Author: ಮನೋರಮಾ. ಬಿ.ಎನ್
ಪತ್ರಿಕೆಗೆ ಎಂತಹ ಹೆಸರಿಟ್ಟರೆ ಒಳಿತು ಎಂಬ ಚರ್ಚೆ ಬಂದಾಗ ಹಲವು ವಿಚಾರಗಳು ಹೊಳೆಯಿತು ಮಂದಿರ, ನಾಟ್ಯ, ನೃತ್ಯ, ಹೆಜ್ಜೆ, ಗೆಜ್ಜೆ, ಕಿಂಕಿಣಿ, ಧೀಂಗಿಣ, ಚಿದಂಬರ ಹೀಗೆ ಹಲ-ಕೆಲವು ಹೆಸರುಗಳು ಸಂಯೋಗಗೊಂಡವು. ಹೀಗೆ ಪತ್ರಿಕೆಗೆ ಹೆಸರಿಡುವ ಪ್ರಕ್ರಿಯೆಗೇ ೪ ತಿಂಗಳು ತೆಗೆದುಕೊಂಡಿದ್ದು ಸುಳ್ಳಲ್ಲ ! ಏಕೆಂದರೆ ಯಾವುದೇ ಸೀಮಿತವರ್ಗದ ಕಲ್ಪನೆಯನ್ನು ಕಟ್ಟಿಕೊಡುವ ಅಂಕಿತ ಪತ್ರಿಕೆಯದ್ದಾಗಿರಬಾರದು; ಜೊತೆಗೆ ನೃತ್ಯ ಲೋಕಕ್ಕೊಂದು ಪರಿಭ್ರಮಣವೇ ಅದಾಗಿರಬೇಕು. ಹಾಗಾಗಿ ನೃತ್ಯ – ನಾಟ್ಯ ಎಂಬ ಹೆಸರಿನ ಕ್ಲೀಷೆಗಳನ್ನು ಬದಿಗಿಟ್ಟು ನೂಪುರ ಭ್ರಮರಿ ಎಂಬ ಹೆಸರನ್ನು ಆಯ್ದುಕೊಳ್ಳಲಾಯಿತು. ಜೊತೆಗೆ ಹೆಸರಿನ ಅಗಾಧ ಅರ್ಥವನ್ನು ಕೆಳಕಂಡಂತೆ ವಿವೇಚಿಸಲಾಗಿದೆ.
ಭರತನಾಟ್ಯಶಾಸ್ತ್ರ ಮತ್ತು ನಂದಿಕೇಶ್ವರನ ಅಭಿನಯದರ್ಪಣದ ಪ್ರಕಾರ ಭ್ರಮರಿ ಎಂದರೆ ನೃತ್ಯದ ವೇಳೆ ಬಳಸುವ ವಿವಿಧ ಪಾದಕ್ಕೆ ಸಂಬಂಧಪಟ್ಟ ಚಲನೆಗಳ ಸಮೂಹ ಅಂದರೆ ಪಾದ ಭೇದಗಳಲ್ಲಿ ಒಂದು ಬಗೆ. ಅದು ಆಕಾಶಕೀಚಾರೀಯೂ ಹೌದು.; ಭ್ರಮರಿ ಎಂಬುದರ ಅರ್ಥ ಗೋಳಾಕಾರವಾಗಿ ತಿರುಗುವುದು. ಈ ತಿರುಗುವಿಕೆ ಕೇವಲ ನೃತ್ಯದ ಪರಿಭಾಷೆಯಾಗಿ ಮಾತ್ರವಲ್ಲ, ನರ್ತನ ಜಗತ್ತಿನ ವೈಶಾಲ್ಯತೆಯನ್ನು ಪುಟ್ಟ ಬೊಗಸೆಯಲ್ಲಿ ತುಂಬಿಕೊಳ್ಳುವ ಪ್ರಯತ್ನದ ಪರಿಭ್ರಮಣವೂ ಆಗಬೇಕು ಅನ್ನುವುದು ನಮ್ಮ ಕನಸು.
ನಾಟ್ಯಶಾಸ್ತ್ರದಲ್ಲಿ ಹೇಳಲಾದ ಭ್ರಮರಿ ಎಂಬ ಆಕಾಶಕೀ ಚಾರಿಯಲ್ಲಿ ೭ ಬಗೆಗಳಿವೆ. ಅವು ಉತ್‌ಪ್ಲುತ ಭ್ರಮರಿ, ಚಕ್ರಭ್ರಮರಿ, ಗರುಡಭ್ರಮರಿ, ಏಕಪಾದ ಭ್ರಮರಿ, ಕುಂಚಿತ ಭ್ರಮರಿ, ಆಕಾಶ ಭ್ರಮರಿ, ಮತ್ತು ರಂಗ ಭ್ರಮರಿ ನರ್ತನ ಮಾಡುವಾಗ ಈ ವಿಧವಿಧವಾದ ಅಂದರೆ ಭೂಮಿಯ ಮೇಲೆ ಕಾಲನ್ನಿಟ್ಟು ತಿರುಗುವುದು, ಕಾಲನ್ನೆತ್ತಿ ತಿರುಗುವುದು, ಕಾಲುಗಳನ್ನು ಬಗ್ಗಿಸಿ ತಿರುಗುವುದು, ಕುಳಿತು ತಿರುಗುವುದು- ಮುಂತಾದ ಭ್ರಮರಿಗಳನ್ನು ಉಪಯೋಗಿಸುತ್ತೇವೆ. ನೇರ ಮತ್ತು ಅಕ್ಕಪಕ್ಕದಲ್ಲಷ್ಟೇ ಅಲ್ಲದೆ ನಮ್ಮ ಸುತ್ತಮುತ್ತಲಿನ ಅಷ್ಟೂ ವಸ್ತು ವಿಷಯಗಳ ಅವಲೋಕನ ಭ್ರಮರಿಯಿಂದಷ್ಟೇ ಸಾಧ್ಯ.
ನೂಪುರ ಎಂದರೆ ಎಲ್ಲರಿಗೂ ತಿಳಿದಂತೆ ಗೆಜ್ಜೆ ಎಂಬ ಅರ್ಥವಿದೆ. ಆದರೆ ನೂಪುರ ಎಂಬುದೊಂದು ,bhramaraದೇಶೀಕರಣ. ಮಾತ್ರವಲ್ಲದೆ, ನಾಟ್ಯಶಾಸ್ತ್ರದ ಪ್ರಕಾರ ೩೨ ಚಾರಿಗಳ ಪೈಕಿ ನೂಪುರಪಾದವೆಂಬುದು ಆಕಾಶ ಚಾರಿಯ ಒಂದು ಬಗೆಯೂ ಹೌದು.
ಭ್ರಮರಿಯ ಹತ್ತಿರದ ಪದ ಭ್ರಮರ. ಭ್ರಮರ ಎಂಬುದರ ಬಗ್ಗೆ ನೃತ್ಯ ಕ್ಷೇತ್ರದಲ್ಲಿ ಹಲವು ವಿಶ್ಲೇಷಣೆಗಳಿವೆ. ಭ್ರಮರ ಎಂದರೆ ದುಂಬಿ. ಭ್ರಮಣ ಎಂಬುದು ತಾರಾಕ್ರಮ, ಭ್ರಮರಕ ಎಂಬುದೊಂದು ಕರಣ. ಜೊತೆಗೆ ಅಸಂಯುತ ಹಸ್ತಗಳಲ್ಲಿ ಭ್ರಮರ ಎಂಬ ಹಸ್ತಜಾತಿಯಿದೆ. ಮಧ್ಯಮ ಮತ್ತು ಹೆಬ್ಬೆರಳು ತುದಿಯನ್ನು ಕೂಡಿಸಿ ತೋರುಬೆರಳನ್ನು ಅದರ ಮಧ್ಯಕ್ಕೆ ಬಾಗಿಸಬೇಕು ನಂತರ ಉಳಿದ ಉಂಗುರ ಮತ್ತು ಕಿರುಬೆರಳನ್ನು ವಿಂಗಡಿಸಿ ಚಾಚಿ ಹಿಡಿದರೆ ಭ್ರಮರ ಹಸ್ತವಾಗುತ್ತದೆ. ಈ ಭ್ರಮರಹಸ್ತ ದುಂಬಿ, ಗಿಣಿ, ಕೋಗಿಣಿ, ಕಮಲ, ಮುಂತಾದ ಉದ್ದನೆಯ ತೊಟ್ಟುಗಳುಳ್ಳ ಹೂಗಳನ್ನು ಕೊಯ್ಯುವುದು, ವಿಷಯಗಳನ್ನು ತೋರಿಸಲು ಬಳಸಲಾಗುತ್ತದೆ. ಇದೇ ಬಗೆಯಲ್ಲಿ ಭ್ರಮರಿ ಎಂಬ ಪದಕ್ಕೆ ಹತ್ತಿರದ ಅದೆಷ್ಟೋ ಪದಗಳನ್ನು ನೃತ್ಯ ಗ್ರಂಥಗಳಲ್ಲಿ ಕಾಣುತ್ತೇವೆ.