರಿಸಿ ಮತ್ತು ನೃತ್ಯಕ್ಷೇತ್ರದ ವಿಮರ್ಶೆಗೆ ಈವರೆಗೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಉಡುಪಿಯ ವಿದುಷಿ ಶ್ರೀಮತಿ ಪ್ರತಿಭಾ ಸಾಮಗ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದೆ. ಈ ವರುಷ ವಿವಿಧ ಪತ್ರಿಕೆ/ನಿಯತಕಾಲಿಕೆ/ ವೆಬ್ ತಾಣಗಳಲ್ಲಿ ಬರೆಯಲಾದ ವಿಮರ್ಶೆಗಳ ಪೈಕಿ ಸುಮಾರು 34 ವಿಮರ್ಶಾ ಲೇಖಕರ ನಾಮನಿರ್ದೇಶನ ಪಟ್ಟಿಯನ್ನು ಲಕ್ಷಿಸಲಾಗಿ ಪ್ರತಿಭಾ ಸಾಮಗರ ಕೊಡುಗೆಯು ಮುಂಚೂಣಿಯಲ್ಲಿದೆ.
ಪ್ರಶಸ್ತಿಯು ಫೆಬ್ರವರಿ 20, 2012 ರಂದು ಬೆಂಗಳೂರಿನ ನಯನಾ ಸಭಾಂಗಣದಲ್ಲಿ ನೂಪುರ ಭ್ರಮರಿ ಸಂಶೋಧನಾ ಪ್ರತಿಷ್ಠಾನ ಮತ್ತು ಕರ್ನಾಟಕ ಸಂಶೋಧಕರ ಒಕ್ಕೂಟದ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿರುವ ರಾಜ್ಯಮಟ್ಟದ ನೃತ್ಯ ಸಂಶೋಧನಾ ವಿಚಾರಸಂಕಿರಣದ ಸಮಾರೋಪದಲ್ಲಿ ವಿತರಣೆಯಾಗಲಿದ್ದು ಗೌರವಧನ, ಪ್ರಶಸ್ತಿ ಪತ್ರ, ಸ್ಮರಣಿಕೆ, ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.