ಅಂಕಣಗಳು

Subscribe


 

ಮರಾಠಿ ಪ್ರೀತಿ ಸಂಸ್ಕೃತಿಯ ಗಣಿ ಲಾವಣಿ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಶ್ರೀಲಕ್ಷ್ಮಿ ಎಂ. ಭಟ್

ಇದು ಬರಿ ಟಿವಿ, ಸಿನೆಮಾಗಳ ಯುಗ, ಜಾನಪದ ಕಲೆಗಳೆಲ್ಲ ಈಗ ಮೂಲೆ ಸೇರಿಬಿಟ್ಟವು ಅಂತ ಹಳಹಳಿಸುವವರಿಗೆ, ಜಾನಪದ ಏನಿದ್ದರೂ ಅನಕ್ಷರಸ್ಥರಿಗೆ ಅಂತ ಮೂಗಳೆಯುವವರಿಗೆ ಇಲ್ಲೊಂದು ಸವಾಲಿದೆ. ಅದು ಮಹಾರಾಷ್ಟ್ರದಲ್ಲಿ಼. ಲಾವಣಿ ಅನ್ನೋ ಶಬ್ಧ ಕೇಳಿಯೇ ಇಲ್ಲಿನ ಜನ ಪುಳಕಿರಾಗೋದು ನೋಡಿದರೆ ಜಾನಪದ ಕಲೆಗಳಿಗೆ ನೋಡುಗರ ಕೊರತೆಯಿದೆ ಅನ್ನೋ ವಾದ ಶುದ್ಧ ಸುಳ್ಳು ಅಂತ ಮನವರಿಕೆ ಆಗುತ್ತದೆ.

ಡಾ/ ಬಲವಂತ ಗಾರ್ಗಿ ವಿವರಿಸಿದಂತೆ ‘ಲಾವಣಿ ಚುರುಕಿನ ಅಂಗ ಚಲನೆಯುಳ್ಳ ಪ್ರೇಮ ಪ್ರಣಯ ಭಾವಗಳನ್ನು ಪ್ರಧಾನವಾಗಿ ಅಭಿವ್ಯಕ್ತಿಸುವ ಕಾವ್ಯ ಕಥನ ಶೈಲಿಯ ನೃತ್ಯ. ಹದಿನೇಳನೆಯ ಶತಮಾನದ ಕೊನೆಯಲ್ಲಿ ಔರಂಗಜೇಬ್ ಹಾಗೂ ಶಿವಾಜಿಯ ನಡುವಿನ ನಿರಂತರ ಕಾಳಗದ ಹೊತ್ತಿಗೆ, ಸೈನಿಕರ ಮನರಂಜನೆಗಾಗಿ ಹುಟ್ಟಿಕೊಂಡ ತಮಾಷಾದ (ನಮ್ಮ ಯಕ್ಷಗಾನದ ಸ್ವರೂಪದ್ದು) ಅತೀ ಮುಖ್ಯ ನೃತ್ಯ ಭಾಗವೇ ಲಾವಣಿ.

ಚುರುಕಿನ ಬೀಟ್ಸ್‌ಗಳು, ತಾರಕದ ಹಾಡುಗಾರಿಕೆ, ಪ್ರಣಯದ ಸವಿಸ್ತಾರ ಅಭಿನಯ, ನರ್ತನದ ನಡುನಡುವೆ ಪ್ರೇಕ್ಷಕರೊಂದಿಗೆ ಸಂಭಾಷಣೆ ಲಾವಣಿಯ ವಿಶೇಷತೆಗಳು. ಇದರಲ್ಲಿ ನರ್ತಕಿಯರು ಸಂಭಾಷಣೆ ಮುಗಿಯುತ್ತಿದ್ದಂತೆ ತಟಕ್ಕನೆ ಅತ್ಯಂತ ಚುರುಕಿನ ನೃತ್ಯ ಆರಂಭಿಸಿ ತಮ್ಮ ಪ್ರದರ್ಶನಕ್ಕೆ ಪಂಚ್ ನೀಡುತ್ತಾರೆ.

ಇಂದು ಮನೋರಂಜನೆ, ಜನಶಿಕ್ಷಣ ಹಾಗೂ ನೀತಿಭೋಧೆಯ ಉದ್ದೇಶಗಳಿಗೂ ಈ ಪ್ರಕಾರವನ್ನು ಬಳಸಲಾಗುತ್ತಿದೆ. ಗಣ್, ಗವಳಣ್, ರಂಗಭಾಜಿ, ವಗ್, ಮುಜರಾ ಈ ನೃತ್ಯದ ಅವಿಭಾಜ್ಯ ಅಂಗಗಳು. ನಾಲ್, ತುಂತುಣಾ, ಸಂಬಳ್ ಹಾಗೂ ಗೆಜ್ಜೆ ಇದರಲ್ಲಿ ಬಳಸಲ್ಪಡುವ ಪ್ರಮುಖ ವಾದ್ಯಗಳು. ಇದನ್ನು ‘ಖಡೀ ಲಾವಣಿ ಎಂದೂ ಕರೆಯುತ್ತಾರೆ. ಇದರದ್ದೇ ಇನ್ನೊಂದು ರೂಪ ‘ಬೈಠಕೀ ಲಾವಣಿ (ನಮ್ಮ ಜಾಗರದಂತದ್ದು) ಕುಳಿತು ನೀಡುವ ಪ್ರದರ್ಶನ.

ಲಾವಣಿ ಜಾನಪದ ನೃತ್ಯವಾದರೂ ಅಭಿಜಾತದ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡು ಪರಿಪೂರ್ಣ ನೃತ್ಯ ಶೈಲಿಯೇ ಆಗಿ ಬೆಳೆದು ನಿಂತಿದೆ. ಮಹಾರಾಷ್ಟ್ರದಲ್ಲಿ ಹದಿನೆಂಟನೇಯ ಶತಮಾನದ ಶಾಹು ಮಹರಾಜ್ ಹಾಗು ನಂತರದ ಪೇಶ್ವೆಗಳ ಕಾಲ ಈ ಪ್ರಕಾರದ ಉಚ್ಛ್ರಾಯದ ಕಾಲವಾಗಿತ್ತು. ಮುಂದೆ ರಾಜಾಶ್ರಯ ತಪ್ಪಿದ ನಂತರ ಕಲಾವಿದರ ಸ್ಥಿತಿ ಶೋಚನೀಯವಾಯಿತು. ೨೦ನೇಯ ಶತಮಾನದ ಮೊದಲಾರ್ಧದಲ್ಲಿ ವಿಷ್ಣುದಾಸ್ ಭಾವೆಯಂತಹ ಸುಧಾರಕರಿಂ಼ದಾಗಿ ಮತ್ತೆ ಪ್ರಾಮುಖ್ಯತೆಗೆ ಬಂದ ಲಾವಣಿ ಜನರ ಮೆಚ್ಚುಗೆ ಹಾಗೂ ಅಭಿಮಾನ ದೊರಕಿಸಿಕೊಂಡಿತು.

ಇಂದಿಗೂ ಪ್ರದರ್ಶನಗಳಲ್ಲಿ ಭರ್ಜರಿ ಜನಜಂಗುಳಿಯ ನಡುವೆ ಚಪ್ಪಾಳೆ ತಟ್ಟಿ ಉತ್ಸಾಹದಿಂದ ತಾವೂ ನರ್ತಿಸಲು ತೊಡಗುವ ಜನರಿಗೇನೂ ಇಲ್ಲಿ ಕೊರತೆಯಿಲ್ಲ. ಕಲಾವಿದರನ್ನು ಪ್ರೋತ್ಸಾಹಿಸುವುದರಲ್ಲಿ ಇಲ್ಲಿನ ಜನರ ಹೃದಯ ವೈಶಾಲ್ಯ ಪ್ರಶಂಸನೀಯ. ಇಲ್ಲಿನ ಸಾಂಗ್ಲಿ,ಸತಾರ್, ಕೊಲ್ಲಪುರ, ಖಾಂದೇಶ್, ಮರಾಠಾವಾಡ ಮೊದಲಾದವೆಡೆ ತಮಾಷಾ ಕಲಾವಿದರ ಫ಼ಡ್ ತಾಂಡಾ ಅಥವಾ ಗ್ರಾಮಗಳು ಇಂದಿಗೂ ಈ ಕಲೆಯನ್ನೇ ಜೀವನಾಧಾರವಾಗಿಸಿಕೊಂಡಿವೆ.

ಸುರೇಖಾ ಪುಣೇಕರ್, ಛಾಯಾ ಮಾಯಾ ಕುಟೇಗಾವಂಕರ್, ಮಾಯಾ ಜಾಧವ್, ಮೊದಲಾದ ಕಲಾವಿದರಿಂದಾಗಿ ಲಾವಣಿ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಮರಾಠಿಗರು ಹೇಳುವಂತೆ ‘ಮಹಾರಾಷ್ಟ್ರಾಚ ಲೋಕಲ್ಯಾಟಾಚಿ ಶಾನ್,ಅಣಿ ಜಾನ್ ಮಣ್ಚೆ ಲೋಕನೃತ್ಯ ಲಾವಣಿ.

Leave a Reply

*

code