ಅಂಕಣಗಳು

Subscribe


 

ವಿದುಷಿ ಬಿ. ಕೆ. ವಸಂತಲಕ್ಷ್ಮಿ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಸಾದಿರ್ ಪದ್ಧತಿಯ ನೃತ್ಯಕ್ಕೆ ಭರತನಾಟ್ಯವೆಂಬ ಶುದ್ಧ ರೂಪವನ್ನು ಕೊಟ್ಟ ತಮಿಳ್ನಾಡಿನ ಕಲಾಕ್ಷೇತ್ರದ ಗುರು ರುಕ್ಮಿಣೀದೇವಿ ಅರುಂಡೇಲ್ ಮತ್ತು ಮೈಸೂರು ಶೈಲಿಯ ಅಗ್ರ ಗುರು ವೆಂಕಟಲಕ್ಷ್ಮಮ್ಮ ಅವರ ಶಿಷ್ಯರುಗಳಲ್ಲಿ ಬಿ. ಕೆ. ವಸಂತಲಕ್ಷ್ಮಿ ಅವರದ್ದು ಮೊದಲ್ಪಂಕ್ತಿಯ ಹೆಸರು. ಭರತನಾಟ್ಯದ ಹಿರಿಯ ಗುರು ಕೇಶವ ನೃತ್ಯಶಾಲಾದ ದಿವಂಗತ ಎಚ್. ಆರ್. ಕೇಶವಮೂರ್ತಿ ಅವರ ಪುತ್ರಿ. ಬೆಂಗಳೂರು ವಿಶ್ವವಿದ್ಯಾನಿಲಯದ ಭರತನಾಟ್ಯ ಸ್ನಾತಕೋತ್ತರ ಕಲಾಪ್ರದರ್ಶನ ವಿಭಾಗದ ಉಪನ್ಯಾಸಕರಾಗಿ, ಮಾಧ್ಯಮಿಕ ನೃತ್ಯ ಪರೀಕ್ಷಾ ಪಠ್ಯಪುಸ್ತಕ ರಚನಾ ಸಮಿತಿ ಮತ್ತು ಮೈಸೂರು ವಿಶ್ವವಿದ್ಯಾಲಯದ ಕಲಾ ಪ್ರದರ್ಶನ ವಿಭಾಗದ ಸದಸ್ಯರಾಗಿ ಸೇವೆ. ಹಲವು ಪ್ರತಿಷ್ಟಿತ ಪ್ರಶಸ್ತಿ, ಫೆಲೋಶಿಪ್‌ಗಳೊಂದಿಗೆ‘ಕರ್ನಾಟಕ ಕಲಾಶ್ರೀಗೌರವ. ಪ್ರಸ್ತುತಃ ಬೆಂಗಳೂರಿನಲ್ಲಿ ತಮ್ಮ ವಿಶ್ರುತ ಸ್ಕೂಲ್ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್‌ನ ಮುಖ್ಯಸ್ಥೆಯಾಗಿ ಹಲವು ಶಿಷ್ಯರಿಗೆ ಮೆಚ್ಚಿನ, ಶಿಸ್ತಿನ ಗುರು. ಅವರೀಗ ನಮ್ಮ ಅತಿಥಿ..

೧. ನೃತ್ಯದ ತೀರಾ ಶಾಸ್ತ್ರೀಯತೆಯೇ ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ನೀವೇನಂತೀರಿ?

ಶಾಸ್ತ್ರೀಯವಾಗಿರುವುದಕ್ಕೇ ಅದು ಶಾಸ್ತ್ರೀಯ ನೃತ್ಯ. ಶಾಸ್ತ್ರೀಯ ನೃತ್ಯ ಎಲ್ಲರಿಗೂ ಬೇಗ ಅರ್ಥ ಆಗೋದಿಲ್ಲ ಅಂದಾಕ್ಷಣ ಅದು ನೃತ್ಯದ ದೋಷವಲ್ಲ, ವೀಕ್ಷಕರು ಪೆದ್ದರು ಎಂದರ್ಥವೂ ಅಲ್ಲ. ಜನರಿಗೆ ಅರ್ಥವಾಗೋದಿಲ್ಲ, ಗೊತ್ತಿಲ್ಲ ಎಂಬ ಭಾವವೇ ತಪ್ಪು.

ಗೊತ್ತಿರುವ ಕಥೆಗಳಿಂದ ಹೆಣೆದ ನೃತ್ಯವಾದರೆ, ನೋಡಿ ಬೇಗನೆ ಅರ್ಥ ಮಾಡಿಕೊಳ್ತಾರೆ. ಅಂತಹ ಅಭಿಪ್ರಾಯ ಕಲಿಯದಿದ್ದವರಿಗೆ ಅರ್ಥ ಆಗೋದು ಕಡಿಮೆ ಎಂದದ್ದಕ್ಕಿರಬೇಕೇ ವಿನಃ, ಅರ್ಥ ಆಗುವ ಸಂಭವಗಳು ಕಡಿಮೆ ಎಂದಲ್ಲ. ಕೆಲವೊಮ್ಮೆ ಸೀದಾ ಪಕ್ಕಾ ಶಾಸ್ತ್ರೀಯವಾಗಿ ಮಾಡಿದಾಗ ಅರ್ಥ ಆಗದೇ ಹೋಗುವ ಸಂದರ್ಭಗಳಿರಬಹುದು. ಆದರೆ ಆಸಕ್ತಿಯಿಟ್ಟು ನೋಡಿದರೆ ಅರ್ಥ ಆಗೇ ಆಗುತ್ತದೆ. ಅದರಲ್ಲೂ ವೀಕ್ಷಕರ ಐಕ್ಯೂ ಮೇಲೆ ಅರ್ಥ ಮಾಡಿಕೊಳ್ಳುವ ಶಕ್ತಿಯೂ ನಿರ್ಧರಿತವಾಗಿರುತ್ತದೆ. ಅಷ್ಟಕ್ಕೂ ಕಲಾವಿದೆಯ ನೈಪುಣ್ಯತೆಯೂ ಇಲ್ಲಿ ಪ್ರಮುಖ. ಜೊತೆಗೆ ಗುರುಗಳ ಪಾಠ ಮಾಡುವ ಶೈಲಿ, ಸಾಮರ್ಥ್ಯವೂ ಇಲ್ಲಿ ನಿಗದಿಯಾಗುವ ಅಂಶ.

೨. ನೃತ್ಯದ ಕುರಿತಾಗಿ ಸಮಗ್ರ ವಿವರಣೆ ನೀಡುವುದರಿಂದ ವೀಕ್ಷಕರಿಗೆ ಸಮರ್ಥವಾಗಿ ಅರ್ಥ ಮಾಡಿಸಬಹುದೇ?

ವಿವರಣೆ ಬೇಕು. ಆದರೆ ವಿವರಣೆ ಹೇಳಿಕೊಂಡೇ ನೃತ್ಯವನ್ನು ಪ್ರಸ್ತುತಪಡಿಸುವಂತಾದರೆ ಅದು ನರ್ತಕಿಯ ಅಪರಿಪೂರ್ಣ ಕಲಿಕೆಯನ್ನು ಎತ್ತಿ ತೋರಿಸುತ್ತದೆ. ಜನರಿಗೆ ಅರ್ಥ ಮಾಡಿಸುವುದರಲ್ಲೇ ಸಮಯವನ್ನು ಮುಡಿಪಿಡುವುದಾದರೆ ನೃತ್ಯಸ್ವಾದನೆ ವಿಫಲವಾಗುವುದು ಖಂಡಿತ. ಆದರೆ ಈ ವರೆಗೆ ನಿರ್ದಿಷ್ಟ ನೃತ್ಯ ಕಲೆಯ ಪರಿಚಯ ಅಷ್ಟಾಗಿ ಇಲ್ಲದವರಿಗೆ ಅಥವಾ ನೂತನ ಪ್ರಯೋಗಗಳ ಸಂದರ್ಭದಲ್ಲಿ ವಿವರಣೆ ನೀಡುವುದು ಅಗತ್ಯವಾಗುತ್ತದೆ. ಉದಾ; ವಿದೇಶಗಳಲ್ಲಿ, ಪರ‌ಊರುಗಳಲ್ಲಿ.

ಏಕೆಂದರೆ ಪ್ರೇಕ್ಷಕರಿಗೆ ಸರಿಯಾಗಿ ಸಂವಹನವಾಗದೇ ಹೋದ ಪಕ್ಷದಲ್ಲಿ ನಮ್ಮ ಪ್ರಯತ್ನ ವ್ಯರ್ಥವಾಗುವ ಸಂದರ್ಭಗಳಿರುತ್ತವೆ. ಯಕ್ಷಗಾನದಲ್ಲಾದರೆ ಪದ್ಯದ ಸಾರವನ್ನು ವಿವರವಾಗಿ ವಿಸ್ತರಿಸಲು ಭಾಷೆ ಮುಖ್ಯ. ಹಾಗಂದ ಮಾತ್ರಕ್ಕೆ ಅಲ್ಲಿ ಅಂತಹ ವಿವರಣೆ ಕಡಿಮೆ ಮೌಲ್ಯದ್ದು ಎಂ ಅರ್ಥವಲ್ಲ. ಯಕ್ಷಗಾನದ ಬುನಾದಿ, ಸತ್ವ ಇರುವುದೇ ಅದರ (ಮಾತು) ವಾಚಿಕಾಭಿನಯದಲ್ಲಿ. ಆದರೆ ನೃತ್ಯದಲ್ಲಿ ಹಾಗಲ್ಲ. ಉದಾ: ಸಂಚಾರೀಭಾವ ೧೫ ನಿಮಿಷಕ್ಕಿಂತ ಹೆಚ್ಚಾದರೆ ವೀಕ್ಷಕರಲ್ಲಿ ಅದು ಉದಾಸೀನ ಉಂಟು ಮಾಡಬಲ್ಲುದು.

೩. ಹಾಗಾದರೆ ಅಭಿನಯವೆಂದರೆ ಹೇಗಿರಬೇಕು ಎಂಬುದು ನಿಮ್ಮ ಅಭಿಪ್ರಾಯ?

ಚೆನ್ನಾಗಿ ಡ್ರೆಸ್, ಮೇಕಪ್ ಮಾಡಿಕೊಂಡಾಕ್ಷಣ ಅಭಿನಯ ಆಗೋದಿಲ್ಲ. ಜೊತೆಗೆ ಬರೀ ಹಸ್ತಗಳನ್ನು ಪ್ರದರ್ಶಿಸಿ ಕುಣಿದರೆ ಮಾತ್ರಕ್ಕೆ ನೃತ್ಯ ಆಗೋದಿಲ್ಲ. ಹಸ್ತ, ಪಾದ ಗತಿಗಳ ಮೂಲಕ ನಾವು ಅಭಿನಯಕ್ಕೆ ಅಂದ ಕೊಡುತ್ತೇವೆ. ನೃತ್ಯ ಕಲಿಯುವವರಿಗೆ ಪ್ರಾರಂಭಕ್ಕೆ ಅದೊಂದು ಸಾಧನ ಮಾತ್ರ. ಅದರ ಮೂಲಕ ಅಭಿನಯದ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ವಿಪರ್ಯಾಸವೆಂದರೆ, ಕೆಲವರು ಎಲ್ಲವನ್ನೂ ಅಭಿನಯದಲ್ಲೇ ಮಾಡಿ ಮುಗಿಸ್ತಾರೆ.

ನಾವು ಮಾಡುವ ಅಭಿನಯವನ್ನು ಮೊದಲು ನಾವು ಅನುಭವಿಸಬೇಕು. ನಾವೇ ನಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳದೆ ಹೋದಲ್ಲಿ ಬೇರೆಯವರು ಹೇಗೆ ತಾನೇ ಅರ್ಥ ಮಾಡಿಕೊಂಡಾರು? ಅಭಿನಯಕ್ಕೆ ಅಂದವನ್ನು ರೂಢಿ ಮಾಡಿಕೊಳ್ಳಬೇಕು. ಅದರಲ್ಲೂ ನಿಂತ ಅಭಿನಯಕ್ಕಿಂತ ಚಲನೆಯಿಂದ ಕೂಡಿದ ಅಭಿನಯ ಹೆಚ್ಚು ಆಕರ್ಷಣೀಯ.

ಆದರೆ ಮಾಡುವ ಅಭಿನಯದಲ್ಲಿ ನಿಖರತೆ, ಶಿಸ್ತು, ಭಾವನೆ, ಅಭಿವ್ಯಕ್ತ ಮಾಡುವ ಕ್ರಮವೂ ಅವಶ್ಯ. ಅಷ್ಟಕ್ಕೂ ಸಾಮಾಜಿಕ-ದೈನಂದಿಕ ಜೀವನ ಮತ್ತು ನಾಟ್ಯ ಇವೆರಡೂ ವಿಭಿನ್ನ. ಸಹಜ ಅಭಿನಯ ನೋಡುಗರನ್ನು ಹೆಚ್ಚಾಗಿ ಸೆಳೆಯುತ್ತವೆ. ಅಭಿನಯದ ಪ್ರಬುದ್ಧತೆ ಕಲಾವಿದೆಯ ಕಲ್ಪನಾ ಶಕ್ತಿಯನ್ನು ಅವಲಂಬಿಸಿರುತ್ತದೆ ಮತ್ತು ವಿಸ್ತಾರವಾಗುತ್ತದೆ.

೪.ನೃತ್ಯದಲ್ಲಿ ನವೀನ ಪ್ರಯೋಗಗಳು ಯಾವ ದಿಸೆಯತ್ತ ಇದ್ದರೆ ಒಳಿತು?

ಹೊಸತಿನ ಪ್ರಯೋಗ ಅಭಿನಂದನಾರ್ಹ. ಆದರೆ ಹೊಸತನ್ನು ಮಾಡಿದಾಗ ಅದು ಪರಂಪರೆ, ಮಾರ್ಗ ಪದ್ಧತಿ ಎಂದೋ, ಮಾರ್ಗ ಪದ್ಧತಿ ಮಾಡಿ ಅದು ಹೊಸತು ಎಂದೋ ಬಿಂಬಿಸಲು ಹೋಗಬಾರದಷ್ಟೇ. ಅಷ್ಟಕ್ಕೂ ಪ್ರಾಚೀನ ವಿದ್ವಾಂಸರು ಥಿಯರಿ ಮೂಲಕವಾಗಿಯೇ ಎಲ್ಲವನ್ನೂ ಬಳಕೆ ಮಾಡಲಿಲ್ಲ. ಆದರೆ ಬರಬರುತ್ತಾ ಗುರುಗಳು ತಮ್ಮದೇ ಆದ ರೀತಿಯಲ್ಲಿ ರೂಢಿ ಮಾಡಿಕೊಂಡು ಪದ್ಧತಿಗಳ ಹುಟ್ಟಿಗೆ ಕಾರಣವಾದರು. ನೃತ್ಯದಲ್ಲಿ ಗುರು ಮುಖೇನ ಎಂದಿದ್ದರೂ ಎಲ್ಲವನ್ನೂ ಗುರುಗಳ ಮೇಲೆಯೇ ಅವಲಂಬಿಸಬಾರದು. ಕಲಾವಿದೆ ತನ್ನತನವನ್ನೂ ಅರಿತುಕೊಳ್ಳಬೇಕು. ಸೃಜನಶೀಲತೆಯಿಂಬುದು ಅದನ್ನು ಸಾಧಿಸಿಕೊಳ್ಳುವವರ ಸಾಧನೆಯನ್ನು ಅವಲಂಬಿಸಿದೆ.

೫. ಇಂದಿನ ಪ್ರದರ್ಶನ ಕಲೆಗಳ ಬೆಳವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯ?

ಈಗ ಪರೀಕ್ಷೆ, ರಂಗಪ್ರವೇಶ ಎಲ್ಲವೂ ವ್ಯಾಪಾರೀಕರಣಕ್ಕೆ ತುತ್ತಾಗಿದೆ. ಅದರಲ್ಲೂ ರಂಗಪ್ರವೇಶ ಖರ್ಚಿಗೆ ದಾರಿ. ಯಾರೂ ಅದರ ಅರ್ಥವನ್ನು ತಿಳಿದು ಮಾಡುತ್ತಿಲ್ಲ. ಡ್ರೆಸ್, ಕಾಸ್ಟ್ಯೂಮ್, ಮೇಕಪ್, ಬ್ರೋಷರ್ಸ್, ಆಡಂಬರಕ್ಕೇ ಮೀಸಲಾಗುತ್ತಿದೆ. ಯಾರ ಶಿಷ್ಯೆ?, ಎಷ್ಟು ಖರ್ಚು?, ಊಟ ಹಾಕಿಸಿದ್ರಾ?, ಆಹ್ವಾನ ಪತ್ರಿಕೆ ಹೇಗಿತ್ತು ಎಂಬುದರ ಮೇಲೆಯೇ ಮೌಲ್ಯ ನಿರ್ಧರಿತವಾಗಿದೆಯೇ ವಿನಃ ಕಲಾವಿದೆಯ ಪ್ರತಿಭೆ ಅಲ್ಲ. ಹಾಗೆ ನೋಡಿದರೆ ಸಂಗೀತ ಅಷ್ಟು ಕೆಳ ಮಟ್ಟಕ್ಕಿಳಿದಿಲ್ಲ. ಇಂದಿಗೂ ವೈಯ್ಯಕ್ತಿಕ ಅರ್ಹತೆಯೇ ಕಲಾವಿದೆಯ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಅಷ್ಟರ ಮಟ್ಟಿಗೆ ಸಂಗೀತ ತನ್ನ ಪಾವಿತ್ರ್ಯತೆ ಕಾಪಾಡಿಕೊಂಡಿದೆ.

Leave a Reply

*

code