Author: ಮನೋರಮಾ. ಬಿ.ಎನ್
ಶ್ರೀಧರ್ ಅವರನ್ನು ಯಾರಿಗೆ ತಾನೇ ತಿಳಿದಿಲ್ಲ? ಚಲನಚಿತ್ರ ಕಲಾವಿದರಾಗಿ, ಹೆಸರಾಂತ ಭರತನಾಟ್ಯ ಪಟುವಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಜನಜನಿತ. ಪತ್ನಿ ಅನುರಾಧಾ ಶ್ರೀಧರ್ ಅವರ ಜೊತೆಗೂಡಿ ಅವರು ನಡೆಸಿಕೊಟ್ಟ ಕಾರ್ಯಕ್ರಮಗಳು, ನೃತ್ಯ ವೈವಿಧ್ಯಗಳು, ಉಪನ್ಯಾಸ-ಕಾರ್ಯಗಾರಗಳು ಸುಮಾರು ೨೦೦೦ ಕ್ಕಿಂತಲೂ ಹೆಚ್ಚು. ಬೆಂಗಳೂರಿನಲ್ಲಿ ಖೇಚರ ಅಕಾಡೆಮಿ ಆಫ್ ಭರತನಾಟ್ಯಂ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನೃತ್ಯಲೋಕದ ಆರಾಧನೆ ನಡೆಸುತ್ತಿರುವ ಇವರು, ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳ ಸಾರಸತ್ವವನ್ನು ತಮ್ಮ ನೃತ್ಯರೂಪಕಗಳಲ್ಲಿ ಸಮರ್ಥವಾಗಿ ನಿರ್ವಹಿಸಿ ವಿದೇಶಗಳಲ್ಲಿಯೂ ಕಂಪನ್ನು ಹರಡಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ! ಶ್ರೀಧರ್-ಅನುರಾಧಾಶ್ರೀಧರ್ ನೃತ್ಯಜೋಡಿ ರಂಗಕ್ಕೆ ಕಾಲಿಟ್ಟಿತೆಂದರೆ ಎಲ್ಲರ ಕಣ್ಣುಗಳೂ ಅರಳುತ್ತವೆ. ಇವರು ಈ ತಿಂಗಳ ದರ್ಶನ ಭ್ರಮರಿಯಲ್ಲಿ ನಿಮ್ಮ ಮುಂದೆ ಅತಿಥಿಯಾಗಿ….
೧. ಸಾಮಾನ್ಯ ಪ್ರೇಕ್ಷಕನಿಗೆ ನೃತ್ಯ ಮಾಧ್ಯಮ ಯಾವಾಗ ಮತ್ತು ಹೇಗೆ ಪರಿಣಾಮಕಾರಿಯಾಗಿ ಸಂವಹನವಾಗಬಲ್ಲುದು?
ನೂರು ಮಾತಿಗಿಂತ ದೇಹಭಾಷೆ ಪರಿಣಾಮಕಾರಿ. ಎಲ್ಲಾ ವಿಷಯಗಳನ್ನು ಮಾತಿನಿಂದ ಹೇಳಲಿಕ್ಕಾಗುವುದಿಲ್ಲ. ಆಗ ಸೂಕ್ತವಾದ ದೇಹಭಾಷೆ ಸಂವಹನಕ್ಕ್ಲೆ ಹೆಚ್ಚು ಸಹಕರಿಸುತ್ತದೆ. ಆದರೆ ಸಾಮಾನ್ಯ ಪ್ರೇಕ್ಷಕನಿಗೆ ನೃತ್ಯದ ಮೂಲಕ ಅನುಭವಗಳನ್ನು ಸಂವಹಿಸಬೇಕೆಂದಾದರೆ ಆಗ ಆಂಗಿಕ, ಸಾತ್ವಿಕದ ಬಂಧ ಮುಖ್ಯ. ಸಾತ್ವಿಕ ಇಲ್ಲದ ಆಂಗಿಕ ನಿರರ್ಥಕ. ಅಭಿನಯದ ಮೂಲಕ ಸಂವಹನ ಮಾಡುವುದಾದರೆ ಸತ್ವ ಎನ್ನುವುದು ಪ್ರಮುಖ. ವ್ಯಕ್ತಿಯು ತನ್ನ ಅಭಿನಯವನ್ನು ತಾನೇ ಮೊದಲು ಅನುಭವಿಸಬೇಕು. ಇಲ್ಲದೇ ಹೋದರೆ ಪ್ರೇಕ್ಷಕರಿಗೆ ತಲುಪುವುದಾದರೂ ಹೇಗೆ? ಆಗ ಆಂಗಿಕ ಭಾಷೆ ವ್ಯಾಯಾಮದಂತಾಗಿ ನಿರರ್ಥಕ ಆಗುತ್ತದೆ. ಪಾತ್ರದ ಅನುಭವ, ಲಕ್ಷಣಗಳನ್ನು ಅನುಭವಿಸುತ್ತಾ ಮಾಡಿದರೆ ಮಾತ್ರ, ಕಲಾವಿದ ಪ್ರೇಕ್ಷಕನನ್ನು ತಲುಪಬಲ್ಲ. ಅದು ಅಂತರಂಗದಿಂದ ಅಭಿನಯ ಹುಟ್ಟಿದಾಗಲಷ್ಟೇ ಸಾಧ್ಯ.
ಉದಾ: ದೇವತೆಗಳನ್ನು ಅವರುಗಳ ಆಯುಧದ ಮೂಲಕ ಗುರುತಿಸಿ ಅವರುಗಳಿಗಾಗಿ ಹಸ್ತಗಳನ್ನು ಮಾಡಲಾಗಿದೆ. ಆದರೆ ಬರಿಯ ಹಸ್ತಗಳನ್ನಷ್ಟೆ ಪ್ರರ್ದಶಿಸಿದರೆ ಅದು ಸರಿಯಾಗಿ ಸಂವಹನವಾಗಲಾರದು. ಬದಲಾಗಿ ಪಾತ್ರದ ಸ್ವಭಾವ, ಹವ್ಯಾಸಗಳು ಅಭಿನಯದಲ್ಲಿ ಕೂಡಿಬರಬೇಕು. ವಸ್ತು ಅಥವಾ ಆಯುಧ ಹಿಡಿದುಕೊಂಡ ವ್ಯಕ್ತಿಯನ್ನು ಗಮನಕ್ಕೆ ತರುವ ಹಾಗಿರಬೇಕು. ಈ ಮಾತು ವಾಚಿಕಕ್ಕೂ ಅನ್ವಯವಾಗುತ್ತದೆ. ವಾಚಿಕಕ್ಕೂ ಸಾತ್ವಿಕದ ಸಹಕಾರ ಬೇಕೇಬೇಕು. ಆಗ ಆ ಮಾಧ್ಯಮಕ್ಕೂ ಅರ್ಥ ಬರುತ್ತದೆ.
ನೃತ್ಯಗುರುಗಳು ನೃತ್ಯ ಕಲಿಸುವಾಗ ಮೊದಲು ಹಸ್ತಭಾಷೆಯನ್ನು ಹೇಳಿಕೊಟ್ಟು ಅದರಂತೆಯೇ ವಿನಿಯೋಗಗಳನ್ನು ನೃತ್ಯದಲ್ಲಿ ಬಳಕೆ ಮಾಡಬೇಕೆಂದು ಹೇಳುತ್ತಾರೆ. ಕಾರಣ, ವಿದ್ಯಾರ್ಥಿಗಳಿಗೆ ನಾಯಕ ನಾಯಕಿಯರ ಅಭಿವ್ಯಕ್ತಿಗೆ ಬೇಕಾದ ಜೀವನಾನುಭವ ಇರುವುದಿಲ್ಲ. ಆ ಅನುಭವ ಇಲ್ಲದೆ ರಸ-ಭಾವಗಳ ಸೂಕ್ತ ಅಭಿವ್ಯಕ್ತಿ ಅಸಾಧ್ಯ.
ವಿರಹ ಮುಂತಾದ ವಿಷಯಗಳನ್ನು ಚಿಕ್ಕ ಮಕ್ಕಳು ಅನುಭವಿಸಿ ಮಾಡಲಾರವು. ಆzರಿಂದ ಹಸ್ತಭಾಷೆಗಳ ಮುಖಾಂತರ, ಅಂಗಾಂಗ ಚಲನೆಯ ಸಹಾಯದಿಂದ, ಅವರನ್ನು ದೈಹಿಕವಾಗಿ ನೃತ್ಯಕ್ಕೆ ಸಿದ್ಧಮಾಡಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಆಂಗಿಕವೇ ಪ್ರಮುಖ. ಆದರೆ ಸಾತ್ವಿಕವೇ ಅಂತಿಮ. ವಾಚಿಕ, ಆಂಗಿಕ, ವೇಷಭೂಷಣಗಳು ಸಾತ್ವಿಕಕ್ಕೆ ಪೂರಕ. ಪಾತ್ರದ ಒಳಗೆ ಹೊಗುತ್ತಾ, ಹೋಗುತ್ತಾ ಸಾತ್ವಿಕ ಅಭಿನಯಕ್ಕೆ ಹೆಚ್ಚು ಮಹತ್ವ ಕೊಟ್ಟಾಗ ನೃತ್ಯವನ್ನು ಕಲಾವಿದ ಪ್ರೇಕ್ಷಕರ ಬಳಿಗೆ ಕೊಂಡೊಯ್ಯಬಲ್ಲ. ಅದಿಲ್ಲದೇ ಬರಿಯ ಹಸ್ತಚಲನೆ, ವೇಷಭೂಷಣಗಳಿಂದಷ್ಟೇ ಭಾವವನ್ನು ವ್ಯಕ್ತಪಡಿಸಲು ಹೊರಟರೆ ಅಪ್ರಬುದ್ಧವೆನಿಸಿಕೊಳ್ಳುತ್ತದೆ.
ಸಾತ್ವಿಕಕ್ಕೆ ಮಹತ್ವ ಕೊಟ್ಟಂತೆಲ್ಲಾ ಅಂದರೆ ಮನಸ್ಸಿನ ಭಾವನೆ, ತಾದಾತ್ಮ್ಯತೆಯನ್ನು ಒಳಗೊಳ್ಳುತ್ತಾ ಹೋದಂತೆ ಕ್ರಮೇಣ ಇತರ ಹಸ್ತ, ಚಲನೆ, ಭಂಗಿಗಳು ಗೌಣವಾಗಲೇಬೇಕು. ಸಾತ್ವಿಕದ ಮೇಲೆ ಅವಲಂಬನೆ ಹೆಚ್ಚಾದಂತೆ ಉಳಿದವುಗಳ ಮೇಲಿನ ಅವಲಂಬನೆ ಕಡಿಮೆ ಆಗುತ್ತದೆ. ಹಾಗೆಂದು ಹಸ್ತಕ್ಷೇತ್ರ, ಪಾದ ಚಲನೆಗಳನ್ನು ನಿರ್ಲಕ್ಷಿಸಹೊರಟರೆ ದೇಹದ ಆಂಗಿಕ ಲಯ ತಪ್ಪುತ್ತದೆ. ಆಂಗಿಕ ವಿನ್ಯಾಸಗಳನ್ನು ನಿರ್ಲಕ್ಷಿಸುವುದೂ ಒಳಿತಲ್ಲ. ಹದವಾದ ಸಮ್ಮಿಲನ ನೃತ್ಯದಲ್ಲಿ ಮೂಡಬೇಕು.
೨. ಪರಂಪರೆಯಿಂದ ಬಂದದ್ದನ್ನು ತನ್ನ ಅನುಭವಕ್ಕೆ ಅನುಸಾರವಾಗಿ ಕಲಾವಿದ ಬದಲಾವಣೆ ಮಾಡಿಕೊಳ್ಳಬಹುದೇ? ಮಾಡಿಕೊಳ್ಳಬಹುದು ಎನ್ನುವುದಾದರೆ ಎಷ್ಟು ಸರಿ?
…ಬದಲಾವಣೆಗಳು ತಪ್ಪಲ್ಲ. ನಾಟ್ಯಶಾಸ್ತ್ರ, ಅಭಿನಯ ದರ್ಪಣಗಳ ಬಹಳಷ್ಟು ವಿಷಯಗಳಲ್ಲೇ ಬದಲಾವಣೆಗಳಾಗಿರುವುದನ್ನು ಕಾಣಬಹುದು. ಏಕೆಂದರೆ ನೃತ್ಯಾದಿ ಕಲೆಗಳು ಶ್ರುತಿ ಪರಂಪರೆಯವು; ಅಂದರೆ ಗುರುಗಳಿಂದ ಶಿಷ್ಯರಿಗೆ, ಅವರಿಂದ ಮತ್ತವರ ಶಿಷ್ಯರಿಗೆ…ಹೀಗೆ ಬೋಧಿಸಿಕೊಂಡು ಬಂದ ಕಲೆಯಾದ್ದರಿಂದ ಕಾಲಾಂತರದಲ್ಲಿ ಬದಲಾವಣೆಗಳಾಗಿರುವ ಸಂಭವಗಳಿವೆ.
ಸ್ಥಳ, ಸ್ಥಿತಿಗಳಿಗನುಗುಣವಾಗಿ ಕಲೆಯೊಂದರ ವಸ್ತುವಿಶೇಷಗಳನ್ನು ಅರ್ಥೈಸಿಕೊಳ್ಳುವ ಶಕ್ತಿಯೂ ಬದಲಾಗುತ್ತಾ ಸಾಗುತ್ತದೆ. ಅದರಲ್ಲೂ ಪಾತ್ರಗಳ ಔಚಿತ್ಯ, ಹಿನ್ನೆಲೆಗನುಗುಣವಾಗಿ ಸ್ಥಿತ್ಯಂತರಗಳೇರ್ಪಡುತ್ತವೆ. ಹಾಗಾಗಿ ಬದಲಾಗುವ ಕಾಲಘಟ್ಟದಲ್ಲಿ ಬದಲಾವಣೆಗಳೂ ಅನಿವಾರ್ಯ. ಆದರೆ ಕಲಾವಿದ ಈ ರೀತಿ ವಿಸ್ತರಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಾಗ ಚಿಂತನೆ, ಅವಲೋಕನವೂ ಆಗಬೇಕು.
ಇನ್ನು ಈ ಬದಲಾವಣೆ ಎಷ್ಟು ಸರಿ ಎನ್ನುವುದಾದರೆ.., ಕಲೆ ಮತ್ತು ಅದರ ಪ್ರಗತಿ ಸಮಕಾಲೀನ. ಹಾಗಾಗಿ ಶಾಸ್ತ್ರವಿರುದ್ಧ ಎಂಬುದು ಯಾವುದು ಇಲ್ಲ. ಸಂಸ್ಕೃತಿಯೆಂಬ ಭಾಷೆಯಲ್ಲೇ ಹಲವು ಬದಲಾವಣೆಗಳಾಗಿವೆ. ಈಗ ನಾವು ಆಚರಿಸುತ್ತಿರುವ ಸಂಪ್ರದಾಯವಾದರೂ, ಶಾಸ್ತ್ರವಾದರೂ ನಮ್ಮ ಇತ್ತೀಚೆಗಿನ ಹಿಂದಿನ ಇತಿಹಾಸ ಅಷ್ಟೆ! ಹಾಗೆ ನೋಡುವಾಗ ಈಗ ಆಚರಿಸುವ ದಿನನಿತ್ಯದ ಎಷ್ಟೋ ಸಂಪ್ರದಾಯಗಳು ೨೦೦೦ ವರ್ಷದ ಹಿಂದೆ ಬೇರೆಯೇ ಇದ್ದಿರಬಹುದಲ್ಲಾ! ಹಾಗಾಗಿ ವಸ್ತುಸ್ಥಿತಿಗೆ ತಕ್ಕಂತೆ, ಶಾಸ್ತ್ರದ ಮೂಲ ಆಶಯ-ಅಧ್ಯಯನಕ್ಕೆ ಧಕ್ಕೆ ಬಾರದ ರೀತಿಯಲ್ಲಿ, ಪ್ರೇಕ್ಷಕರಿಗೆ ಅರ್ಥವಾಗುವಂತೆ ಬದಲಾವಣೆ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ.
ಉದಾ: ಮುಷ್ಟಿ ಹಸ್ತವನ್ನು ಸ್ಕೂಟರ್, ಕಾರು ಬಿಡುವಂತೆ ಉಪಯೋಗಿಸಿಕೊಂಡರೂ ಅದು ಇಂದಿನ ವಾಹನ ಎಂಬ ಸೂಚನೆಗೆ ಸಮರ್ಥನೀಯವೂ, ಅರ್ಥಗ್ರಾಹ್ಯವೂ ಆಗಿರುತ್ತದೆ. ಹಾಗಾಗಿ ಶಾಸ್ತ್ರ ಬಿಟ್ಟು ಹೋಗುವುದು ಎಂಬ ಮಾತಿನಲ್ಲಿ ಹುರುಳಿಲ್ಲ. ನಾವು ನಮ್ಮ ಮಹಾಭಾರತದ ಗದಾಯುದ್ಧ ಭಾಗದಲ್ಲಿ ಕರಾಟೆಯ ಪಟ್ಟುಗಳನ್ನು ನೃತ್ಯಸಂಬಂಧಿಯಾಗಿ ಬಳಸಿಕೊಂಡಿದ್ದೇವೆ. ಅದು ಇನ್ನಷ್ಟು ಪರಿಣಾಮಕಾರಿ ನೃತ್ಯ ಚಲನೆ, ಸಂವಹನ ಕೊಡುತ್ತದೆ. ಹಾಗಾಗಿ ಸೃಜನಶೀಲತೆ, ಅಧ್ಯಯನದ ಮುಖಾಂತರ ಕಲಾವಿದ ಹೊಸ ಅರ್ಥಗಳನ್ನು ಕಂಡುಕೊಳ್ಳಬಹುದು. ಅಷ್ಟಕ್ಕೂ ಹಿನ್ನೆಲೆಯನ್ನು ಸರಿಯಾಗಿ ನಿರೂಪಿಸಬೇಕು. ಕಲಾವಿದನ ಸ್ವಾನುಭವ, ಪರಿಶ್ರಮ, ಸಾಮಾನ್ಯ ಪ್ರಜ್ಞೆ ಮೇಳೈಸಬೇಕು. ಅಷ್ಟಕ್ಕೂ ನೃತ್ಯ ಮೂಕ ಭಾಷೆಯ ತರಹದ್ದೇನೂ ಅಲ್ಲವಲ್ಲ!…
೩. ಶಾಸ್ತ್ರೀಯ ನೃತ್ಯಗಳು ದೈವೀಕವಾದುದು, ಭಗವಂತನಿಂದ ಬಂದುದು ಎಂಬ ಕಲ್ಪನೆಯ ಮೂಲೋದ್ದೇಶವೇನು?
ಮೊದಲಿನಿಂದಲೂ ಜನರಿಗೆ, ದೊಡ್ಡದು ಎನ್ನುವ ಕಲ್ಪನೆ ದೇವರಿಂದ ಬಂದದ್ದು ಎಂದೇ ಇದೆ. ಒಂದು ವೇಳೆ ಹಾಗನ್ನದಿದ್ದರೆ ಅದು ಸಾಮಾನ್ಯವಾಗಿಯೇ ಹೋಗಿಬಿಡಬಹುದೇನೋ ಎಂಬ ಆತಂಕ. ಇದನ್ನು ಮನಗಂಡೇ ಪಾರಂಪರಿಕರು ವಿಶೇಷವಾದುದ್ದನ್ನು ಶಾಸ್ತ್ರ, ದೈವಿಕತೆಗೆ ಸಮೀಕರಿಸಿದರು. ದೈವಿಕ ಎಂದು ಹೇಳುವುದಕ್ಕೋಸ್ಕರ ಅಥವಾ ಒಂದು ವಿಶೇಷವಾದುದನ್ನು ಸಾಮಾನ್ಯವಾದುದಲ್ಲ ಎನ್ನಲು ಅದಕ್ಕೊಂದು ಶಾಸ್ತ್ರವನ್ನು ರಚಿಸಿದರು.
ಹಾಗೆ ನೋಡಿದರೆ ಸಾಮಾನ್ಯ ಜೀವನದ ಎಷ್ಟೋ ಅಂಶಗಳು ಭರತನಾಟ್ಯಕ್ಕೆ ನಿಕಟವರ್ತಿಯಾಗಿದೆ. ಅದರ ಸಂದರ್ಭೋಚಿತ, ಪಾತ್ರೋಚಿತ ಮತ್ತು ಉತ್ತಮ ನಿಭಾಯಿಸುವಿಕೆಗಾಗಿ ಶಾಸ್ತ್ರಗಳು ಸಹಕರಿಸುತ್ತವೆ. ಯಾವುದೇ ಕಲೆಯಾದರೂ ಅದು ಜೀವನದ ಸಾಂಕೇತಿಕ ಪ್ರತಿನಿಧಿ ಮತ್ತು ಸಾಕ್ಷಾತ್ಕಾರ ಪ್ರಕ್ರಿಯೆಗೆ ಪೂರಕ. ಜೀವನವನ್ನು ನೋಡಿ ಭರತನಾಟ್ಯವಾಗಲೀ, ಶಾಸ್ತ್ರವಾಗಲೀ ಬಳಕೆಗೆ ಬಂದಿದೆಯೇ ಹೊರತು ಶಾಸ್ತ್ರವನ್ನು ರೂಪಿಸಿ ಜೀವನವನ್ನು ಕಟ್ಟಿಕೊಂಡದ್ದಲ್ಲ…