Author: ಮನೋರಮಾ. ಬಿ.ಎನ್
ಈ ವರೆಗೆ…
(ತಮಿಳುನಾಡಿನ ಮಧುರೈಲಿ ೧೯೦೪ ಫೆಬ್ರವರಿ ೨೯ ರ ಮಧ್ಯಾಹ್ನದಲ್ಲಿ ಜನಿಸಿದ್ದರು ರುಕ್ಮಿಣಿ. ನೀಲಕಂಠ ಶಾಸ್ತ್ರಿ, ಶೇಷಮ್ಮಾಳ್ ದಂಪತಿಗಳ ೮ ಮಕ್ಕಳ ಪೈಕಿ ರುಕ್ಮಿಣೀಗೆ ಕಲೆಗಳಲ್ಲಿ ಆಸಕ್ತಿ ಹೆಚ್ಚು. ಆದರೆ ಸ್ತ್ರೀಯರಿಗೆ ಆಗಿನ ಸಮಾಜ ಕಲಾಸ್ವಾದನೆಗೆ ಅವಕಾಶವೇ ಕೊಡುತ್ತಿರಲಿಲ್ಲ. ಆದರೆ ರುಕ್ಮಿಣೀಯ ತಂದೆ, ಎಂಜಿನಿಯರ್, ಸಂಸ್ಕೃತ ವಿದ್ವಾನ್ ನೀಲಕಂಠ ಶಾಸ್ತ್ರಿ ರಿಟೈರ್ಡ್ ಆದ ನಂತರ ತಮ್ಮ ವಾಸ್ತವ್ಯವನ್ನು ಅಡ್ಯಾರ್ನಿಂದ ಥಿಯೋಸೋಫಿಕಲ್ ಸೊಸೈಟಿಯ ಪಕ್ಕಕ್ಕೆ ಬದಲಾಯಿಸಿಕೊಂಡಿದ್ದರಿಂದಾಗಿ ಥಿಯೋಸೋಫಿಕಲ್ ಸೊಸೈಟಿಯ ಪ್ರಭಾವ ಕುಟುಂಬದ ಮೇಲೆ ಗಾಢವಾಗಿ ಬೀರಿತು. ಮಾತ್ರವಲ್ಲ, ಥಿಯೋಸೋಫಿಕಲ್ ಸೊಸೈಟಿಯಲ್ಲಿ ಕಲಾಸ್ವಾದನೆಗೆ ಹೆಚ್ಚಿನ ಅವಕಾಶ ಸಿಗುತ್ತಿತ್ತು. ಜೊತೆಗೆ, ರವೀಂದ್ರನಾಥ ಠಾಗೋರ್ ಅವರ ’ಮಾಲಿನಿ’ಯಲ್ಲೂ ಪಾತ್ರ ವಹಿಸಿದ್ದರು. ಮಗಳ ಪ್ರತಿಭೆ ಗುರುತಿಸಿದ ತಂದೆ ಸಂಗೀತ ಕಲಿಯಲೂ ಅವಕಾಶ ಮಾಡಿಕೊಟ್ಟರು.
ಅಂತಹ ಒಂದು ಸಂದರ್ಭದಲ್ಲೇ ಹಿರಿಯ, ಕ್ರೈಸ್ತ ವಿದೇಶಿ ಶಿಕ್ಷಣ ತಜ್ಞ ಡಾ | ಅರುಂಡೆಲ್ ಅವರನ್ನು ಭೇಟಿಯಾದದ್ದು. ತಾಯಿಯ ಮರಣದ ನಂತರ ಅತ್ತೆ ಫ್ರಾನ್ಸಿಸ್ಕಾ ಅವರ ಮಾರ್ಗದರ್ಶನದಲ್ಲಿ ಬೆಳೆದ ಅರುಂಡೇಲ್ ಅವರನ್ನು ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ, ನಿರ್ವಹಣೆಗಾಗಿ ಅ ಬೆಸೆಂಟ್ ಭಾರತಕ್ಕೆ ಕರೆಸಿಕೊಂಡಿದ್ದರು. ಒಂದು ಟೀ ಪಾರ್ಟಿಯಲ್ಲಿ ಅವರ ಜೊತೆ ಭಾಗವಹಿಸಿದ ರುಕ್ಮಿಣೀ, ಮುಂದೆ ಅವರನ್ನೇ ಕೈಹಿಡಿದಾಗ, ಸಾಂಪ್ರದಾಯಿಕ ಮನೆತನವುಳ್ಳ ಸಮಾಜ ವ್ಯಾಪಕವಾಗಿ ಪ್ರತಿಭಟಿಸಿತ್ತು, ಶಾಪ ಹಾಕಿತ್ತು.
ಆದರೆ ರುಕ್ಮಿಣಿಗೆ ಅದೇ ವರವಾಗಿ ಪರಿಣಮಿಸಿತ್ತು. ಸಮಾಜದ ಟೀಕೆಗಳನ್ನು ದೂರವಿರಿಸಲು ಪ್ರವಾಸಕ್ಕೆ ನಿಂತ ದಂಪತಿ ; ಅರಿವಿನ ಹುಡುಕಾಟದಲ್ಲಿ ಥಿಯೋಸೋಫಿಕಲ್ ಸೊಸೈಟಿಯ ವಕ್ತಾರರಾಗಿ ಭಾರತ, ಯುರೋಪಿನಾದ್ಯಂತ ಸಂಚರಿಸಲು ಆರಂಭಿಸಿದರು. ಆದಾಗಲೇ ೧೯೨೩ ರಲ್ಲಿ ಅಖಿಲ ಭಾರತ ಯುವ ಥಿಯೋಸೋಫಿಸ್ಟ್ ಸಂಘದ ಅಧ್ಯಕ್ಷೆ ಮತ್ತು ೧೯೨೫ರಲ್ಲಿ ವಿಶ್ವ ಯುವ ಥಿಯೋಸೋಫಿಸ್ಟ್ ಫೆಡರೇಶನ್ನ ಅಧ್ಯಕ್ಷೆಯ ಪಟ್ಟ ರುಕ್ಮಿಣಿಯವರನ್ನು ಅರಸಿ ಬಂದಿತ್ತು. ಇದೇ ಸಂದರ್ಭದಲ್ಲಿ ಅವರಿಗೆ ಮಾರಿಯಾ ಮೊಂಟೆಸ್ಸರಿ, ಜೇಮ್ಸ್ ಕಸಿನ್ಸ್ ಅವರ ಸ್ನೇಹ ದೊರಕಿತು.)
೧೯೨೮ರ ಇಸವಿ…, ಆಗ ರುಕ್ಮಿಣಿದೇವಿಗೆ ೨೪ ರ ಹರೆಯ…
ಅದೊಮ್ಮೆ ಹೆಸರಾಂತ ರಷ್ಯನ್ ಬ್ಯಾಲೆ ಕಲಾವಿದೆ ಅನ್ನಾ ಪಾವಲೋವಾ ಮುಂಬೈಗೆ ಬಂದರು. ಆಗ ಯಾವುದೋ ಥಿಯೋಸೋಫಿಕಲ್ ಸೊಸ್ಶೆಟಿಯ ಕಾರ್ಯಕ್ರಮವೊಂದಕ್ಕೆ ವಾರಣಾಸಿಗೆ ತೆರಳಿದ ಅರುಂಡೇಲ್ ದಂಪತಿ ವಿಷಯ ತಿಳಿದದ್ದೇ ತಡ ಲಗುಬಗೆಯಿಂದ ಓಡೋಡಿ ಬಂದರು. ಪ್ರದರ್ಶನದ ನಂತರ ಪಾವಲೋವಾ ಅವರ ಪ್ರಯಾಣ ಇದ್ದದ್ದು ಆಸ್ಟ್ರೇಲಿಯಾಕ್ಕೆ !
ಅರೇ ! ಅವರು ಹಿಂದಿರುಗುತ್ತಿದ್ದ ಹಡಗಿನಲ್ಲೇ ಪಯಣಿಸುವ ಅಪೂರ್ವ ಅವಕಾಶ ಒದಗಿತ್ತು ಅರುಂಡೇಲ್ ದಂಪತಿಗಳಿಗೆ…! ಪರಿಚಯದ ಮಾತುಗಳು ಸ್ನೇಹಕ್ಕೆ ಹಾದಿ ಹಾಕಿಕೊಟ್ಟವು.
ಬ್ಯಾಲೆ ಕಲಿಯುವ ಹಂಬಲ ರುಕ್ಮಿಣೀಗೆ. ಬೇಡಿಕೆ ಮುಂದಿಟ್ಟಿದ್ದೇ ತಡ, ಪಾವಲೋವಾ ಪ್ರೀತಿಯಿಂದಲೇ ಒಪ್ಪಿಕೊಂಡರು.
ಸತತ ಅಭ್ಯಾಸ ಪ್ರಾರಂಭವಾಯಿತು. ಅದರೊಂದಿಗೇ ಗ್ರೀಕ್ ನೃತ್ಯಗಳನ್ನೂ ಕಲಿತರು. ಜೊತೆಜೊತೆಗೇ ಖ್ಯಾತ ಕಲಾವಿದೆ ಕ್ಲಿಯೋ ನೋರ್ಡಿ ಅವರಿಂದಲೂ ಬ್ಯಾಲೆಯ ಪಟ್ಟುಗಳ ಪಾಠ ಹೇಳಿಸಿಕೊಂಡಿದ್ದಾಯಿತು.
ಆದರೆ, ಇತ್ತ.., ಅದೇ ಸಂದರ್ಭ..,ಒಂದು ಕಾಲದ ಶ್ರೀಮಂತ ಕಲೆ ಭಾರತೀಯಾ ನೃತ್ಯ ಪದ್ಧತಿ ಹೀನಾಯ ಸ್ಥಿತಿಯಲ್ಲಿತ್ತು !
ಅದೊಂದು ದಿನ.., ಪಾವಲೋವಾ ಅವರಿಗೆ ಏನನ್ನಿಸಿತೋ ಏನೋ, ಪಕ್ಕದಲ್ಲಿ ಕೂರಿಸಿಕೊಂಡು ರುಕ್ಮಿಣೀಗೆ ಹೇಳಿದ ಕಿವಿಮಾತು ಏನು ಗೊತ್ತೇ !
“ಯಾಕೆ, ನೀನು ಭಾರತದ ನೃತ್ಯ ಪದ್ಧತಿಗಳತ್ತ ಒಲವು ತೋರಬಾರದು? ವಾಪಾಸು ನನ್ನ ಸಂಸ್ಕೃತಿಗೆ ಹಿಂದಿರುಗಿ ನೃತ್ಯ ಪದ್ಧತಿಗಳನ್ನು ಅಭ್ಯಾಸ ಮಾಡಿ ಅದಕ್ಕೊಂದು ಜೀವ ಕೊಡುವ ಕೆಲಸ ಮಾಡಬಾರದು ?”
ಮೂರುತಿಗೊಂದು ರೂಪ ಕೊಡುವ ಹಂತ ಆರಂಭಿಸಿತ್ತು ಮನಸ್ಸು. ರುಕ್ಮಿಣೀ ಮೊದಲು ಕಲಿತದ್ದು ಬ್ಯಾಲೆ ಆದರೂ, ಕಲೆಯ ಬಗೆಗಿದ್ದ ಸೆಳೆತ ಭಾರತದ ಕಲೆ-ಸಂಸ್ಕೃತಿಗಳೆಡೆಗೆ ಎಳೆದು ತಂದಿತ್ತು. ಅದಕ್ಕೆ ಕಾರಣ ಪಾವಲೋವಾ ಅವರ ಪ್ರೋತ್ಸಾಹ. ಆದರೆ ಕಲಿಯುವುದೆಲ್ಲಿ? ಹೇಗೆ? ಏಕೆಂದರೆ ಆವರೆಗೆ ಭಾರತದ ನೃತ್ಯಗಳನ್ನು ಅಷ್ಟಾಗಿ ಗಮಸಿದವರಲ್ಲ ರುಕ್ಮಿಣಿ !
ಆದರೆ, ದೂರದೃಷ್ಠಿ ದೊರೆತ ಮೇಲೆ ದೂರ ಎಲ್ಲಿದೆ ?
೧೯೩೩ ರ ದಿನ… ನೃತ್ಯ ಸಂಗೀತ ಅಕಾಡೆಮಿಯ ವಾರ್ಷಿಕೋತ್ಸವ.. ಸ್ವಾತಂತ್ರ್ಯ ಹೋರಾಟಗಾರ, ವಕೀಲ, ಅಕಾಡೆಮಿ ಅಧ್ಯಕ್ಷ ಕೃಷ್ಣ ಅಯ್ಯರ್ ನೃತ್ಯ ಕಾರ್ಯಕ್ರಮವೊಂದನ್ನು ಏರ್ಪಾಡು ಮಾಡಿದ್ದರು. ರುಕ್ಮಿಣಿಗೆ ಆಹ್ವಾನದ ಕರೆ ತಲುಪಿತ್ತು.
ರುಕ್ಮಿಣೀ ಅದೇ ಮೊದಲ ಬಾರಿಗೆ ದಕ್ಷಿಣ ಭಾರತದ ನೃತ್ಯವೊಂದನ್ನು ಬಿಡುಗಣ್ಣಿಂದ ನೋಡಿದ್ದು ! ಆಗ ಅವರ ವಯಸ್ಸು ೨೯ !
ಹೆಸರಾಂತ ಗುರು ಮೀನಾಕ್ಷಿ ಸುಂದರಂ ಪಿಳ್ಳೈ ಅವರ ಶಿಷೈಯರಾದ ಪಂದನಲ್ಲೂರು ಅಥವಾ ಕಲ್ಯಾಣಿ ಸಹೋದರಿಯರೆಂದೇ ಖ್ಯಾತರಾದ ಜೀವರತ್ನಂ , ರಾಜೇಶ್ವರಿಯವರ ಸಾದಿರ್ ಶೈಲಿಯ ನೃತ್ಯ ಕಾರ್ಯಕ್ರಮ !
ಅದ್ಯಾವುದು ಸಾದಿರ್ ?
(ಸಶೇಷ)