ಅಂಕಣಗಳು

Subscribe


 

ಲಾವಣಿ – ಮರುಕಳಿಸೀತೇ ವೈಭವ?

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಶ್ರೀಲಕ್ಷ್ಮಿ ಎಂ. ಭಟ್

ಕಳೆದ ಸಂಚಿಕೆಯ ಲೋಕ ಭ್ರಮರಿಯಲ್ಲಿ ನಾವು ನೋಡಿದ್ದು ಲಾವಣಿ ಲೋಕದ ಬಾಹ್ಯ ಮುಖವನ್ನಷ್ಟೇ..ಲಾಸ್ಯ, ನೃತ್ತ, ವೈಭವ, ಬಿಸುಪುಗಳಲ್ಲಿ ಯಾವ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೂ ಕಡಿಮೆ ಇಲ್ಲದ ಈ ನೃತ್ಯ ತನ್ನ ಪ್ರಣಯಾತ್ಮಕ ಶೈಲಿಯಿಂದಾಗಿ ಅನೇಕ ವಿಮರ್ಶಕರ ಕಟುಟೀಕೆಗೂ ಗುರಿಯಾಗಿದೆ. ಅದರತ್ತ ಇದೀಗ ಒಂದು ನೋಟ…

… ಉಳಿದದ್ದೇನೇ ಇರಲಿ, ಲಾವಣಿ ಕಲಾವಿದರ ಖಾಸಗಿ ಬದುಕಿನ ಜಗತ್ತನ್ನೊಮ್ಮೆ ಪ್ರವೇಶಿಸಿದರೆ ಲಾವಣಿ ನರ್ತಕರ ನಗು ಉಲ್ಲಾಸಗಳು ಕೇವಲ ಅವರು ನೃತ್ಯಕ್ಕೆ ಹಾಗೂ ರಂಗಮಂಚಕ್ಕೆ ಕೊಡುವ ಗೌರವವಷ್ಟೇ ಎಂಬ ಸತ್ಯ ಅರಿವಾಗುತ್ತದೆ. ಇಂದು ಮಹಾರಾಷ್ಟ್ರದಲ್ಲಿ ಲಾವಣಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಕಲಾವಿದರ ಸಂಖ್ಯೆ ಸುಮಾರು ಎರಡು ಸಾವಿರ.

ಕಡವತ್, ಡೋರೀ, ಕೈಕಡೀ, ಗೋಂದೋಳಿ, ಡೋಂಬ್ರೀ, ಕೊಲಾಟಿ ಮೊದಲಾದ ಪರಿಶಿಷ್ಟ ಜನಾಂಗಗಳಿಗೆ ಸೇರಿರುವ ಇವರಲ್ಲಿ ಶಾಲೆ-ಕಾಲೇಜು ಶಿಕ್ಷಣ ಪಡೆಯುವವರು ತೀರಾ ವಿರಳ. ಒಮ್ಮೆ ಒಂದು ತಂಡವನ್ನಿವರು ಸೇರಿದರೆಂದರೆ ಕೊನೆಯವರೆಗೂ ಅಲ್ಲೆ ಉಳಿಯುತ್ತಾರೆ. ನವಾರಿ ಸೀರೆಯನ್ನುಟ್ಟು, ಭರ್ಜರಿ ಮೇಕಪ್ ತೊಟ್ಟು ನರ್ತಿಸುವ ಈ ಕಲಾವಿದೆಯರಲ್ಲಿ ಹೆಚ್ಚಿನವರು ಮದುವೆಯಾಗದೇ ನೃತ್ಯದಲ್ಲಿಯೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ.

ಲಾವಣಿ ತಂಡಗಳಿಗೆ ಆ ತಂಡದ ಅತ್ಯುನ್ನತ ನೃತ್ಯಗಾತಿಯ ಹೆಸರನ್ನು ಇಟ್ಟುಕೊಳ್ಳಲಾಗುತ್ತದೆ. ಪ್ರದರ್ಶನಗಳನ್ನು ಏರ್ಪಡಿಸಿದಾಗ ಆ ತಂಡಗಳ ಮುಖ್ಯಸ್ಥರು ಅರ್ಧಕ್ಕಿಂತಲೂ ಹೆಚ್ಚಿನ ಪಾಲು ಲಾಭದ ಹಣವನ್ನು ತಾವೇ ಇಟ್ಟುಕೊಳ್ಳುವುದರಿಂದ ಕಲಾವಿದರಿಗೆ ದಕ್ಕುವ ಹಣ ಅತ್ಯಲ್ಪ. ಅಪರೂಪಕ್ಕೆ ಶ್ರೀಮಂತರು ಏರ್ಪಡಿಸುವ ಖಾಸಗಿ ಪ್ರದರ್ಶನಗಳಿಂದಾಗಿ ಬರುವ ಹಣದಿಂದ ಇವರ ಬದುಕು ತುಸು ಸುಗಮವಾಗಿ ಸಾಗಿದರೂ ಅದನ್ನು ನಂಬಿ ಕೂರುವಂತಿಲ್ಲ. ವೃದ್ಧಾಪ್ಯ ಕಾಲಿಟ್ಟ ನಂತರ ಇವರ ಬದುಕು ನಿಜಕ್ಕೂ ದಯನೀಂii. ಸರಕಾರ ಕೊಡುವ ವೇತನವೂ ಅತ್ಯಲ್ಪ.

ಹಿಂದೆಲ್ಲಾ ಇಲ್ಲಿನ ಆಳುವ ವರ್ಗ ಲಾವಣಿ ನರ್ತಕಿಯರನ್ನು ದೈಹಿಕ ಸಂಬಂಧಕಾಗಿ ಬಳಸಿಕೊಳ್ಳುವುದೂ ಇತ್ತು. ಅದರಲ್ಲಿಯೂ, ನರ್ತಕಿಯರನ್ನು ಮದುವೆಯಾಗುವುದಾಗಿ ನಂಬಿ ಗರ್ಭಿಣಿಯರಾದಾಗ ಕೈಕೊಟ್ಟು ಹೋಗುತ್ತಿದ್ದವರೇ ಹೆಚ್ಚು. ಆಗೆಲ್ಲಾ ಈ ನರ್ತಕಿಯರು ಮಗುವನ್ನು ತಮ್ಮ ತಂದೆತಾಯಿಗಳಲ್ಲಿಗೋ, ದೂರದ ಸಂಬಂಧಿಗಳಲ್ಲಿಗೋ ಕಳಿಸಿಬಿಡುತ್ತಿದ್ದರು. ಹೆಣ್ಣು ಮಗುವಾದಲ್ಲಿ ತಮ್ಮದೇ ಕಲೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆ ಕಾಲಕ್ಕೆ ಮಡಿವಂತ ಮಹಿಳೆಯರು ಲಾವಣಿ ಪ್ರದರ್ಶನಗಳನ್ನು ವೀಕ್ಷಿಸುವುದೂ ನಾಚಿಕೆಗೇಡಿನ ವಿಷಯ!

ಮರಾಠಿ ದಲಿತ ಸಾಹಿತ್ಯದಲ್ಲಿ ಈ ಕುರಿತಾದ ಹಲವು ಪ್ರಸ್ತಾಪಗಳನ್ನು ಕಾಣಬಹುದು. ಕಿಶೋರ್ ಶಾಂತಾಬಾಯಿ ಕಾಳೆ ಬರೆದ ‘ಕೊಲ್ಯಾಟಾಚೀ ಫೋರ್ ಪುಸ್ತಕದಲ್ಲಿ ಅವರ ತಾಯಿ, ಲಾವಣಿ ಕಲಾವಿದೆ ಶಾಂತಾಬಾಯಿ ಕಾಳೆ ಅವರ ಬದುಕಿನ ಸವಿಸ್ತಾರ ಚಿತ್ರಣವಿದೆ.

ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ಸನ್ನಿವೇಶದಲ್ಲಿ ಹಿಂದಿನ ಶ್ರೇಷ್ಠ ಲಾವಣಿಗಳನ್ನು ಸಿನೆಮಾ ಶೈಲಿಯಲ್ಲಿ ರೀಮಿಕ್ಸ್ ಮಾಡಿ ನೋಡುಗರ ಅಭಿರುಚಿನೈಚ್ಯಗೊಳಿಸಲಾಗುತ್ತಿದೆ ಎನ್ನುವುದು ಹಿರಿಯ ಕಲಾವಿದರ ಆಕ್ರೋಶ. ಇತ್ತೀಚೆಗೆ ಲಾವಣಿ ಹೆಚ್ಚು ವ್ಯಾಪಾರೀಕರಣಗೊಂಡಿರುವುದಂತೂ ನಿಜ. ಆದರೆ ಈ ಬಗೆಯ ವ್ಯವಸಾಯೀಕರಣದಿಂದಾಗಿ ತಮ್ಮ ಬದುಕು ಬಹಳಷ್ಟು ಸುಧಾರಿಸಿದೆ ಎಂಬುದು ಹಲವು ನರ್ತಕಿಯರ ಅಭಿಮತ.

ಈ ಅಪರೂಪದ ನೃತ್ಯ ಶೈಲಿಯ ಉಳಿವಿಗಾಗಿ ಇಲ್ಲಿನ ವಿಶ್ವವಿದ್ಯಾನಿಲಯ ಹಾಗೂ ಶಿಕ್ಷಣ ಸಂಸ್ಥೆಗಳಲ್ಲೂ ಲಾವಣಿ ಶಿಕ್ಷಣ ನೀಡಲಾಗುತ್ತಿದೆ. ಈ ಕುರಿತಾದ ಹೆಚ್ಚಿನ ಸಂಶೋಧನೆಗೂ ಪ್ರಾತಿನಿಧ್ಯ ನೀಡಲಾಗಿದೆ. ಲಾವಣಿಯ ಉಚ್ಛ್ರಾಯದ ದಿನಗಳು ಮರುಕಳಿಸಲಿವೆ ಎಂಬುದು ಕಲಾವಿದರ ಆಶಯ.

Leave a Reply

*

code