ಅಂಕಣಗಳು

Subscribe


 

ನುಡಿಸಿರಿಯ ನಡೆಯಲ್ಲಿ ಆಳ್ವಾಸ್

Posted On: Monday, December 15th, 2008
1 Star2 Stars3 Stars4 Stars5 Stars (No Ratings Yet)
Loading...

Author: ವಿಷ್ಣು ಪ್ರಸಾದ್ ಎನ್ ಟ್ರಸ್ಟಿ ನೂಪುರ ಭ್ರಮರಿ ಪ್ರತಿಷ್ಠಾನ ಬ್ಯಾಂಕ್ ಮ್ಯಾನೇಜರ್ ಪುತ್ತೂರು


ಇದೇ ಸಾಲಿನ ನವೆಂಬರ್ ೨೮-೨೯-೩೦ ಕ್ಕೆ ಮೂಡಬಿದ್ರಿಯಲ್ಲಿ ಜಾತ್ರೆಯ ವಾತಾವರಣ. ಕಾರಣ, ‘ಆಳ್ವಾಸ್ ನುಡಿಸಿರಿ’.’ಕನ್ನಡದ ಮನಸ್ಸುಗಳನ್ನು ಬೆಸೆಯುವ ಕನ್ನಡ ನುಡಿ ಹಬ್ಬ. ಸಾಹಿತ್ಯ ಸಮ್ಮೇಳನಗಳ ಗೊಂದಲ, ಗಲಾಟೆಗಳಿಂದ ಕಳಚಿಕೊಂಡು ತನ್ನದೇ ಆದ ವಿಶಿಷ್ಟ ಬಗೆಯ ಸಮ್ಮೇಳನವನ್ನು ಕಳೆದ ೫ ವಷಗಳಿಂದ ಮುನ್ನಡೆಸುತ್ತಾ ಬಂದಿದ್ದಾರೆ ನುಡಿಸಿರಿಯ ರೂವಾರಿ ಡಾ | ಮೋಹನ ಆಳ್ವ. ಜೊತೆಗೆ ಸಾದ್ಯವಾದಷ್ಟೂ ನಮ್ಮೊಳಗಿನ ಕಲೆಯನ್ನು ಗುರುತಿಸಿ ಆಸ್ವಾದಿಸುವ ನಿಟ್ಟಿನಲ್ಲಿ ಈ ಸಂದರ್ಭ ಸಾಕಷ್ಟು ನೃತ್ಯ- ಸಂಗೀತ-ನಾಟಕ, ಯಕ್ಷಗಾನ-ಜಾನಪದ-ರೂಪಕ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದ್ದಾರೆ. ಹಾಗಾಗಿ ಕನ್ನಡ ನಾಡಿನ ಕಲಾವಿದರು-ಸಾಹಿತಿಗಳು ಮತ್ತು ಪ್ರತಿಯೋರ್ವ ಕಲೆ-ಸಾಹಿತ್ಯ ಅಭಿರುಚಿಯುಳ್ಳ ಮಂದಿಯ ದೊಡ್ಡ ಗಡಣವೇ ಅಲ್ಲಿ ನೆರೆಯುತ್ತದೆ. ಅವರ ಬೆನ್ನಿಗೆ ದೊಡ್ಡ ಕಲಾಸಕ್ತರ, ಸ್ವಯಂಸೇವಕರ ಬಳಗವೇ ಇದೆ. ಈ ಬಾರಿಯೂ ಮುಂಜಾವಿನಿಂದ ಮಧ್ಯರಾತ್ರಿಯ ವರೆಗೂ ವಿವಿಧ ಗೋಷ್ಟಿಗಳು, ನಾಡು ನುಡಿಯ ಗೀತೆಗಳು, ನೃತ್ಯಗಳು- ರೂಪಕಗಳು, ನಾದ ವೈವಿಧ್ಯಗಳು ಕಲಾ ರಸಿಕರಿಗೆ ಮನ ತೆರೆದು ಕಾದಿವೆ. ಆಸಕ್ತರಿಗೆ ನೀಡುವ ಉಚಿತ ವಸತಿ-ಊಟ ವ್ಯವಸ್ಥೆಯೂ ಅಭಿನಂದನಾರ್ಹ.

ನುಡಿಸಿರಿಯ ಬೆನ್ನಿಗೇ ಡಿಸೆಂಬರ್- ಜನವರಿಯ ಮಧ್ಯಭಾಗದಲ್ಲಿ ಆಯೋಜಿಸಲ್ಪಡುವ ಐದು ದಿನದ ಆಳ್ವಾಸ್ ವಿರಾಸತ್- ಲಲಿತ ಕಲೆಗಳ ಲೋಕದಲ್ಲಿ ಪುಟ್ಟ ಊರೊಂದು ಹೇಗೆ ಕಲೆಯ ವಿಷಯದಲ್ಲಿ ಒಂದು ಮೈಲಿಗಲ್ಲಾಗಬಹುದು ಎಂಬುದಕ್ಕೆ ಸಾಕ್ಷಿ. ವಿದೇಶಗಳಿಂದಲೂ ಕಲಾಸಕ್ತರು ವಿರಾಸತ್‌ಗಾಗಿಯೇ ಬಂದು ಪ್ರತಿ ದಿನವೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಲೆದೂಗುತ್ತಾರೆ. ಪ್ರತೀ ವರ್ಷವೂ ಕಲೆಯಲ್ಲಿ ಸಾಧನೆಗೈದ ಕಲಾವಿದರಿಗೆ ಪಲ್ಲಕ್ಕಿಯಲ್ಲಿ ಕರೆತಂದು, ರಾಷ್ಟ್ರೀಯ ಪುರಸ್ಕಾರವನ್ನಿತ್ತು, ಗೌರವಿಸಿ, ನಮಿಸಿ, ವಿಶ್ವಪ್ರಸಿದ್ಧ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ನಲಿಯುವ ವಿರಾಸತ್, ಕರಾವಳಿಯ ಕಲಾಸಕ್ತರು ಕಾಯುವ ಮತ್ತೊಂದು ಹಬ್ಬ.

ಹೀಗೆ, ತಮ್ಮ ಸಮಯದಲ್ಲಿ ಬಹುಪಾಲನ್ನೂ ಸಾಹಿತ್ಯ-ಲಲಿತಕಲೆಗಳಿಗೆ ಮೀಸಲಿಡುತ್ತಾ ಬಂದಿರುವ ಡಾ | ಮೋಹನ ಆಳ್ವ ಒಳ್ಳೆಯ ಕಲಾ ಪೋಷಕ, ಪ್ರೋತ್ಸಾಹಕ ಮಾತ್ರವಲ್ಲ ವಿಮರ್ಶಕ, ಕಲಾವಿದ ಕೂಡಾ ! ತಮ್ಮ ಆಳ್ವಾಸ್ ವಿದ್ಯಾ ಸಂಸ್ಥೆಗಳಲ್ಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ನೃತ್ಯ-ಸಂಗೀತ-ನಾಟಕಗಳಲ್ಲಿ ತೊಡಗಿಸುತ್ತಾ, ನಾಡಿನಾದ್ಯಂತ ಪ್ರವಾಸ ಕೈಗೊಳ್ಳುತ್ತಾ, ನಾನಾ ಬಗೆಯ ಸಾಂಸ್ಕೃತಿಕ ಸಂಜೆಗಳನ್ನು ಆಯೋಜಿಸುತ್ತಾ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಅಪೂರ್ವ ಕಾರ್ಯಕ್ಕೆ ನಮ್ಮೆಲ್ಲರ ಸದಾಶಯಗಳಿರಲಿ.

-ವಿಷ್ಣುಪ್ರಸಾದ್ . ಎನ್, ಮಂಗಳೂರು.

( ಶ್ರೀಯುತರು ಫೆಡರಲ್ ಬ್ಯಾಂಕ್ ಅಧಿಕಾರಿ)

Leave a Reply

*

code