Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಕಲಾನಿಧಿ ಅವರ ತಾತ ದೊಡ್ಡ ವಿದ್ವಾಂಸರು ಇ. ಕೃಷ್ಣಸ್ವಾಮಿ ಅಯ್ಯರ್. ಮೂಲತಃ ಕಾವೇರಿಪಟ್ಣಂನವರು. ಪಿಟೀಲು ಕಲಿತಿದ್ದ ಅವರು ತಮ್ಮ ಸಂತೋಷಕ್ಕೆಂದೇ ಸಂಗೀತವನ್ನು ಹಾಡಿಕೊಳ್ಳುತ್ತಿದ್ದವರು. ವೇದಾಂತ, ಸೈನ್ಸ್ ಆಫ್ ರಿಯಾಲಿಟಿ ಇತ್ಯಾದಿ ಮಹತ್ವಪೂರ್ಣ ಗ್ರಂಥಗಳನ್ನು ಬರೆದ ನಿಜವಾದ ಅರ್ಥದಲ್ಲಿ ವೇದಾಂತವನ್ನು ಅಳವಡಿಸಿಕೊಂಡಿದ್ದ ಮಹಾನ್ ಚೈತನ್ಯ. ಅವರ ಬಗ್ಗೆ ಸ್ವತಃ ಡಿವಿಜಿಯವರು ತಮ್ಮ ಜ್ಞಾಪಕ ಚಿತ್ರಶಾಲೆಯ ಮೊದಲ ಸಂಪುಟದ ೨ನೇ ಅಧ್ಯಾಯದಲ್ಲೇ ಲೇಖನ ಬರೆದಿದ್ದಾರೆ. ಅವರ ಮನೆಯಲ್ಲಿ ಹುಟ್ಟಿ ಬೆಳೆದವರು ಕಲಾನಿಧಿ. ಲಲಿತಾಸಹಸ್ರನಾಮದಲ್ಲಿ ಬರುವ ಕಲಾನಿಧಿ ಎಂಬ ಹೆಸರನ್ನು ನಾಮಕರಣ ಮಾಡಿದವರೂ ಅವರೇ. ಅವರು ತಮ್ಮ ಮೊಮ್ಮಗಳನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದರು. ಅವರ ವಿಶಾಲ ಹೃದಯ, ಕಲಾರಸಿಕತೆ, ಸಂಸ್ಕಾರ, ದೂರದೃಷ್ಟಿಯೇ ಕಲಾನಿಧಿಗೆ ಬಳುವಳಿಯಾಗಿ ಬಂದದ್ದು.
ಕಲಾನಿಧಿಯವರ ಕಾರ್ಯಕ್ರಮ ಬೆಂಗಳೂರಿನಲ್ಲಿದ್ದಾಗಲೆಲ್ಲಾ ಅಬ್ಸರ್ವರ್ ಆಗಿ ಹೋಗುತ್ತಿದ್ದೆ. ಬಹಳ ಒಳ್ಳೆಯ ವಿಚಾರದೃಷ್ಟಿ ಇತ್ತು ಅವರಿಗೆ. ನೃತ್ತದ ಕೋಲಾಹಲದೊಳಗೆ ಅಭಿನಯದ ಮಹತ್ತ್ವವನ್ನು ಬೇರೆ ಬೇರೆ ಕೃತಿಗಳ ಮೂಲಕ ತಂದದ್ದೇ ಅವರು. ಭರತನಾಟ್ಯಕ್ಕೆ ಸುಮಾರು ೧೦೦-೧೫೦ ಪದಗಳನ್ನು ಬಳಕೆಗೆ ತಂದರು ಕಲಾನಿದಿ. ಸ್ವತಃ ಹಾಡುತ್ತಿದ್ದ ಕಾರಣ ಮಧುರವಾಗಿ ಅವರ ಅಭಿನಯ ಅನ್ವಿತವಾಗಿತ್ತು. ಗಂಡುಮಕ್ಕಳಿಗೆಂದೇ ನಾಯಕಪ್ರಧಾನ ಕೃತಿಗಳನ್ನು ಹೇಳಿಕೊಡುವವರಾದರೂ, ಎಲ್ಲರೂ ಲಿಂಗಾತೀತವಾಗಿ ಎಲ್ಲ ಬಗೆಯ ನಾಯಿಕಾ-ನಾಯಕಾಪದಗಳನ್ನು ಮಾಡಬೇಕೆನ್ನುತ್ತಿದ್ದರು. ನಾನೊಂದು ಸಲ ನನ್ನ ಕೃತಿಗಳನ್ನು ಅವರ ಬಳಿ ಒಯ್ದು ಅಭಿಪ್ರಾಯ ಕೇಳಿದ್ದೆ. ನೃತ್ಯಕ್ಕೆ ಸಾಹಿತ್ಯವನ್ನು ವಿವರವಿವರವಾಗಿ, ನಿರ್ದಿಷ್ಟವಾಗಿ ಬರೆದರೆ ಕಷ್ಟ, ಮುಕ್ತವಾದ ಸ್ವಾತಂತ್ರ್ಯ ಇರಬೇಕು ಸಾಹಿತ್ಯದ ಅನ್ವಯಕ್ಕೆ ಎನ್ನುತ್ತಿದ್ದರು. ಈ ದೃಷ್ಟಿಯಿಂದ ಜಯದೇವನಿಗಿಂತಲೂ ಕ್ಷೇತ್ರಯ್ಯ ಅವರಿಗೆ ಯುಕ್ತವಾಗಿ ತೋರುತ್ತಿದ್ದ.
ಆದರೆ ಅವರ ಮಿತಿ ಆಂಗಿಕ ಹಾಗೂ ವಯಸ್ಸು. ಅದನ್ನರಿತೇ ಅವರು ಹೇಳುತ್ತಿದ್ದರು- ‘ನಾನು ಕಲಿಸಿದ್ದನ್ನು ಯಥಾವತ್ತಾಗಿ ಮಾಡಬೇಡಿ. ನಿಮ್ಮ ನೃತ್ಯಕ್ಕೆ ತಕ್ಕಂತೆ ಅನ್ವಯ ಮಾಡಿಕೊಳ್ಳಿ ಅಂತ. ನಿಮ್ಮ ನಿಮ್ಮ ಆಂಗಿಕ, ಭಾವಕ್ಕೆ ತಕ್ಕಂತೆ ವಿಸ್ತರಿಸಿ.’ ಎಂದು. ಹಾಗಾಗಿಯೇ ಅವರು ಕೇವಲ ಭರತನಾಟ್ಯದವರಿಗೆ ಮಾತ್ರ ಗುರುವಲ್ಲ. ಕಥಕ್, ಕೂಚಿಪುಡಿ, ಒಡಿಸ್ಸಿ ಹೀಗೆ ಎಲ್ಲಾ ನೃತ್ಯಕಲೆಗಳ ಕಲಾವಿದರಿಗೂ ಅವರು ಪಾಠ ಹೇಳಿದ್ದಾರೆ. ಅಭಿನಯ ಇಸ್ ಯೂನಿವರ್ಸಲ್ ಅಂತ ಎಲ್ಲರಿಗೂ ಹೇಳಿಕೊಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳ ಅಂಧಶ್ರದ್ಧೆಗೆ ಏನು ಹೇಳೋಣ?
ಕಲಾನಿಧಿಯವರನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ವಿಪರೀತಾರ್ಥ ಮಾಡಿಕೊಂಡವರೇ ಹೆಚ್ಚು. ಅಂದರೆ ಅರ್ಥವೇ ಮಾಡಿಕೊಳ್ಳಲಿಲ್ಲ. ಹಾಗಾಗಿಯೇ ಅಭಿನಯ ಅಂದರೆ ಅದು ಆಂಗಿಕ ಮತ್ತು ಸಾತ್ತ್ವಿಕದ ಸಂಲಗ್ನ, ಚತುರ್ವಿಧ ಅಭಿನಯಗಳೂ ರಸಕ್ಕೆ ಮೆಟ್ಟಿಲು ಎಂಬುದಕ್ಕಿಂತಲೂ ಅಭಿನಯ ಎಂಬುದು ಕೇವಲ ಸಾತ್ತ್ವಿಕಕ್ಕೆ ಸಂಬಂಧಿಸಿದುದು ಎಂದೇ ವಿಪರೀತಾರ್ಥ ಮಾಡಿಕೊಂಡರು. ಅವರಲ್ಲಿಯೂ ಗಿಣಿಪಾಠ ಕಲಿತುಕೊಂಡು ಅಭಿನಯ ಅಂದ್ರೆ ಚಲನೆಯೇ ಇಲ್ಲದೆ ಬೋರ್ ಹಿಡಿಸಿದ್ದಾರೆ. ಒಂದುವೇಳೆ ಸರಿಯಾಗಿ ಅರ್ಥೈಸಿಕೊಂಡಿದ್ದರೆ ನೃತ್ಯಕ್ಕೆ ಆಂಗಿಕ ಎಷ್ಟು ಬೇಕಾಗುತ್ತೆ ಅಂತ ಗೊತ್ತಾಗುತ್ತಿತ್ತು.
ನಾನು ಅವರನ್ನು ಮೊದಲು ಕಂಡದ್ದು ಅವರು ಡಾ.ಪದ್ಮಾ ಸುಬ್ರಹ್ಮಣ್ಯಂ ಅವರ ಕಾರ್ಯಗಾರದಲ್ಲಿ. ಅಚ್ಚರಿಯಿಂದ ವಿಚಾರಿಸಿದ್ದಾಗ ಅವರು ಹೇಳಿದ್ದು ‘ನಾನು ಕಲಿಯೋಕೆ ಬಂದಿದ್ದೀನಿ’ ಎಂದೇ ! ಅಷ್ಟೊಂದು ನಿಸ್ಪೃಹ ಕಲಾಪ್ರೀತಿ. ನಾನು ಅವರಲ್ಲಿಗೆ ಇನ್ನೊಮ್ಮೆ ಹೋದಾಗ ಅವರು ಓದುತ್ತಿದ್ದದೂ ಡಾ.ಪದ್ಮಾ ಅವರ ‘ಭರತಾಸ್ ಆರ್ಟ್- ದೆನ್ ಎಂಡ್ ನೌ. ಅವರಿಗೆ ಚತುರ್ವಿಧ ಅಭಿನಯಗಳ ಸಮನ್ವಯದ ಕುರಿತು ಆಳವಾದ ಚಿಂತನೆ ಇತ್ತು.ನಗನಿಸೋದು, ಕಲಾವಿದರು ಕಲಾನಿಧಿಯವರು ತಿಳಿಸಿದ ಸಂಚಾರಿ ಅಭಿನಯಗಳ ಸಾಧ್ಯತೆ ಮತ್ತು ಡಾ. ಪದ್ಮಾ ಸುಬಹ್ಮಣ್ಯಂ ಅವರ ಕರಣಾದಿ ಆಂಗಿಕವಿನ್ಯಾಸಗಳ ಪುನರ್ರ್ಸೃಷ್ಟಿಯನ್ನು ಒಂದಾಗಿಸಿ ನರ್ತಿಸಿದರೆ ನೃತ್ಯದಲ್ಲಿ ಚೆಲುವನ್ನು ಕಾಣಲು ಸಾಧ್ಯ. ಆಂಗಿಕ ಸಾತ್ವಿಕ ಎರಡೂ ಸೇರದೆ ಇದ್ದಾಗ ವಿವರ, ಕಲ್ಪನೆ ಮುಟ್ಟೋಲ್ಲ. ಕಂದಾಚಾರದಂತೆ ಅವರನ್ನು ಅನುಸರಿಸದೆ ಕಲಾನಿಧಿಯವರ ಸತ್ತ್ವ, ಭಾವವನ್ನು ಅನುಸರಿಸಿಕೊಂಡು ಮುಂದುವರೆಯುವುದು ಮೇಲು.