Author: ಮನೋರಮಾ. ಬಿ.ಎನ್
– ಮನೂ ‘ಬನ’
ಭರತನ ನಾಟ್ಯಶಾಸ್ತ್ರದಿಂದ ಆರಂಭವಾಗಿ ಇತ್ತೀಚಿನವರೆಗೂ ಅನೇಕ ಸಂಗೀತ-ನೃತ್ಯ ಶಾಸ್ತ್ರ ಗ್ರಂಥಗಳು ಹೊರಬಂದಿವೆ. ಆದರೆ ಅವುಗಳಲಿ ಕಣ್ಮರೆಯಾಗಿ ಹೋದದ್ದೇ ಹೆಚ್ಚು. ಇದೇ ಸಾಲಿಗೆ ಸೇರಿಹೋಗುವ ಅಪಾಯ ಎದುರಿಸುತ್ತಿದ್ದ ೧೬ನೇಯ ಶತಮಾನದ ನಾಲ್ಕು ಗ್ರಂಥಗಳ ಸಮಗ್ರ ಗ್ರಂಥವೇ ಪುಂಡರೀಕಮಾಲಾ.
ಪುಂಡರೀಕ ವಿಠಲ : ಕರ್ಣಾಟಕ ಸಂಗೀತ, ಹಿಂದೂಸ್ಥಾನೀ ಸಂಗೀತ ಮತ್ತು ನರ್ತನಶಾಸ್ತ್ರ, ಅಲಂಕಾರ, ನಾಟಕ, ಕೋಶ, ಪರ್ಶಿಯನ್ ಸಂಗೀತ,..ಹೀಗೆ ಅನೇಕ ವಿದ್ಯೆಗಳಲ್ಲಿ ಅದ್ವಿತೀಯ ಪಾಂಡಿತ್ಯ ಪಡೆದ ಏಕೈಕ ವಿದ್ವಾಂಸ ಈತ. ಸದ್ರಾಗ ಚಂದ್ರೋದದಯ, ರಾಗಮಂಜರೀ, ರಾಗಮಾಲಾ ಮತ್ತು ನರ್ತನ ನಿರ್ಣಯ ಎಂಬುವೇ ಆ ನಾಲ್ಕು ಮುಖ್ಯ ಗ್ರಂಥಗಳು.
ಕರ್ಣಾಟಕ ಮತ್ತು ಹಿಂದೂಸ್ಥಾನೀ ಸಂಗೀತ, ನರ್ತನ-ಮುಂತಾದ ಭಾರತದ ಮುಖ್ಯ ಶಾಸ್ತ್ರೀಯ ಕಲೆಗಳ ಆಧುನಿಕ ರೂಪಗಳಿಗೆ ನಾಂದೀ ವಾಚನವನ್ನು ಮಾಡಿದ ಆದ್ಯಾಚಾರ್ಯ ಪುಂಡರೀಕ. ಸಂಗೀತ-ನೃತ್ಯಗಳನ್ನು ಉತ್ತರಭಾರತದಲ್ಲೂ ಪ್ರಚಾರ ಮಾಡಿ ಮಹಾವಿದ್ವಾಂಸನೆನಿಸಿಕೊಂಡ ಈತನು ಕನ್ನಡಿಗನೆನ್ನಲು ಬಹಳಷ್ಟು ಹೆಮ್ಮೆ. ಪುರಂದರದಾಸರ ಸಮಕಾಲೀನ ಕೂಡ ! ಹೀಗಾಗಿ ಪುರಂದರದಾಸರನ್ನು ಕರ್ಣಾಟಕ ಸಂಗೀತ ಪಿತಾಮಹ ಎಂದರೆ, ಪುಂಡರೀಕ ವಿಠಲನನ್ನು ಕರ್ಣಾಟಕ ಸಂಗೀತ-ನೃತ್ಯ ಲಕ್ಷಣಗಳ ಪಿತಾಮಹನೆನ್ನಲು ಅಡ್ಡಿಯಿಲ್ಲ ಎನ್ನುತ್ತಾರೆ ವಿಮರ್ಶಕರು.
ಪುಂಡರೀಕ ವಿಠಲನು ಹುಟ್ಟಿದ್ದು ಕರ್ನಾಟಕದ ಶಿವಗಂಗೆ ಕ್ಷೇತ್ರದ ಬಳಿಯಿರುವ ಸಾತನೂರು ಗ್ರಾಮದಲ್ಲಿ. ಹದಿನಾರನೆಯ ಶತಮಾನದ ಮಧ್ಯಭಾಗ ಈತನ ಕಾಲ. ಸಾತನೂರಿನ ವಿಠಲರಾಯಸ್ವಾಮಿ ಈತನ ಕುಲದೈವ. ಜಮದಗ್ನಿ ಗೋತ್ರಕ್ಕೆ ಸೇರಿದ ಭಾಗವತ ಶಿರೋಮಣಿ ಎನಿಸಿಕೊಂಡಿದ್ದ ವಿಠಲಯ್ಯ(ವಿಠಲಾರ್ಯ) ಮತ್ತು ದೇಮಕ್ಷ(ದೇಮಕ್ಕ, ದ್ಯಾಮಕ್ಕ) ಈತನ ತಂದೆ ತಾಯಿಯರು. ಈತನಿಗೆ ಪಂಡರೀವಿಠ್ಠಲ ಎಂಬ ಹೆಸರೂ ಇದೆ.
ಒಮ್ಮೆ ಸಂಗೀತದ ಹಿರಿಮೆಯನ್ನು ಪ್ರಚಾರ ಮಾಡಲು ಪುಂಡರೀಕನು ಉತ್ತರಭಾರತದಲ್ಲಿ ಸಂಚರಿಸುತ್ತಿದ್ದಾಗ ಅಕ್ಬರನ ಸಾಮಂತ ರಾಜರುಗಳಾದ ಬುರಹಾನಖಾನ್, ಮಾಧವಸಿಂಹ ಇವರುಗಳ ಭೇಟಿಯಾಯಿತು., ಈತನ ವಿದ್ವತ್ತನ್ನು ಮನಗಂಡು ಅವರು ತಮ್ಮ ಆಸ್ಥಾನದಲ್ಲಿ ಆಶ್ರಯಕೊಟ್ಟರು ಮತ್ತು ಈತನು ಕಲಿತ ವಿದ್ಯೆ-ಪ್ರಯೋಗಗಳನ್ನು ಸಮನ್ವಯಗೊಳಿಸಿ ಗ್ರಂಥ ರಚಿಸಿ ಸಂಗೀತ ಪ್ರಪಂಚಕ್ಕೆ ಉಪಕರಿಸಬೇಕೆಂದು ಕೇಳಿಕೊಂಡರು. ಪರಿಣಾಮವೇ, ಸದ್ರಾಗಚಂದ್ರೋದಯ ಮತ್ತು ರಾಗಮಂಜರಿ ಗ್ರಂಥಗಳು. ಇವುಗಳಲ್ಲಿ ಸದ್ರಾಗಚಂದ್ರೋದಯ ಕರ್ಣಾಟಕ ಸಂಗೀತದ ರಾಗಪ್ರಪಂಚವನ್ನು ಸ್ವರ, ಸ್ವರಮೇಲ, ಆಲಪ್ತಿಯೆಂಬ ಮೂರು ಭಾಗಗಳಲಿ ಹಿಡಿದಿಟ್ಟಿರುವ ಒಟ್ಟು ೨೭೮ ಶ್ಲೋಕಗಳ ಗ್ರಂಥ. ರಾಗಮಂಜರೀ ೧೫೪ ಶ್ಲೋಕಗಳನ್ನು ಹೊಂದಿರುವ ಹಿಂದೂಸ್ಥಾನೀ ರಾಗಗಳ ಗ್ರಂಥ.
ನಂತರ ಕಾಲಾಂತರದಲ್ಲಿ ಅಕ್ಬರನ ಆಸ್ಥಾನದಲ್ಲೂ ಪ್ರಮುಖ ವಿದ್ವಾಂಸನೆನಿಸಿ ಅವನ ಅಪೇಕ್ಷೆಯಂತೆ ರಾಗಮಾಲಾ ಮತ್ತು ನರ್ತನ ನಿರ್ಣಯ ಅಥವಾ ನರ್ತಕ ನಿರ್ಣಯವನ್ನು ರಚಿಸಿದ. ಇದರಲ್ಲಿ ನರ್ತನ ನಿರ್ಣಯದ ಕೆಲವು ಭಾಗಗಳು ಸಂಗೀತಕ್ಕೆ ಸಂಬಂಧಿಸಿವೆಯಾದರೂ ಪ್ರಧಾನ ಅಧ್ಯಾಯಗಳು ನೃತ್ಯಕ್ಕೆ ಸಂಬಂಧಿಸಿದೆ. ಓಟ್ಟು ೧೮೬೦ ಶ್ಲೋಕಗಳ ಗ್ರಂಥವಿದು. ೨೧೨ ಶ್ಲೋಕಗಳ ರಾಗಮಾಲಾ ಹಿಂದೂಸ್ಥಾನೀ ಸಂಗೀತ ಪ್ರಪಂಚವನ್ನು ವಿವರಿಸುತ್ತದೆ. ಮಾತ್ರವಲ್ಲದೆ ಎಲ್ಲಾ ಕಲೆಗಳಲ್ಲಿ ಈತನ ಪರಿಶ್ರಮ ಮನಗಂಡು ಅಕ್ಬರನು ಅಕಬರೀಯ ಕಾಲಿದಾಸ ಎಂಬ ಬಿರುದನ್ನು ಕೊಟ್ಟು ಗೌರವಿಸಿದನೆನ್ನಲಾಗಿದೆ.
ಈ ಎಲ್ಲಾ ಕುಲ-ಗೋತ್ರ ಪ್ರವರಗಳನ್ನು ಮಾತ್ರ ಪುಂಡರೀಕನು ಗ್ರಂಥಗಳಲ್ಲಿ ಹೇಳಿದ್ದಾನೆಯೇ ಹೊರತು ಸಂಗೀತ-ನೃತ್ಯ ಶಾಸ್ತ್ರಗಳನ್ನು ಎಲ್ಲಿ, ಯಾರಿಂದ ಕಲಿತನೆಂದು ಸೂಚಿಸಿಲ್ಲ. ಆದರೆ ಸಾತನೂರಿನ ಸುತ್ತಮುತ್ತಲಿನ ಪರಿಸರಗಳಾದ ಕುಣಿಗಲ್, ಬಿಜಾಪುರ, ಮಾಗಡಿ, ಮೈಸೂರು ಹಿಂದಿನ ಕಾಲದಿಂದಲೂ ಸಂಗೀತ-ನೃತ್ಯ ಪರಿಸರಗಳಾಗಿದ್ದು ಉಚ್ಛ್ರಾಯ ಸ್ಥಿತಿಯಲ್ಲಿದ್ದುದ್ದರಿಂದ ಈತನಿಗೆ ಎಲ್ಲಾ ಶಾಸ್ತ್ರಗಳ ಪರಿಚಯ ಸುಲಭಸಾಧ್ಯವಾಗಿದ್ದಿರಬಹುದು.
ಪುಂಡರೀಕ ವಿಠಲನು ರಚಿಸಿದ ಗ್ರಂಥಗಳು ಒಟ್ಟು ಆರು. ರಾಗಮಾಲಾವು ನರ್ತನನಿರ್ಣಯದಿಂದ ಉಲ್ಲೇಖಗೊಂಡಿರುವುದರಿಂದ ಇದನ್ನು ಪ್ರತ್ಯೇಕ ಗ್ರಂಥ ಎನ್ನಲಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಉಳಿದ ಗ್ರಂಥಗಳಲ್ಲಿ ದೂತಿಕರ್ಮವೆಂಬ ಗ್ರಂಥ ದೂತಿ, ನಾಯಕ-ನಾಯಿಕಾ ಭಾವಗಳನ್ನು ವಿವರಿಸಿದ್ದರೆ, ಶೀಘ್ರಭೋಧಿನೀ ನಾಮಮಾಲಾ ಎಂಬುದು ಕೋಶ ಗ್ರಂಥ. ವ್ಯಾಕರಣದ ಛಂದೋಗತಿ, ವೃತ್ತ, ಗಣ, ಅಲಂಕಾರಗಳನ್ನು ಬಳಸಿ ಎಲ್ಲಾ ಗ್ರಂಥಗಳನ್ನು ರಚಿಸಲಾಗಿದೆ.
ಈತನ ಗ್ರಂಥಗಳಿಂದ ಪ್ರಭಾವಿತರಾದ ಶ್ರೀಕಂಠ, ಭಾವಭಟ್ಟ, ತುಲಜೇಂದ್ರರು ಮುಂದೆ ತಮ್ಮದೇ ಆದ ಸಂಗೀತ ಲಾಕ್ಷಣಿಕ ಗ್ರಂಥಗಳನ್ನು ಬರೆದರು. ನರ್ತನನಿರ್ಣಯದ ಹಸ್ತಪ್ರತಿಗಳು ಕಲ್ಕತ್ತ, ಮೈಸೂರು, ಬರೋಡಾ, ತಂಜಾವೂರುಗಳಲ್ಲಿದ್ದು ಇವುಗಳ ಆಧಾರದಿಂದ ನರ್ತನನಿರ್ಣಯವನ್ನೂ ಸಂಪಾದಿಸಿ ಪ್ರಕಟಿಸಲಾಯಿತು., ಮುಂಬೈಯಲ್ಲಿ ೨೦ನೇ ಶತಮಾನದ ೧೯೧೨-೧೩-೧೪ರ ಕಾಲದಲ್ಲೇ ಸದ್ರಾಗ ಚಂದ್ರೊದಯ, ರಾಗಮಂಜರೀ, ರಾಗಮಾಲಾಗಳನ್ನು ಸಂಪಾದಿಸಿ ಪ್ರಕಟಿಸಲಾಗಿತ್ತು. ಪುಂಡರೀಕನ ಗ್ರಂಥಗಳ ಮೂಲಪ್ರತಿ ಸಂಸ್ಕೃತದಲ್ಲಿದ್ದರೂ, ಈ ಅತ್ಯಮೂಲ್ಯ ಗ್ರಂಥಗಳನ್ನು ಸಂಪಾದಿಸಿ, ಕನ್ನಡದಲ್ಲಿ ವಿಮರ್ಶಾತ್ಮಕ ಪೀಠಿಕೆ, ಅನುವಾದ, ವ್ಯಾಖ್ಯಾನ, ಅನುಬಂಧ ಬರೆದವರು ಖ್ಯಾತ ನೃತ್ಯ ವಿದ್ವಾಂಸ ಡಾ| ರಾ. ಸತ್ಯನಾರಾಯಣ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ೧೯೮೬ರಲ್ಲಿ ಈ ನಾಲ್ಕೂ ಗ್ರಂಥಗಳನ್ನು ಪುಂಡರೀಕಮಾಲಾ ಎಂಬುದಾಗಿ ಸಮಗ್ರ ಗ್ರಂಥದಲ್ಲಿ ಹಿಡಿದಿಟ್ಟಿದ್ದು, ಸಂಗೀತ-ನೃತ್ಯಕ್ಕೆ ಸರ್ವಕಾಲೀನ ಗ್ರಂಥವೆನಿಸಿಕೊಂಡಿದೆ.