Author: ಮನೋರಮಾ. ಬಿ.ಎನ್
ಶ್ರೀನಿವಾಸ-ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ತಾವರೆ ಕವನ ಸಂಕಲನದಿಂದ ಆಯ್ದ ಈ ಕವನ ನಾಟ್ಯದ ಅಧಿದೇವ ನಟರಾಜನನ್ನು, ಆತನ ನೃತ್ಯವನ್ನು ವರ್ಣಿಸುವ ಸುಂದರ ಕಾವ್ಯ ಗುಚ್ಛವಾಗಿ ಈ ಸಂಚಿಕೆಯ ಲಲಿತ ಲಹರಿಯಲ್ಲಿ ನಿಮ್ಮೆದುರಿಗೆ…
ನಿನ್ನ ನಾಟ್ಯವನು ಬಣ್ಣಿಸೆ, ಪರಶಿವ,
ಪನ್ನಗೇಶನಿಗು ಅಸದಳವಪ್ಪುದು ;
ನಿನ್ನ ನಾಟ್ಯವಿದು ಭಾವಕು ಅಸದಳ
ನಟರಾಜಾ ! ನಟರಾಜ
ಉಂಗುಟದಂಚಿನ ತುದಿಯೊಳು ನಿಂದಿಹ
ಅಂಗೋಪಾಂಗದ ವೈಖರಿಯಂದದ
ಭಂಗಿಯು ಚಿತ್ರವಿಚಿತ್ರವಾಗಿಹುದು
ನಟರಾಜಾ ! ನಟರಾಜ
ತಾಂಡವದಾವರ್ತದೊಳಕಿಳ
ಬ್ರಹ್ಮಾಂಡದ ಸರಣಿಯನೆಸಗುತಲೆಲ್ಲವ
ಭಾಂಡವನೊಡೆವವೊಲೊಡೆಯುವೆ ನೀನೇ
ನಟರಾಜಾ ! ನಟರಾಜ
ಭೂಲೋಕ ಭವರ್ಲೋಕಾದಿ ಲೋಕ
ಮಾಲೆಯ ಸಾಲ್ಗಳು ನಿನ್ನ ನಾಟ್ಯದಲಿ
ಕಾಲದಿ ಬರುವುವು ಕಾಲದಿ ಮರೆವುವು
ನಟರಾಜಾ ! ನಟರಾಜ
ತಾಂಡವವಿದರೀ ಭರದೊಳಖಿಳ ಮಾ
ರ್ತಾಂಡರು ಚಂದ್ರರು ಉಡುಗಣ ಗಗನದ
ಭಾಂಡದಂತರದೆ ಚಲಿಸುತಲಿರುವರು
ನಟರಾಜಾ ! ನಟರಾಜ
ಕಡುವೇಗದಿ ನೀ ಸುತ್ತುತಲಿಂತಿರೆ
ಪಡು ಮೂಡಲು ಕೀಳ್ಮೇಲೆಂದೆಂಬುದು
ಬಡಗು ತೆಂಕಣವು ಮರೆದಿವೆ ನಿನ್ನೊಳು
ನಟರಾಜಾ ! ನಟರಾಜ
ಕೇಶದಾಮವಿದು ನಾಟ್ಯದ ತೀವ್ರಾ
ವೇಶದಿ ಕೆದರುತೆ ಸೃಷ್ಠಿಗೆ ತಾನಾ
ಕಾಶದ ವಿಸ್ತರವಾಗಿ ಕಾಣುತಿದೆ
ನಟರಾಜಾ ! ನಟರಾಜ
ವೇಗದ ಸುತ್ತಿನ ರಭಸದಿ ಪೃಥ್ವಿ
ಸಾಗರ ಬಾಂದಳ ತಿರುವ ಬುಗುರಿಯೊಲು
ವೇಗದೊಳೇ ನಿಶ್ಚಲಮೆನೆ ತೋರ್ಪುವು
ನಟರಾಜಾ ! ನಟರಾಜ
ತಾರುಮಾರು ಓಡಾಡುತಲಿಹವೊಲು
ತೋರುವ ಲೋಕದ ನಡೆನುಡಿಯೆಲ್ಲ
ಸೇರಿಯೆ ಇಹುದೀ ನಾಟ್ಯದ ಲಯದಲಿ
ನಟರಾಜಾ ! ನಟರಾಜ
ಡಮರುಕ ಡಕ್ಕಿಯ ಶಬ್ದವಿತಾನ
ಕ್ರಮದಿಂ ಸೃಷ್ಠಿಯನೆಲ್ಲ ತುಂಬಿರಲು
ಭ್ರಮೆಯಿಂ ಚೇತನ ನಾನೆನ್ನುತಲಿವೆ
ನಟರಾಜಾ ! ನಟರಾಜ
ಕುಬ್ಜಮಾನಿಸನ ನಿನ್ನಯ ಮೃದುಪದ
ದಬ್ಜದ ತುದಿಯಿಂ ತುಳಿದಿಹೆ ; ಉದಯದ
ಅಬ್ಜದವೊಲು ಮೊಗ ಕಣ್ಗಳು ನಗುತಿವೆ
ನಟರಾಜಾ ! ನಟರಾಜ
ಭೀಕರವಾಗಿದೆ ಕಾಲಿನ ತುಳಿತ ;
ಆಕಾರವೆತ್ತ ದಯೆಯೊಲು ನಗೆಯಿದೆ ;
ಶ್ರೀಕರ ಶುಭಕರ ಶಂಕರ ಪರಶಿವ,
ನಟರಾಜಾ ! ನಟರಾಜ
ಕೆಟ್ಟುದ ಕಳೆದದರೆಡೆಯಲಿ ಒಳ್ಳಿದ
ಇಟ್ಟದನೆಲ್ಲೆಡೆ ಸಂತತ ಬೆಳೆಯಿಪ
ದಿಟ್ಟತನದ ನಟವಿದ್ಯೆಯಿದಪ್ಪುದು
ನಟರಾಜಾ ! ನಟರಾಜ
ಎನ್ನೀ ಹೃದಯದ ದೋಷವನೆಲ್ಲವ
ನನ್ನಿಯ ನಗೆಯಲಿ ಮೆಲ್ಲನೆ ಕಳಚಿ
ನಿನ್ನಡಿಗೆಡೆಯನು ಮಾಡಿಕೊ ನನ್ನಲಿ
ನಟರಾಜ ! ನಟರಾಜ