Author: ಮನೋರಮಾ. ಬಿ.ಎನ್
– ಶ್ರೀಲಕ್ಷ್ಮಿ ಎಂ. ಭಟ್
ಭಾವನೆಗಳನ್ನು ಕೇವಲ ಅಂಗ ಚಲನೆಯ ಮೂಲಕ ಮಾತ್ರ ನರ್ತನದಲ್ಲಿ ಅಭಿವ್ಯಕ್ತಿಸಲು ಸಾಧ್ಯವೇ? ಅದರಲ್ಲೂ ಯುದ್ಧ ಕಲೆಯಂತಹ ಮಾಧ್ಯಮದ ಮೂಲಕ?
ಮುಖದ ಅಭಿನಯ ಕಣ್ಣಿನ ಹಾವಭಾವಗಳಿಂದ ಮಾತ್ರವೇ ನೃತ್ಯಕ್ಕೆ ಮೆರುಗು ಎಂಬ ಭಾವನೆಗೆ ಸವಾಲು ಒಡ್ಡಿರುವ ನೃತ್ಯದ ಹೆಸರೇ ಛಾವ್! ಥಳಥಳಿಸುವ ಕಿರೀಟಗಳು, ಬೃಹತ್ ಮುಖವಾಡಗಳು, ಕೇಳುಗರ ಎದೆ ನಡುಗಿಸುವ ಢಮ ಢಮ ಢಮ ಡಂಗುರಗಳ ಶಬ್ದ, ನಾದಸ್ವರ, ನೋಡನೋಡುತ್ತಿದ್ದಂತೆಯೇ ಒಂದಾದ ಮೇಲೊಂದರಂತೆ ಚಕಚಕ ರಂಗದ ಮೇಲೆ ಬಂದು ತಿರುತಿರುಗಿ ಹೊರಳಿ ಹೋಗುವ ಗಣಪತಿ, ಷಣ್ಮುಖ, ಬ್ರಹ್ಮ, ವಿಷ್ಣು, ಈಶ್ವರ, ಅಸುರರು, ಹತ್ತು ಹಸ್ತಗಳ ಆಯುಧಪಾಣಿ ಉಗ್ರ ಸ್ವರೂಪಿಣಿ ದುರ್ಗೆ, ಜೊತೆಜೊತೆಗೇ ಬೃಹದಾಕಾರದ ನಂದಿ, ಸಿಂಹ ಮೊದಲಾದ ಪ್ರಾಣಿಪಕ್ಷಿಗಳ ಮುದಗೊಳಿಸುವ ನೃತ್ಯ, ವೀಕ್ಷಿಸುವ ಕಣ್ಣುಗಳಿಗೆ ಬಿಡುವೇ ಇಲ್ಲದ ಉತ್ಸುಕತೆ : ಛಾವ್ ನೃತ್ಯದ ಸ್ವರೂಪ.
೧೮-೧೯ನೇಯ ಶತಮಾನಗಳಲ್ಲಿ ಅಲ್ಲಿನ ಪ್ರಾಂತೀಯ ರಾಜರುಗಳ ಆಶ್ರಯದಲ್ಲಿ ಅಭಿವೃದ್ಧಿಗೊಂಡ ಛಾವ್, ಇಂದು ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಒರಿಸ್ಸಾಗಳ ಪ್ರಮುಖ ಜಾನಪದ ನೃತ್ಯವೆನಿಸಿಕೊಂಡಿದ್ದು, ಇದು ಹೆಚ್ಚಾಗಿ ರಚನೆ, ಕಥಾಭಾಗಗಳು, ನರ್ತನಶೈಲಿ, ವೇಷಭೂಷಣದ ರೀತಿ ಹಾಗು ಆಕೃತಿಗಳಲ್ಲಿ ಯಕ್ಷಗಾನ ದೊಡ್ಡಾಟವನ್ನು ಹೋಲುತ್ತದೆ. ಇದರ ಪೋಷಕರಷ್ಟೇ ಅಲ್ಲದೆ ನುರಿತ ನರ್ತಕರೂ ಆಗಿರುತ್ತಿದ್ದ ಒರಿಯಾ ರಾಜರುಗಳು ಯುದ್ಧರಂಗಕ್ಕಿಳಿದಾಗ ಯುದ್ಧದ ಹುರುಪು ಹೆಚ್ಚಿಸಲು ತೀವ್ರಲಯದಲ್ಲಿ ಸಂಗೀತ ವಾದ್ಯಗಳು ನುಡಿಸಲ್ಪಡುತ್ತಿದ್ದವು. ಇಂತಹ ಸಂದರ್ಭದಲ್ಲಿ ರೂಪುಗೊಂಡದ್ದಾದರೂ, ಈ ನೃತ್ಯವು ನಾಟ್ಯಶಾಸ್ತ್ರ ಹಾಗೂ ಅಭಿನಯದರ್ಪಣಗಳ ಮೂಲಭೂತ ನಿಯಮಗಳನ್ನೂ ಪಾಲಿಸುತ್ತದೆ !
ಸರೈಕೆಲ್ಲಾ (ಜಾರ್ಖಂಡ್), ಪುರುಲಿಯಾ (ಪಶ್ಚಿಮ ಬಂಗಾಳ) ಹಾಗೂ ಮಯೂರ್‌ಭಂಜ್ (ಒರಿಸ್ಸಾ) ಆಯಾ ಪ್ರಾಂತ್ಯದಲ್ಲಿ ರೂಪುಗೊಂಡ ‘ಛಾವ್ನ ಮೂರು ಶೈಲಿಗಳು. ಈಶಾನ್ಯ ಒರಿಸ್ಸಾದ ಗುಡ್ಡುಗಾಡುಗಳು ಮತ್ತು ಬುಡಕಟ್ಟು ಜನಾಂಗಗಳ ಕಲಾಕೌಶಲ, ಬಂಗಾಲದ ಪುರಾಣಕಥೆಗಳು, ವೈದಿಕ ಸಾಹಿತ್ಯ ಹಾಗೂ ಯುದ್ಧ ಕಲೆಗಳ ಪ್ರಭಾವದ ಅಪರೂಪದ ಸಮ್ಮಿಶ್ರಣ ಛಾವ್.
ಛಾವ್ – ಶಬ್ದ ಸಂಸ್ಕೃತದ ಛಾಯಾ ಶಬ್ದದಿಂದ ಉತ್ಪತ್ತಿಯಾಗಿದ್ದು; ನೆರಳು, ಮುಖವಾಡ ಹಾಗೂ ಅನುಕರಣೆಗಳನ್ನು ಸೂಚಿಸುತ್ತದೆ. ಯಾವುದೇ ಮೌಖಿಕ ಸ್ವರಗಳಿಲ್ಲದೇ ಕೇವಲ ವಾದ್ಯಗಳೇ ಹಿಮ್ಮೇಳ ಒದಗಿಸುವುದು ಈ ನೃತ್ಯದ ವಿಶೇಷ. ಧನ್ಸಾ, ನಗಾರಾ, ಛಡ್‌ವಡಿ, ಢೋಲು ಹಾಗೂ ಧಂಬಾಗಳು ಇದರಲ್ಲಿ ಬಳಸಲ್ಪಡುವ ಉಪಕರಣಗಳು.
ಜಾನಪದ ಹಾಗೂ ಶಾಸ್ತ್ರೀಯಗಳೆರಡರ ಸೊಗಡನ್ನೂ ಹೊಂದಿರುವ ಈ ಕಲೆಯನ್ನು ಬಿಹಾರ್, ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳದ ಹಲವಾರು ಕಲಾವಿದರು, ಕಲಾಸಂಸ್ಥೆಗಳು, ವಂಶಗಳು ಕಾಪಾಡಿಕೊಂಡು ಬಂದಿವೆ.