Author: ಮನೋರಮಾ. ಬಿ.ಎನ್
– ವೈಷ್ಣವಿ . ಎನ್
ಅಲರಿಪು, ಜತಿಸ್ವರ, ಶಬ್ದ ಮತ್ತು ವರ್ಣದ ಬಗೆಗಿನ ವಿಮರ್ಶೆಗಳನ್ನು ಈ ಹಿಂದಿನ ಸಂಚಿಕೆಗಳಲ್ಲಿ ಓದಿದ್ದೀರಿ. ಇವುಗಳು ಭರತನಾಟ್ಯ ಕಚೇರಿಯ ಪೂರ್ವಭಾಗವಾದರೆ, ನಂತರ ಕಾಣಲ್ಪಡುವ ಪದ, ಜಾವಳಿ, ದರು, ಅಷ್ಟಪದಿ, ಕೀರ್ತನೆ, ಶ್ಲೋಕ, ಜಾವಳಿ, ಚೂರ್ಣಿಕೆ, ಉಗಾಭೋಗ-ದೇವರನಾಮ, ವಚನ ಮುಂತಾದ ಲಾಸ್ಯಾಭಿನಯಕ್ಕೆ ಪ್ರಾಮುಖ್ಯತೆ ಕೊಡುವ ಸಂಗತಿಗಳು ಉತ್ತರಾರ್ಧದ ಆಕರ್ಷಣೆಗಳು. ಶೃಂಗಾರ, ಭಕ್ತಿ, ೯ ಬಗೆಯ ವಿರಹಾಸಕ್ತಿಗಳು ಇದರ ಆಕರ. ಈ ಬಾರಿಯ ಸಂಚಿಕೆಯಲ್ಲಿ ಅಭಿನಯದಲ್ಲೇ ಶ್ರೇಷ್ಠವೆಂದೆನಿಸಿದ ಪದಂ.. ಅಂದಹಾಗೆ ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸುತ್ತೀರಲ್ವಾ?
ವರ್ಣವು ಮುಗಿದ ಮೇಲೆ ನರ್ತಕರಿಗೂ, ಸಭಾಸದರಿಗೂ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ. ಜೊತೆಗೆ ಉಳಿದ ಕಾರ್ಯಕ್ರಮಕ್ಕೂ ಸಭಾಸದರ ಮನಸ್ಸು ಸಿದ್ಧವಾಗಬೇಕು. ಏಕತಾನತೆಯಿಂದ ಕಳಚಿಕೊಂಡು ಸರಳ, ಸುಲಲಿತ ನೆಮ್ಮದಿಯ ಆವರಣವನ್ನು ಪಡೆಯಬೇಕು. ಪ್ರಣಯಿಗಳ ವಿರಹ, ಭಗವದ್ವೈಭವ, ಧ್ಯಾನ, ನಿವೇದನೆಗಳಿಗೆ ರಭಸ ನೃತ್ತದ ಆವರಣ ಉಚಿತವಾಗುವುದಿಲ್ಲ. ಹಾಗಾಗಿ ಕೆಲ ನಿಮಿಷಗಳ ವಿಶ್ರಾಂತಿಯ ನಂತರ ಉತ್ತರಾಂಗವು ಪ್ರಾರಂಭಗೊಳ್ಳುತ್ತದೆ.
ಸಾಮಾನ್ಯವಾಗಿ ಇತ್ತೀಚೆಗೆ ಏಕವ್ಯಕ್ತಿ ಪ್ರದರ್ಶನದಲ್ಲಿ ಸಭಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಒಂದು ವೇಳೆ ಕಾರ್ಯಕ್ರಮ ಮುಂದುವರಿದರೂ ಲಲಿತ ನಿರೂಪಣೆಗಳುಳ್ಳ ಸಾಹಿತ್ಯದ ಅಭಿನಯವು ದೇಹಕ್ಕೆ ವಿಶ್ರಾಂತಿಯನ್ನೂ, ಭಾವಾಭಿನಯಕ್ಕೆ ಅಭಿವ್ಯಕ್ತಿಯನ್ನು ನೀಡುತ್ತದೆ. ಇಂತಹ ಕಾರ್ಯ ಪದಂಗಳಿಂದ ಆರಂಭವಾಗುತ್ತದೆ. ಭರತನಾಟ್ಯ ಮತ್ತು ಸಂಗೀತದ ಸರ್ವಾಂಗ ಸೌಂದರ್ಯಕ್ಕೆ ಪದಗಳ ಪಾತ್ರ ಹೆಚ್ಚು. ಸಂಗೀತದ ಹೊನಲು ಸುಗಮವಾಗಿ ಹರಿಯುವ ಪದಗಳಲ್ಲಿ ರಾಗದ ಭಾವ ತುಳುಕುತ್ತದೆ.
ಪದಗಳು ಶೃಂಗಾರ ಪ್ರಧಾನ. ಮಧುರ ಭಕ್ತಿಯ ಪರಮಾವಧಿ. ಸಾಮಾನ್ಯವಾಗಿ, ಶೃಂಗಾರ, ಭಕ್ತಿ, ವರ್ಣನೆ- ಈ ಮೂರು ವಿಧಗಳಲ್ಲಿ ಪದಗಳನ್ನು ಕಾಣುತ್ತೇವಾದರೂ ವಿವಿಧ ವಿರಹಾಸಕ್ತಿಗಳು ಇದರ ಆಕರ.ಶೃಂಗಾರ ಪೂರಿತವಾದ ಪದಗಳು ನಾಯಿಕಾ-ನಾಯಕಾ ಭಾವವನ್ನು ಒಳಗೊಂಡಿದ್ದು, ಪ್ರೌಢಿಮೆ ಪಡೆದ ಕಲಾವಿದರು ಇಂತಹ ಪದಗಳನ್ನು ಹೆಚ್ಚಾಗಿ ಆರಿಸಿಕೊಳ್ಳುತ್ತಾರೆ. ಭಕ್ತಿ ಪೂರಕವಾದ ಪದಗಳು ಭಕ್ತಳ/ನ ಭಕ್ತಿಯ ಪರಾಕಾಷ್ಠೆಯನ್ನು ಬಿಂಬಿಸಿದರೆ, ವರ್ಣನಾತ್ಮಕವಾದ ಪದಗಳಲ್ಲಿ ದೇವ-ದೇವತೆಯರ ಬಗ್ಗೆ ಅಥವಾ ಯಾವುದಾದರೂ ಪ್ರಸಂಗ, ಸನ್ನಿವೇಶಗಳ ವರ್ಣನೆಯಿರುತ್ತದೆ.
ಭರತನ ನಾಟ್ಯಶಾಸ್ತ್ರದಲ್ಲಿ ಪ್ರಸ್ತಾಪಿಸಲಾದ ನಾಯಿಕಾ-ನಾಯಕಾ ಭಾವಕ್ಕೆ, ಭಾವ-ರಸಗಳ ಅಭಿವ್ಯಕ್ತಿಗೆ ಪದಗಳಲ್ಲಿ ಪ್ರಾಶಸ್ತ್ಯ ಹೆಚ್ಚು. ಶೃಂಗಾರದ ಲೇಪವಿದ್ದರೂ ಪಾರಮಾರ್ಥಿಕ ಭಾವವನ್ನು ಸಾಧಿಸುವುದೇ ಪದಗಳ ವಿಶೇಷ. ಅದಕ್ಕೆ ಸೇರಿದ ವಿರಹತಾಪ, ಶೋಕ, ಜಿಗುಪ್ಸೆ, ಭಯ, ಆನಂದ ಮುಂತಾದ ಜೀವನಾನುಭವಗಳನ್ನು ಹೊಂದಿರುವ ಪದಗಳ ಪ್ರಧಾನ ಉದ್ದೇಶ ಜನರಂಜನೆ; ಜೊತೆಗೆ ಜ್ಞಾನೋದಯ. ನರ್ತಕಿಯು ಪ್ರೇಯಸಿಯಾಗಿ ನಾಯಿಕಾ ಪಾತ್ರವನ್ನು ಧರಿಸಿ ತನಗೆ ತಿಳಿದಿರುವ ಮಾರ್ಗದಲ್ಲಿ ಪರಮಾತ್ಮನನ್ನು ವರಿಸುವುದು, ಐಕ್ಯವಾಗುವುದು, ಮಧುರ ಮೈತ್ರಿಯನ್ನು ಬಯಸುವುದು ಇದರ ಮುಖ್ಯ ಧ್ಯೇಯ. ಆತ್ಮವನ್ನು ಭಾವ ಪ್ರಪಂಚಕ್ಕೆ ಎಳೆದೊಯ್ದು, ಪರಮಾತ್ಮನಲ್ಲಿ ಮಧುರ ಮೈತ್ರಿಯನ್ನು ಕಲ್ಪಿಸಿ ಅವ್ಯಕ್ತ ಮಧುರಾನಂದವನ್ನು ನೀಡುವ ಶಕ್ತಿ ಪದಗಳಿಗಿದೆ. ಸಾಮಾನ್ಯವಾಗಿ ಪರಮಾತ್ಮ ಇಲ್ಲಿ ನಾಯಕ, ಆತ್ಮವು ನಾಯಿಕೆ. ಈ ಇಬ್ಬರ ಮಿಲನಕ್ಕೆ ಪೂರಕವಾಗುವವಳು ಸಖಿ. ಆಕೆ ನಾಯಿಕೆಗೆ ಗುರುವಾಗುತ್ತಾಳೆ, ಮಾರ್ಗದರ್ಶಕಿಯಾಗುತ್ತಾಳೆ, ಇವರಿಬ್ಬರ ಪ್ರೇಮ ಜೀವನಕ್ಕೆ ಸಾರ್ಥಕತೆಯನ್ನುಂಟುಮಾಡುತ್ತಾಳೆ.
ಪಲ್ಲವಿ, ಅನುಪಲ್ಲವಿ, ಚರಣಗಳೆಂಬ ಮೂರು ಅಂಗಗಳನ್ನು ಹೊಂದಿರುವ ಈ ಪದಗಳನ್ನು ಹಾಡವುದು ವಿಳಂಬಕಾಲದಲ್ಲಿ(ನಿಧಾನಗತಿ). ಮಧ್ಯಮಕಾಲದ ಹಾಡುಗಾರಿಕೆಯು ಸಾಹಿತ್ಯದ ರಮ್ಯತೆಗೆ ತಡೆಯನ್ನುಂಟು ಮಾಡಿ ಭಾವಕ್ಕೆ ಕುಂದು ತರುವುದಾದ್ದರಿಂದ, ಪದಗಳಿಗೆ ಒಪ್ಪುವುದಿಲ್ಲ. ಹಿಂದಿನ ಕಾಲದಲ್ಲಿ ಪದಗಳನ್ನು ಸಂಗೀತ ಕಚೇರಿಗಳಲ್ಲೂ ಹಾಡಲಾಗುತ್ತಿತ್ತು. ಆದರೆ ಇದೀಗ ರೂಢಿಯಲ್ಲಿಲ್ಲ. ಈ ಪದ್ಧತಿ ನೃತ್ಯದಲ್ಲೂ ಕಂಡುಬಂದಿದ್ದು, ಇತ್ತೀಚೆಗೆ ದೇವರನಾಮಗಳನ್ನು ದಾಸರ ಪದ ಎಂದು ಭಾವಿಸಿ ಪದಗಳ ಸ್ಥಾನದಲ್ಲಿ ನರ್ತಿಸಲಾಗುತ್ತದೆ. ಉದಾ:- ನಟನ ಮಾಡಿನಾರ್, ಅಧರಂ ಮಧುರಂ. ಇಂಥಹ ಸಂಕೀರ್ತನೆಗಳು, ದಾಸರ ಪದಗಳಲ್ಲಿ ಭಕ್ತಿಯು ವಿರಕ್ತಿ ಮಾರ್ಗ ಹಿಡಿದು, ಭಗವಂತನೆಡೆಗೆ ಭಕ್ತನ ಆರ್ತ ಭಾವ, ವರ್ಣನೆ, ಮೋಕ್ಷ-ಕೃಪೆ ಯಾಚನೆಯಿರುತ್ತದೆಯೇ ವಿನಃ, ಪದಗಳಿಗೆ ಕಡ್ಡಾಯವಾಗಿ ಇರಲೇಬೇಕಾದ ನಾಯಿಕಾ-ನಾಯಕಾ ಭಾವವಿರುವುದಿಲ್ಲ. ದಾಸರ ಪದಗಳದು ಗೌರವ ಶೃಂಗಾರ, ಶೃಂಗಾರ ಪದಗಳದು ಮಧುರ ಭಕ್ತಿ. ಹಾಗಾಗಿ ಈ ರಚನೆಗಳು ಮತ್ತು ಅವುಗಳ ಅಭಿನಯ ಪದಗಳಿಗೆ ಸರಿಸಮಾನವಾದುದಲ್ಲ ಎಂಬುದು ವಿಮರ್ಶಕರ ಅಭಿಪ್ರಾಯ.
ಆದರೂ ಕೆಲವು ವಿದ್ವಜ್ಜನರ ಅಧ್ಯಯನ-ಅಭಿಪ್ರಾಯಗಳು ಶೃಂಗಾರಪೂರಿತವಾದ ನಾಯಿಕಾ-ನಾಯಕಾ ಭಾವಗಳುಳ್ಳ ದಾಸವಿರಚಿತ ದೇವರನಾಮಗಳನ್ನು ಪದಾಭಿನಯಕ್ಕೆ ಳಸಿಕೊಳ್ಳಬಹುದೆಂದು ತಿಳಿಸಿವೆ. ಉದಾ:- ರಂಗ ಬಾರನೇ ಶ್ರೀ ರಂಗ ಬಾರನೇ, ರಂಗನ್ಯಾತಕೆ ಬಾರನೇ ಅಂಗನಾಮಣಿ, ಎಲೆ ಸಖಿಯೇ ಪೋಗು, ಸದ್ದು ಮಾಡಲು ಬ್ಯಾಡವೋ,… ಇತ್ಯಾದಿ. ಒಟ್ಟಿನಲ್ಲಿ ನಾಯಿಕಾ-ನಾಯಕಾ ಭಾವವಿರಬೇಕಾದದ್ದು ಕಡ್ಡಾಯ.
ಅಲಂಕಾರಗಳು, ಉಪಮೆ-ಕಲ್ಪನೆಗಳು, ರೂಪಕ, ಪ್ರಾಸ, ಅತಿಶಯೋಕ್ತಿಗಳು, ಗಾದೆ ಮಾತು, ಮನೆ ಮಾತುಗಳು ಹೇರಳವಾಗಿರುವ ಪದಗಳಲ್ಲಿ ಸಾಹಿತ್ಯವನ್ನು ಗಮಕಕ್ಕೆ ಆರೋಹಿಸಿ ಭಾವವನ್ನು ನಿರಾತಂಕವಾಗಿ ಹರಿಯಲು ಅವಕಾಶ ಕಲ್ಪಿಸಿರುತ್ತಾರೆ. ಮಾತು ಮತ್ತು ಧಾತುಗಳ ಸಹಯೋಗ ಒಂದಕ್ಕೊಂದು ಪುಷ್ಠಿಯನ್ನೀಯುತ್ತದೆ. ಸಾಮಾನ್ಯವಾಗಿ ಪದಗಳಲ್ಲಿ ತೋಡಿ, ಹುಸೇನಿ, ಶಂಕರಾಭರಣ, ಯದುಕುಲಕಾಂಭೋಧಿ, ಭೈರವಿ, ಖರಹರಪ್ರಿಯ, ಕಾಂಬೋಧಿ, ಬೇಗಡೆ, ಪಂತುವರಾಳಿ ಮುಂತಾದ ಘನರಾಗದ ಬಳಕೆ ಹೆಚ್ಚು. ಇದು ಸಂಚಾರೀ ಭಾವಗಳ ಪ್ರದರ್ಶನಕ್ಕೆ ಅನುಕೂಲವೂ ಹೌದು. ಮಿಶ್ರಛಾಫು ತಾಳಗಳಲ್ಲಿ ಪದಗಳ ಸಂಯೋಜನೆಯನ್ನು ಹೆಚ್ಚಾಗಿ ಕಾಣಬಹುದು.
ತೆಲುಗು ಸಾಹಿತ್ಯದಲ್ಲಿ ಪದಗಳು ಗಣನಾತೀತವಾಗಿವೆ. ನಾಯಕ ರಾಜರ ಕಾಲದಲ್ಲಿ ಪದಚಾಲಿಗಳು, ಚೌಪದ, ದರುಪದ, ಗುರುಪದ, ಮದನಪದ ಮತ್ತು ನವಪದಗಳೆಂಬ ವಿಧಗಳಿದ್ದವು. ರೂಪನಾಯಿಕೆ ಮತ್ತು ಲೋಕನಾಯಿಕೆಯೆಂಬುವರು ಪದಾಭಿನಯಗಳಲ್ಲಿ ನಿಪುಣೆಯರಾಗಿದ್ದರು. ಮಧುರೈಯ ನಾಯಕ ಸಭೆಗಳಲ್ಲಿ ಪದಕಾರನಾಗಿದ್ದ ವಂಗಲ ಶೀನಯ್ಯನ ಕುರಿಂಜಿರಾಗದ ಶಿವದೀಕ್ಷಪರುರಲನ ಪದವು ಆಗಿನ ನರ್ತಕಿಯರಿಗೆ ಬಹು ಪ್ರಿಯವಾದುದಾಗಿತ್ತು.
೧೫ನೇಯ ಶತಮಾನದಲ್ಲಿ ತಾಳ್ಳಪಾಕಂ ಅಣ್ಣಮಾಚಾರ್ಯ ಅವರು ಪದರಚನೆಯನ್ನು ಪ್ರಾರಂಭಿಸಿದರು. ಇವರ ಪದಗಳು ಇತರ ಪದರಚನಾಕಾರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿವೆ. ಮುಂದಿನ ಅನೇಕ ಪದಕರ್ತೃಗಳಿಗೆ ಇವರೇ ಆದರ್ಶಪ್ರಾಯರು ಕೂಡಾ ! ಆದ್ದರಿಂದಲೇ ಇವರು ಪದಕವಿತಾ ಪಿತಾಮಹ ಎಂಬ ಹೊಗಳಿಕೆಗೆ ಪಾತ್ರವಾಗಿದ್ದಾರೆ. ಇವರು ತಮ್ಮ ಸಂಗೀತಲಕ್ಷಣಂ ಎಂಬ ಭಾವಗೀತಾ ಲಕ್ಷಣದಲ್ಲಿ ಪದಗಳನ್ನು ಗೀತೆಗಳಿಗೆ ಹೋಲಿಸಿದ್ದಾರೆ. ದರು, ಜಕ್ಕಲ್, ರೇಕುಲು, ಗೊಬ್ಬಿಲ್ಲು, ವಾಕ್ಯ ಅಥವಾ ವಚನಂ, ಚಂದಮಾಮ ಪದ, ಎಲಪತಲು ಎಂಬ ವಿಧಗಳನ್ನು ವರ್ಣಿಸಿದ್ದಾರೆ. ಭರತನಾಟ್ಯದ ಪ್ರಕಾರ ಪದಾಭಿನಯವು ನಾಯಕರಿಗೆ ಸಂಸ್ಕೃತದಲ್ಲೂ, ಸ್ತ್ರೀಯರಿಗೆ ಪ್ರಾಕೃತದಲ್ಲೂ, ಉಳಿದವರಿಗೆ ಇತರ ಭಾಷೆಗಳಲ್ಲೂ ಇರಬೇಕೆಂಬ ಮತ್ತು ಶೃಂಗಾರ ಪದಗಳನ್ನು ಆಡು ಮಾತಿನಲ್ಲೇ ರೂಪಿಸಬೇಕೆಂಬ ಲಕ್ಷಣಗಳನ್ನು ತಿಳಿಸಿದ್ದಾರೆ.
ನಂತರ ಕ್ಷೇತ್ರಯ್ಯ(ಜ್ಞ)ನ ಪದಗಳು ಮಹತ್ವದ ಸ್ಥಾನ ಪಡೆಯಿತು. ಪದ ಚಕ್ರವರ್ತಿ ಎಂಬ ಬಿರುದಿಗೆ ಪಾತ್ರವಾದ ಪದಗಳಲ್ಲಿ ಭಾವದ ಮಹಾಪೂರವೇ ಅಡಗಿದೆ. ೧೫೯೫ರಲ್ಲಿ ಜನಿಸಿದನೆನ್ನಲಾದ ಈತನ ಮೂಲ ಹೆಸರು ವರದಯ್ಯ ಎಂದಾಗಿರಬಹುದು ಎನ್ನುವುದು ವಿದ್ವಾಂಸರ ಅಭಿಪ್ರಾಯ. ದೇವದಾಸಿಯೋರ್ವಳ ಮೇಲೆ ಮೋಹ ಪರವಶನಾಗಿ, ಆಕೆ ಮತ್ತು ಆತನ ಹೆಂಡತಿಯಿಂದಲೇ ಜ್ಞಾನೋದಯವಾಗಿ ರಚನೆಗೆ ತೊಡಗಿದ ವರದಯ್ಯ. ಆತನ ಪದಗಳ ದ್ವಂದ್ವಾರ್ಥದ ಅರ್ಥ ತಿಳಿಯದ ಸಮಾಜವು ಆತನನ್ನು ಕ್ಷಿತ್ರೀಯ ಎಂದು ಬಹಿಷ್ಕರಿಸಿತು. ತನ್ನಲ್ಲಿ ಕೃಷ್ಣನ ಗೋಪಿಕೆಯ ಅನುಭವ ಪಡೆದ ಈತ, ಯಾತ್ರೆ ಮಾಡುತ್ತಾ ಭಗವದ್ ದರ್ಶನಕ್ಕೂ ಪಾತ್ರನಾದ. ಇವನಿಗೆ ಭಗವಾನ್ ಭೋಧೀಂದ್ರ ಶಂಕರಾಚಾರ್ಯರು ಕ್ಷೇತ್ರಜ್ಞನೆಂಬ ಪದವಿಯನ್ನು ಅನುಗ್ರಹಿಸಿದರು. ಕಾಂಚೀಪುರ, ಚೆಂಗಿ, ಮಧುರೈ, ತಂಜಾವೂರಿನ ನಾಯಕರ ಸಭೆಗಳನ್ನೂ ಸಂದರ್ಶಿಸುತ್ತಿದ್ದ ಕ್ಷೇತ್ರಜ್ಞ, ೧೬೪೦ರಲ್ಲಿ ಗೋಲ್ಕೊಂಡದ ಅಬುಲ್ ಹಸನ್ ತನಾಷಾನ ರಾಜಸಭೆಯಲ್ಲೂ ಇದ್ದು ಪದರಚನೆ ಮಾಡಿದ್ದ. ಹೆಚ್ಚಾಗಿ ಘನರಾಗಗಳಲ್ಲಿ, ಅದರಲ್ಲೂ ಹೆಚ್ಚಾಗಿ ತ್ರಿಪುಟತಾಳಗಳಲ್ಲಿ ೪೫೦೦ ಶೃಂಗಾರಪೂರಿತವಾದ ಪದಗಳನ್ನು ರಚಿಸಿರುವ ಕ್ಷೇತ್ರಜ್ಞನ ಪದಗಳ ಅಂಕಿತನಾಮ ಮುವ್ವಗೋಪಾಲ.
ಕೆಲವು ಕಾಲಕ್ಕೆ ಮೊದಲು ತೆಲುಗು ಭಾಷೆಯಲ್ಲಿನ ಕ್ಷೇತ್ರಜ್ಞನ ಪದಗಳು ಅಭಿನಯ ಶ್ರೇಷ್ಠವೆನಿಸಿ ಮನ್ನಣೆ ಪಡೆದಿದ್ದವು. ನೃತ್ಯ ಗುರುಗಳ ಮತ್ತು ಅಭಿನಯಿಸುವವರ ವಿದ್ವತ್ತು, ಆಸಕ್ತಿ, ವಿದ್ಯೆಯ ಆಳವನ್ನು ಪರೀಕ್ಷಿಸುವಲ್ಲಿ ಅಳತೆಗೋಲಾಗಿದ್ದವು. ಈ ಪದಗಳು ಆಧ್ಯಾತ್ಮಿಕ ತತ್ವವನ್ನು ಶೃಂಗಾರ ರಸದಂತೆ ಅಸಾಮಾನ್ಯವಾಗಿ ನಿರೂಪಿಸಿದವಾಗಿದ್ದು, ಸಂಗೀತ ಶಾಸ್ತ್ರದ ನಿಯಮಗಳಿಗೆ ಅನುಸಾರವಾಗಿವೆ. ಸಂಗೀತ ತ್ರಿಮೂತ್ರಿಗಳಿಂದ, ವಾಗ್ಗೇಯಕಾರರಿಂದ ಬಹುವಾಗಿ ಮೆಚ್ಚುಗೆಗೆ ಪಾತ್ರವಾಗಿದ್ದ ಕ್ಷೇತ್ರಜ್ಞನ ಪದಗಳು ಬರಬರುತ್ತಾ ಅಪರೂಪವಾಯಿತು. ಸಮಾಜದ ಎಷ್ಟೋ ಕಲಾವಿದರು, ಮಹಿಳೆಯರು ಅಶ್ಲೀಲ ಸಾಹಿತ್ಯವೆಂದು, ಅಭಿನಯಿಸಲು ಯೋಗ್ಯವಲ್ಲವುಗಳೆಂದು ತೀರ್ಮಾನಿಸಿ ತಳ್ಳಿ ಹಾಕಿದರು. ಏಕೆಂದರೆ ಪದಗಳಲ್ಲಿ ಕಾಣಬರುವ ದ್ವಂದ್ವಾರ್ಥ! ಆದರೆ ಇದು ಪಾರಮಾರ್ಥಿಕ ಭಾವಗುಣವಿಶೇಷ ಎಂಬುದನ್ನು ಬಲ್ಲವರು ಕಡಿಮೆ. ಹಾಗಾಗಿ ಅವಸರದಲ್ಲಿ ರಂಗಮಂದಿರಕ್ಕೇರುವ ಮತ್ತು ಏರಿಸುವವರ ನಡುವೆ ಕ್ಷೇತ್ರಜ್ಞನ ಪದಗಳ ಇಂಗಿತವನ್ನು ಯಾರೂ ಅರಿಯುತ್ತಿಲ್ಲವೆಂಬುದು ವಿಮರ್ಶಕರ ಖೇದ.
ಕ್ಷೇತ್ರಜ್ಞನ ರಚನಾಶೈಲಿಯನ್ನು ಮತ್ತು ಪದಾಭಿನಯವನ್ನೇ ಹೋಲುವ ಮತ್ತೋರ್ವ ರಚನಾಕರರೆಂದರೆ ಮುವ್ವನಲ್ಲೂರು ಸಭಾಪತಿ ಅಯ್ಯರ್. ಅವರ ಪದ ಅಂಕಿತ ನಾಮ ರಾಜಗೋಪಾಲ. ವೇಣುಗೋಪಾಲ ಅಂಕಿತನಾಮದ ಸಾರಂಗಪಾಣಿಯವರ ಪದಗಳು ಸಾಧಾರಣ ಶೈಲಿ ಹೊಂದಿರುವ ಗೌರವಯುತವಾದ ರಚನೆಗಳು. ಸಾಮಾನ್ಯವಾಗಿ ವೇಶ್ಯೆಯರ ಕುರಿತಾದ ಅವರ ಪದಗಳು ಹಿಂದಿನ ನಟ್ಟುವ ಮೇಳದವರಿಗೆ ಅಚ್ಚುಮೆಚ್ಚಾಗಿದ್ದವು.
ಸುಬ್ಬರಾಮ ದೀಕ್ಷಿತರು ತಮ್ಮ ಪದಗಳನ್ನು ಉದಯರ್ ಪಾಲಯಮ್ಮಿನ ಯುವರಂಗನೆಂಬ ರಾಜಪುರುಷನಿಗೆ ಅರ್ಪಿಸಿದ್ದರೆ, ಮೇಲತ್ತೂರು ವೆಂಕಟರಾಮಶಾಸ್ತ್ರಿ ತಮ್ಮ ಭಾಗವತ ಮೇಳ ನಾಟಕದಲ್ಲಿ ಅಚ್ಯುತವರದನ ಮೇಲೆ ಶೃಂಗಾರ ಪದ ಬರೆದಿದ್ದಾರೆ. ಪರಿಮಳ ರಂಗನ ಮೇಲೂ ಪದಗಳು ರಚಿತವಾಗಿವೆ.
ವೇಲರ್, ಕಂದರ್, ಕುಮಾರರ್, ಮುರುಗೇಸರ್ ಮುಂತಾಗಿ ಸುಬ್ರಹ್ಮಣ್ಯನ ಹೆಸರಿರುವ ಹಲವು ಅಂಕಿತನಾಮದ ಪದರಚನಕಾರರಾದ ಘನಂ ಕೃಷ್ಣ ಅಯ್ಯರ್, ಮುತ್ತು ತಾಂಡವರ್, ವೈದೀಶ್ವರನ ಕೊಯಿಲ್ ಸುಬ್ಬರಾಮ ಅಯ್ಯರ್, ಮಾಮುತ್ತ ಪಿಳ್ಳೆ, ಅರುಣಾಚಲು ಕವಿರಾಯರ್, ಸ್ವಾತಿ ತಿರುನಾಳ್ ಮಹಾರಾಜ ತಮಿಳಿನಲ್ಲಿ ಉತ್ತಮ ಪದರಚನೆಗಾರರು. ಕನ್ನಡದಲ್ಲಿ ಚಿಕ್ಕದೇವರಾಜ ಒಡೆಯರ್ ಅವರ ಶೃಂಗಾರ ಸಪ್ತಪದಿಯಿಂದ ಆರಿಸಿಕೊಂಡ ರಚನೆಗಳನ್ನು ಪದಗಳಂತೆ ನರ್ತಿಸುವುದಿದೆ. ಇತ್ತೀಚೆಗೆ ಕನ್ನಡದಲ್ಲೂ ಸಾಕಷ್ಟು ಪದಗಳ ರಚನೆಯಾಗಿದೆ.
ಪದಗಳು ನವುರಾದ ಲಾಲಿತ್ಯ, ನಿಧಾನವಾದ ನಡಿಗೆ, ಗಾಂಭೀರ್ಯಯುತ ಉಚ್ಛಮಟ್ಟದ ಅಭಿನಯವನ್ನೂ ನಿರೀಕ್ಷಿಸುತ್ತದೆ. ಸಂಗೀತದಲ್ಲಿ ಹಾಡುವ ಪದಗಳನ್ನು ನೃತ್ಯದಲ್ಲಿ ಪ್ರದರ್ಶಿಸುವಾಗ ಆಗುವ ಸ್ವಾರಸ್ಯವೇ ಬೇರೆ! ನೃತ್ಯದಲ್ಲಿ ಭಾವಗಳಿಗೆ ತಕ್ಕುದಾದ ರಾಗದ ಜೊತೆಗೆ, ಸಭಾಸದರ ಮನಸ್ಸಿನಲ್ಲಿ ಅನುಭವದ ಅಭಿವ್ಯಕ್ತಿ ಮಾಡುವಂತಿರುವ ಪ್ರದರ್ಶನವೂ ಪದಗಳ ಜೀವಾಳವಾಗಿರುತ್ತದೆ. ಪದಗಳಿಗೆ ರಾಗ ಸಂಯೋಜಿಸುವಾಗ ನಾಯಿಕೆಯ ಅವಸ್ಥೆಯ ಬಗ್ಗೆ ನಿರ್ದಿಷ್ಟವಾಗಿ ತಿಳಿದು ಆಯಾಯಾ ಭಾವಕ್ಕೆ ತಕ್ಕಂತೆ ರಾಗವನ್ನು ಕಲ್ಪಿಸುವುದು ಒಳ್ಳೆಯದು. ಆಗಷ್ಟೇ ಅಭಿನಯ ಪರಾಕಾಷ್ಠೆಗೇರಲು ಸಾಧ್ಯ.
ಪದಗಳು ನರ್ತಕರ ಮತ್ತು ಹಿನ್ನಲೆ ಗಾಯಕರ ಪ್ರತಿಭೆಗೇ ಸವಾಲಿದ್ದಂತೆ ! ಒಂದು ವೇಳೆ ಕಲಾವಿದರಲ್ಲಿ ವಿದ್ವತ್ತಿನ (ವಿದ್ವತ್ ಪರೀಕ್ಷೆ ಅಲ್ಲ!)ಕೊರತೆಯಿದ್ದಲ್ಲಿ ಪದಗಳು ನೀರಸವಾಗಿ, ಪೇಲವವಾಗಿ ಕಾಣುತ್ತದೆ; ಸಭಾಸದರು ಮತ್ತು ಕಲಾವಿದನ ನಡುವೆ ಸಂವಹನದ ಕೊರತೆ ಹೆಚ್ಚಾಗುತ್ತಾ ಸಾಗುತ್ತದೆ.. ಪರಿಣಾಮ, ಬೋರ್ ಹೊಡೆಯುತ್ತದೆ. ಹಾಗಾಗಿ ಜೀವನದ ಸುಖದುಃಖಗಳನ್ನು ಅನುಭವಿಸಿದ ಮೇಧಾವಿ ಕಲಾವಿದರಿಂದಷ್ಟೇ ಪದಗಳ ಅಭಿನಯ ಪರಿಣಾಮಕಾರಿಯಾಗುತ್ತದೆಯೇ ವಿನಃ ಚಿಕ್ಕಮಕ್ಕಳಿಂದ ಅಥವಾ ಯೌವನದ ಹೊಸಿಲಲ್ಲಿ ನಿಂತಿರುವ ನುರಿತರಲ್ಲದವರಿಂದ ಅಷ್ಟಾಗಿ ಆಗಲಾರದು ಎಂಬುದು ವಿದ್ವಾಂಸರ ಅಂಬೋಣ.
ಪದವನ್ನು ಸಮರ್ಥವಾಗಿ ನರ್ತಿಸಲು ಕಲಾವಿದೆಯದವಳಿಗೆ ಸಾಹಿತ್ಯ, ಧಾರ್ಮಿಕ ಮೌಲ್ಯಗಳ ಹಿನ್ನಲೆ-ಪರಿಚಯವಿದ್ದು; ಸಂಗೀತ, ಲಯ, ನಾಯಿಕಾ-ನಾಯಕಾ ಅವಸ್ಥೆ ಮತ್ತು ರಸಭಾವಗಳಲ್ಲಿ ಶ್ರದ್ಧಾಪೂರ್ವಕ ಪರಿಶ್ರಮವಿರಬೇಕು. ಜೊತೆಗೆ ಒಳ್ಳೆಯ ಯೋಚನಾ ಲಹರಿ, ಕಲ್ಪನಾ ಶಕ್ತಿಯಿದ್ದಲ್ಲಿ ಮಾತ್ರ ಪದಗಳ ಅಂತರಾರ್ಥದ ಅಭಿನಯ ಪರಿಣಾಮಕಾರಿ.