Author: ಮನೋರಮಾ. ಬಿ.ಎನ್
– ವೈಷ್ಣವಿ . ಎನ್
ಭಗವಂತನ ಚರಿತೆ-ರೂಪ-ಗುಣವರ್ಣನೆಗಳಿಂದ, ಲಯ ಗತಿಗಳಿಂದ ಕೂಡಿದ ಚೂರ್ಣಿಕೆಗಳು ವೈದಿಕ ಕುಲ- ಸಂಪ್ರದಾಯಕ್ಕನುಗುಣವಾಗಿ ಹುಟ್ಟಿಕೊಂಡವು. ಹೆಚ್ಚಾಗಿ ಸಂಸ್ಕೃತದಲ್ಲಿರುವ ಇವು ಸುಸಂಸ್ಕೃತ ರಸಿಕ ವರ್ಗಕ್ಕೆ ತೃಪ್ತಿಯನ್ನು ತರುವಂಥವು.
ಹಿಂದೆ ರಾಜರನ್ನು-ಅವರ ಮಹತ್ಕಾರ್ಯಗಳನ್ನು, ದೇವರ ಲೀಲೆಯನ್ನು ಹೊಗಳಲು ವಂಧಿಮಾಗದರಿಂದ ರಚನೆಗೊಂಡ ನಾಮಸ್ಮರಣೆ-ಸಂಕೀರ್ತನೆಗಳೇ ಚೂರ್ಣಿಕೆಯೆನ್ನಲಾಗುತ್ತಿದೆ. ಇವು ಶ್ಲೋಕದಂತಿರದೆ, ರಾಗಬದ್ಧವಾಗಿರುತ್ತವೆ. ಜೊತೆಗೆ, ಪುನರಾವರ್ತಿಸದೆ ಉದ್ದಕ್ಕೆ ಹಾಡುವುದು ಇದರ ವಿಶೇಷ. ಹಾಗಾಗಿ ಶ್ಲೋಕ ಚೂರ್ಣಿಕೆಗಳು ಒಂದೇ ಎಂದು ಕಂಡರೂ ಸಾಕಷ್ಟು ಭಿನ್ನತೆಗಳಿವೆ. ಮೊದಲು ಕೆಲವು ದೇವಸ್ಥಾನಗಳಲ್ಲಿ ಬಂಡಾರ, ಜಾತ್ರೆ ನಡೆಯುವಲ್ಲಿಗೆ ಹೋಗುವುದಕ್ಕೆ ಪ್ರಾರಂಭದಲ್ಲಿ ಧ್ವಜ ಪೀಠದ ಬಳಿ ಸ್ಥಾನಿಕರು ಚೂರ್ಣಿಕೆಯನ್ನು ಹೇಳುವುದು ಸಂಪ್ರದಾಯವಾಗಿತ್ತು.
ಮೈಸೂರು ಸಂಪ್ರದಾಯದ ಭರತನಾಟ್ಯ ಪ್ರಕಾರದಲ್ಲಿ ಚೂರ್ಣಿಕೆಗಳನ್ನು ಅಭಿನಯಿಸುವ ಪದ್ಧತಿ ಹೆಚ್ಚಾಗಿ ಇತ್ತು. ಇಲ್ಲಿ ಲಾಸ್ಯವೇ ಪ್ರಮುಖ. ಅಭಿನಯವೇ ಜೀವಾಳ. ಸಾಮಾನ್ಯವಾಗಿ ರಂಗಪೂಜೆಯ ಬಳಿಕ ನಡೆಯುವ ಕಾರ್ಯಕ್ರಮವಿದು. ಸಾಮಾನ್ಯವಾಗಿ ನೃತ್ಯದಲ್ಲಿ ಬಳಸುವ ಚೂರ್ಣಿಕೆಗಳು ನಾಯಕನ ಅಥವಾ ದೇವರ ಕುರಿತಾದುವು. ಕಲಾವಿದೆಯು ಬಣ್ಣ ಬಣ್ಣದ ಕೋಲುಗಳನ್ನು ಹಿಡಿದು ರಂಗದಲ್ಲಿ ನಡೆದು ಬಂದು ರಂಗದ ಮಧ್ಯೆ ಭಕ್ತಿಯಿಂದ ಕೋಲುಗಳನ್ನಿಟ್ಟು ನಮಸ್ಕರಿಸಿ; ಹಿಂದೆ ತೆರಳಿ ಚೂರ್ಣಿಕೆಯನ್ನು ಆರಭಿರಾಗದಲ್ಲಿ ಒಂದೇ ಸಮನೆ ಹಾಡುವುದು ಪದ್ಧತಿ. ಈಗ ಅಭಿನಯವನ್ನೂ ಮಾಡಲಾಗುತ್ತದೆ. ರಾಮ ಕಥಾ ಚೂರ್ಣಿಕೆ, ಭರತಕಲ್ಪ ಲತಾಮಂಜರಿಯ ಪ್ರಾರಂಭದಲ್ಲಿರುವ ತೆಲುಗು ಚೂರ್ಣಿಕೆಗಳು ಪ್ರಸಿದ್ಧವಾದವುಗಳು. ಚೂರ್ಣಿಕೆಗಳಂತೆ ದಂಡಕಗಳು( ಉದಾ:-ಶ್ಯಾಮಲಾ ದಂಡಕ) ಅಭಿನಯ ಯೋಗ್ಯ.
ಊಟದಲ್ಲಿಯೂ ಚೂರ್ಣಿಕೆ ಬಳಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಶುಭ ಸಂದರ್ಭಗಳಲ್ಲಿ ದೇವರ ಸ್ಮರಣೆ ಮಾಡಿಕೊಂಡು ಸಾವಧಾನವಾಗಿ ಭೋಜನ ಮಾಡುವುದು ಸಂಸ್ಕೃತಿ. ಜೊತೆಗೆ ಸಾಂಸ್ಕೃತಿಕ ರಂಗವೂ ಅಲ್ಲಿ ಅರಳುತ್ತದೆ. ಇತ್ತೀಚೆಗೆ ಕೀgvನೆ, ಶ್ಲೋಕಗಳನು ಹೇಳುವ ಪರಿಪಾಠ ಹೆಚ್ಚು. ಪ್ರತೀ ಚೂರ್ಣಿಕೆಯ ಕೊನೆಯಲ್ಲಿ ಹರ ನಮಃ ಪಾರ್ವತೀಪತಯೇ ಹರಹರ-ಮಹಾದೇವ ಎಂಬ ಸಮೂಹ ಕೂಗು ಸಾಮೂಹಿಕ ಪರಿಚಯ ಮತ್ತು ಉತ್ಸಾಹವನ್ನು ಇಮಡಿಗೊಳಿಸಿದರೆ, ಅಂತ್ಯದಲ್ಲಿ ಭೋಜನಾಂಥೇ ವೇಣುಗೋಪಾಲ ಸ್ಮರಣೇ ಗೋವಿಂದ- ಗೋವಿಂದ ಎಂಬ ಜೈಕಾರ ಸಮೂಹಿಕ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಗಾಯಕನ, ಕಲಾವಿದನ ಪ್ರತಿಭೆಗೆ ಕನ್ನಡಿ ಹಿಡಿಯುವ, ಕವಿಹೃದಯಗಳಿಗೆ ರಂಜಿಸುವ ಪ್ರಕಾರವಾಗಿರುವ ಚೂರ್ಣಿಕೆಗಳಿಗೆ, ಪ್ರಬುದ್ಧ ಪ್ರತಿಭೆಗಳಷ್ಟೇ ಜೀವ ತುಂಬಿಯಾರು.
ವಚನ
ವಚನ ಎಂದರೆ ಒಳ್ಳೆಯ ಮಾತು ಎಂದರ್ಥ. ಭಾಷೆ ಕೊಡುವುದು, ಕಟಿಬದ್ಧರಾಗುವುದು ಎಂಬ ಮಾತೂ ಚಾಲ್ತಿಯಲ್ಲಿದೆ. ಸುಮಾರು ೧೨ ಶತಮಾನದ ಈಚೆಗೆ ಕಂಡುಬಂದ ಶಿವಶರಣರ ಹಲವು ಸಮಾಜ ಕ್ರಾಂತಿಯ ಜ್ಞಾನಯಜ್ಞದ ಫಲವೇ ಈ ವಚನಗಳು. ಕನ್ನಡ ಸಾಹಿತ್ಯಕ್ಕೆ ಇವು ನೀಡಿದ ಅಸಾಧಾರಣ ಕೊಡುಗೆ ಅಷ್ಟಿಷ್ಟಲ್ಲ. ಬಸವೇಶ್ವರರು, ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ… ಹೀಗೆ ಅನೇಕಾನೇಕ ಶಿವ ಶರಣರು, ಶರಣೆಯರ ಜೀವನಾನುಭವ, ಭಗವಂತನ ಜೊತೆಗಿನ ಸಂಬಂಧ-ಸಮರ್ಪಣೆ, ಸಾಮಾಜಿಕ-ವೈಯ್ಯಕ್ತಿಕ ನಡವಳಿಕೆಗಳು, ನೈತಿಕ ಮೌಲ್ಯಗಳು, ಪೊಳ್ಳು ಆಚರಣೆ- ಕರ್ಮಟ ನಂಬಿಕೆಗಳು..ಮುಂತಾದ ಹತ್ತು ಹಲವು ನಿರೂಪಣೆಗಳುಳ್ಳ ಸುಮಾರು ಲಕ್ಷಕ್ಕೂ ಹೆಚ್ಚು ವಚನಗಳು ಚಿಕ್ಕದಾಗಿ, ಚೊಕ್ಕದಾಗಿದ್ದು ಸಾಮಾನ್ಯ ಜನಕ್ಕೂ ಅರ್ಥವಾಗುವಂತಿದೆ..
ಇದನ್ನು ನೃತ್ಯದಲ್ಲಿ ಚಿಕ್ಕದಾಗಿಯೂ, ವಿವರವಾಗಿಯೂ ಭಾವ ತನ್ಮಯತೆಯಿಂದ ಅಭಿನಯಿಸುವ ಕ್ರಮ ಇತ್ತೀಚಿನ ಹತ್ತು ಹದಿನೈದು ವರ್ಷಗಳಿಂದ ಜನಪ್ರಿಯವೆನಿಸಿದೆ. ಇವು ಉತ್ತಮ ಲಯದಲ್ಲಿದ್ದು, ಇಷ್ಟವೆನಿಸುವ ರಾಗವನ್ನು ಬಳಸಿಕೊಳ್ಳುವ ಸರಳತೆಯನ್ನು ಹೊಂದಿದ್ದು, ಕನ್ನಡ ಭಾಷೆಯಲ್ಲಿರುವ ಕಾರಣ ಅಭಿನಯಿಸಲು, ಅರ್ಥೈಸಿಕೊಳ್ಳಲೂ ಸುಲಭವೆನಿಸಿಕೊಳ್ಳುತ್ತವೆ.