Author: ಮನೋರಮಾ. ಬಿ.ಎನ್
ಲಕ್ಷಣ: ಬೆರಳುಗಳನ್ನು ಒಟ್ಟುಗೂಡಿ ಮಡಿಸಿ ಅವುಗಳ ಮೇಲೆ ಹೆಬ್ಬೆರಳನ್ನು ಇರಿಸಿದಾಗ ಮುಷ್ಠಿ ಹಸ್ತ.
ಮುಷ್ಠಿಯು ಶ್ರೀಮನ್ಮಹಾವಿಷ್ಣುವು ಮಧು ಕೈಟಭರೊಡನೆ ಹೋರಾಡುವಾಗ ಉಪಯೋಗಿಸಿದ ಹಸ್ತವೆನ್ನಲಾಗಿದೆ. ಇದರದ್ದು ನೀಲಿ ಬಣ್ಣ, ಶೂದ್ರವರ್ಣ, ಇಂದ್ರಋಷಿ, ಚಂದ್ರ ದೇವತೆ. ಒಡಿಸ್ಸಿ ನೃತ್ಯ ಪದ್ಧತಿಯಲ್ಲಿ ಇದನ್ನು ಬಿರೋಧಹಸ್ತವೆನ್ನುತ್ತಾರೆ.
ಯೋಗದಲ್ಲೂ ಈ ಹಸ್ತ ಬಹು ಪ್ರಚಲಿತ. ನಾಲ್ಕು ಬೆಟ್ಟುಗಳನ್ನು ಹೆಬ್ಬೆರಳಿನ ಬೆಟ್ಟಿನ ಬುಡಕ್ಕೆ ಹಿಡಿದು, ಹೆಬ್ಬೆಟ್ಟನ್ನು ಉಂಗುರಬೆರಳ ಕೆಳಗಂಟನ್ನು ಸ್ಪರ್ಶಿಸುವಂತಿರಬೇಕು. ಇದು ನಾಲ್ಕು ಮುದ್ರೆಗಳ ಸಮ್ಮಿಶ್ರ ಮುದ್ರೆಯೆನಿಸಿದ್ದು, ಶರೀರ ಜಡವಾದಾಗ, ಬಾವು ಬಂದಾಗ ದಿನಕ್ಕೆ ೫೦ ನಿಮಿಷದಂತೆ ಮಾಡಬೇಕು. ಧೈರ್ಯ-ಉತ್ಸಾಹ ಕುಂದಿದಾಗ, ಚಳಿ ಉಂಟಾದಾಗ, ಹಸಿವು ಕ್ಷೀಣಿಸಿದಾಗ, ಬೊಜ್ಜು ಬೆಳೆದಾಗ, ಕಫ ಹೆಚ್ಚಾದಾಗ, ರೆಪ್ಪೆಗಳು ಅಂಟಿ ಕಣ್ತೆರೆಯುವಲ್ಲಿ ತೊಂದರೆಯಾದಾಗ ಈ ಮುದ್ರೆ ಮಾಡುವುದರಿಂದ ಉಪಯೋಗ ಹೊಂದಬಹುದು. ಗಾಯತ್ರೀ ಮುದ್ರೆಗಳಲ್ಲಿ ಒಂದೆನಿಸಿದ ಮುಷ್ಠಿಕಂ ಎಂಬ ಮತ್ತೊಂದು ಮುದ್ರೆಯು ಕ್ಯಾನ್ಸರ್ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎರಡೂ ಕೈಗಳಲ್ಲೂ ಮುಷ್ಠಿಯನ್ನು ಹಿಡಿದು ಒಂದಕ್ಕೊಂದು ಅಂಗೈ ಅಭಿಮುಖವಾಗಿ ಜೋಡಿಸಬೇಕು. ಹೆಬ್ಬೆರಳು ತೋರುಬೆರಳಿನ ಗಂಟನ್ನು ಸ್ಪರ್ಶಿಸುವಂತಿದ್ದರೆ ಮುಷ್ಠಿಕಂ ಮುದ್ರೆ ಏರ್ಪಡುತ್ತದೆ.
ಮುಷ್ಟಿಹಸ್ತವನ್ನು ಎರಡು ಕೈಗಳಲ್ಲೂ ಸಾಧಕನು ತನ್ನ ದೇಹದ ಕಡೆಗೆ ಹಿಡಿದರೆ ಸಮ್ಮುಖೀಕರಣ ಮುದ್ರೆಯೆಂಬ ಯೋಗಮುದ್ರೆ ಸಂಭವಿಸುತ್ತದೆ. ಇದು ಪ್ರಾರ್ಥನೆ ಮತ್ತು ಭಕ್ತಿಯಲ್ಲಿ ಪರಿಣಾಮಕಾರಿ. ಅದೇರೀತಿ ಎಡಗೈ ಮುಷ್ಟಿ ಹಸ್ತದ ಮೇಲೆ ಬಲಗೈ ಮುಷ್ಟಿಯನ್ನು ತಲೆಯ ಮೇಲೆ ಹಿಡಿಯುವುದರಿಂದ ಶಕ್ತಿದಾಯಿನಿ ಮುದ್ರೆಯು ಏರ್ಪಡುತ್ತದೆ. ಇದು ದೈಹಿಕ ಚೈತನ್ಯಕ್ಕೆ ಸಹಕಾರಿ. ಮುಷ್ಟಿಹಸ್ತವನ್ನು ಕೆಳಮುಖವಾಗಿ ಹಿಡಿಯುವುದರಿಂದ ಆದಿ ಮುದ್ರೆಯು ಉಂಟಾಗುತ್ತದೆ. ಈ ಮುದ್ರೆಯು ತಲೆಗೆ ಸಂಬಂಧಿಸಿದ ಕಾಯಿಲೆಗಳ ನಿವಾರಣೆಗೆ ಉಪಯುಕ್ತ.
ಅಭಿನಯ ದರ್ಪಣದ ಪ್ರಕಾರ ವಿನಿಯೋಗ: ದೃಢವಾದ ಸ್ಥಿರಭಾವ, ಕೂದಲು ಹಿಡಿದೆಳೆಯುವುದು, ದೃಢತ್ವ (ದಾರುಢ್ಯ) ಶಕ್ತಿ, ಪದಾರ್ಥ ಹಿಡಿದುಕೊಳ್ಳುವುದು, ಜಟ್ಟಿಗಳ ಕುಸ್ತಿ, ಎದೆಗಾರಿಕೆ, ವಸ್ತುಗಳನ್ನು ಎಳೆದು ಹಿಡಿಯುವಿಕೆ.
ಇತರೆ ವಿನಿಯೋಗ: ಪ್ರಹರ, ಯುದ್ಧ, ಕೈಯಿಂದ ಹಿಚುಕುವುದು, ಮರ್ದನ, ಗಾಢಾಲಿಂಗನ, ವಿನಾಯಕ ನಮಸ್ಕಾರ, ಪ್ರಶ್ನೆ, ಕಪಿಮುಷ್ಟಿ, ಯಾವುದನ್ನಾದರೂ ಕುಟ್ಟುವಂತೆ ಬಡಿಯುವುದಕ್ಕೆ, ಹೊರಗೆ ಹೋಗುವುದಕ್ಕೆ, ದರ್ಪ, ಧರ್ಮವನ್ನು ತಪ್ಪದೇ ಆಚರಿಸುವುದು, ಸ್ತನಪೀಡನ, ಈಟಿ, ಕತ್ತಿ ದೊಣ್ಣೆ, ಇವುಗಳನ್ನು ಹಿಡಿದುಕೊಳ್ಳುವುದು, ಕದನ, ಕುಚಗ್ರಹಣ, ತಾಂಡಾಳಿಕ ನಾಟ್ಯ, ಸೊಂಟ, ಛಲ, ಅರಸುಗಳ ಆಲೋಚನೆ, ಸಾಧಿಸುವುದು, ಭದ್ರನೆಂಬ ನಾಯಕ, ಕೀಳು ಜನರಿಗೆ ನಮಸ್ಕರಿಸುವುದು ಓಡುವುದು, ಮಲ್ಲಯುದ್ಧಗಳ ಸಂದರ್ಭದಲ್ಲಿ ಬಳಕೆಯಾಗುತ್ತದೆ.
ಸಂಕರ ಹಸ್ತ ಪ್ರಕಾರ ಮತ್ತು ಯಕ್ಷಗಾನದ ವಿಭಾಗದಲ್ಲಿ ಚಾರಕ-ವಿದೂಷಕ ಪಾತ್ರಗಳು, ವೃದ್ಧ, ಗಡ್ಡಧಾರಿ, ಗಡ್ಡ, ಗಡ್ಡದ ಕೂದಲು, ಕಾಕಪಕ್ಷ ಅಂದರೆ ಜುಲ್ಫಿ ಕೂದಲು ಎಂದು ತೋರಿಸಲು ಮುಷ್ಠಿಹಸ್ತವನ್ನು ಬಳಸುತ್ತಾರೆ.
ನವಗ್ರಹ ಬುಧನನ್ನು ಸೂಚಿಸಲು ಎಡಗೈಯಲ್ಲಿ ಅಡ್ಡಲಾಗಿ, ಮುಷ್ಟಿಹಸ್ತವನ್ನೂ, ಬಲಗೈಯಲ್ಲಿ ಪತಾಕಹಸ್ತವನ್ನೂ ಹಿಡಿಯಲಾಗುತ್ತದೆ. ಶುಕ್ರನನ್ನು ಸೂಚಿಸಲು ಎರಡೂ ಕೈಗಳಿಂದ ಮುಷ್ಟಿಹಸ್ತಗಳನ್ನು ಹಿಡಿದು ಎಡಗೈಯನ್ನು ಮೇಲ್ಭಾಗದಲ್ಲೂ, ಬಲಗೈಯನ್ನು ಕೆಳಭಾಗದಲ್ಲೂ ಹಿಡಿದು ಚಾಲಿಸಲಾಗುತ್ತದೆ.
ಸಾಮಾನ್ಯ ಜೀವನದಲ್ಲೂ, ಮೇಲ್ಕಂಡ ಬಹುಪಾಲು ವಿನಿಯೋಗಗಳು ಸಂವಹನಕ್ಕಾಗಿ ಬಳಕೆಯಾಗುತ್ತವೆ. ಉದಾ: ಪ್ರಶ್ನೆಕೇಳುವುದು, ಗಟ್ಟಿ ಎನ್ನಲು, ಗುದ್ದಲು, ಹೊಡೆಯುವುದು, ಸ್ಥಿರ, ಬಲವಾದ ಎನ್ನಲು ಇತ್ಯಾದಿ.
ಮುಷ್ಠಿಹಸ್ತದಲ್ಲಿ ಕಿರುಬೆರಳು ಚಾಚುವುದರಿಂದ ಕ್ರೋಢಾಸ್ಯ ಎಂಬ ಹಸ್ತ ಉಂಟಾಗುತ್ತದೆ. ಇದು ಪುಂಡರೀಕನ ನರ್ತನ ನಿರ್ಣಯ ಗ್ರಂಥದಲ್ಲಿ ಉಲ್ಲೇಖಿತ. ಈ ಹಸ್ತವನ್ನು ವರಾಹ, ಕೋರೆದಾಡೆಗಳನ್ನು ಸೂಚಿಸಲು ಬಳಸುತ್ತಾರೆ.
ಒಂದರ ಮೇಲೊಂದರಂತೆ ಮೇಲುಗಡೆ ಮುಖಗಳು ಕೂಡಿರುವ ಮುಷ್ಠಿಯು ಯೋಗಮುಷ್ಠಿ ಹಸ್ತವೆನಿಸಿಕೊಳ್ಳುತ್ತದೆ. ಇದೂ ಕೂಡಾ ನರ್ತನ ನಿರ್ಣಯದಲ್ಲಿ ಉಲ್ಲೇಖಿತ. ಇದರ ವಿನಿಯೋಗ: ಅರೆಯುವುದು, ತಿರುಗಿಸುವುದು, ಗುದ್ದುವುದು, ತಿಕ್ಕುವುದು.
ಎಡಕೈಯಲ್ಲಿ ಮುಷ್ಠಿ, ಬಲಕೈಯಲ್ಲಿ ‘ಮುಷ್ಠಿಮುದ್ರಹಸ್ತ’ ಮಾಡುತ್ತಾ ಮಣಿಕಟ್ಟನ್ನು ಸ್ಪರ್ಶಿಸುವುದು ಚಮರೀಮೃಗದ ಸಂಕೇತ.
ಅಂತೆಯೇ ಮುಷ್ಠಿ ಹಸ್ತದ ಹೆಬ್ಬೆರಳು ಮತ್ತು ಕಿರುಬೆರಳನ್ನು ಉದ್ದಕ್ಕೆ ನೀಡುವುದರಿಂದ ‘ಮುಷ್ಠಿ-ಮೃಗಹಸ್ತ’ ಉಂಟಾಗುತ್ತದೆ. ಇದು ಕೃಷ್ಣ ಮೃಗವನ್ನು ಸೂಚಿಸಲು ಸಹಕಾರಿ.
ಇವಿಷ್ಟೇ ಅಲ್ಲದೆ, ಮುಷ್ಠಿ ಹಸ್ತವನ್ನು ವಿವಿಧ ರೂಪಗಳ ಸಂಕೇತಕ್ಕಾಗಿ ಬಳಸಲಾಗುತ್ತದೆ. ಆದರೆ ಅಭಿನಯ ದರ್ಪಣದಲ್ಲಿ ಉಲ್ಲೇಖಿತವಾಗದ ಈ ಪ್ರಯೋಗಗಳು ಸಾಕಷ್ಟು ಕಣ್ಮರೆಯಾಗಿವೆ. ಉದಾ:- ಲೋಕ ಪಾಲಕ ಮರುತನನ್ನು ಸೂಚಿಸಲು ಮುಷ್ಠಿ ಮತ್ತು ಅರ್ಧ ಪತಾಕ ಹಸ್ತಗಳನ್ನು ಬಳಸುತ್ತಾರೆ. ಬಲಪಾರ್ಶ್ವದಲ್ಲಿ ಮುಷ್ಠಿ ಮತ್ತು ಎಡ ಪಾರ್ಶ್ವದಲ್ಲಿ ಅರ್ಧ ಪತಾಕ ಹಸ್ತಗಳನ್ನು ಹಿಡಿದರೆ ಅಜನೆಂಬ ಲೋಕಪಾಲಕನನ್ನೂ ಸೂಚಿಸಬಹುದು. ಮುಷ್ಠಿಗಳನ್ನು ಇದಿರಿಗೆ ಹಿಡಿದು ಅಲುಗಾಡಿಸುವುದು ಪಾಂಡವ ಭೀಮನ ಸೂಚಕ. ಚಕ್ರವರ್ತಿ ಪುರೂರವನನ್ನು ಸೂಚಿಸಲೂ ಮುಷ್ಠಿ ಹಸ್ತದ ಬಳಕೆಯಿದೆ.