ಅಂಕಣಗಳು

Subscribe


 

ಅಲರಿಪುವಿನ ಹೊಸ ಸಾಧ್ಯತೆ

Posted On: Sunday, February 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ವಿಷ್ಣು ಪ್ರಸಾದ್ ಎನ್-ಟ್ರಸ್ಟಿ- ನೂಪುರ ಭ್ರಮರಿ ಪ್ರತಿಷ್ಠಾನ-ಬ್ಯಾಂಕ್ ಮ್ಯಾನೇಜರ್-ಪುತ್ತೂರು

ಭರತನಾಟ್ಯ ಪ್ರದರ್ಶನಗಳಲ್ಲಿ ಸಾಮಾನ್ಯವಾಗಿ ಪ್ರೇಕ್ಷಕರು ಇಷ್ಟಪಡುವುದು ಅಭಿನಯ, ಭಾವ ಪೂರಿತ ನೃತ್ಯಭಾಗಗಳನ್ನೇ! ಏಕೆಂದರೆ ಅದನ್ನು ಅರ್ಥ ಮಾಡಿಕೊಳಲು, ಅನುಭವಿಸಲು ಸುಲಭ. ಅದೇ ನೃತ್ತ ಭಾಗಗಳಾದರೆ ಅದರ ತಾಳ, ಜತಿ, ಬಹಳಷ್ಟು ಸಲ ಕಲಾವಿದರಿಂದಾಗುವ ಲೋಪ, ಪೇಲವ ಅಡವು ಸಂಯೋಜನೆ, ಅಚ್ಚುಕಟ್ಟುತನ ಇಲ್ಲದಿರು ವಿಕೆ ಸಭಿಕರನ್ನು ಆಕರ್ಷಿಸು ವಲ್ಲಿ ವಿಫಲವಾಗುವುದು ಸತ್ಯ. ಹಾಗಾಗಿ ನೃತ್ತ ಒಂದು ಸವಾಲು. ಆದರೆ ನೃತ್ತ ಆಕರ್ಷಕ ವಲ್ಲ ಎಂಬ ಭಾವ ಬೆಳೆಯುವಲ್ಲಿ ಕಲಾವಿದರ ಪಾತ್ರವೂ ದೊಡ್ಡದಿದೆ.

‘ಪ್ರೇಕ್ಷಕರು ಇಷ್ಟಪಡುತ್ತಿಲ್ಲ’ ಎಂಬ ಕಾರಣವೊಡ್ಡಿ ಇತ್ತೀಚೆಗಿನ ರಂಗ ಪ್ರದರ್ಶನ ಗಳಲ್ಲಿ ಪ್ರಾರಂಭಿಕ ಸಂಯೋಜನೆಗಳಾದ ಅಲರಿಪು, ಜತಿಸ್ವರ ಮುಂತಾದ ನೃತ್ತ ಭಾಗಗಳನ್ನು ಪ್ರದರ್ಶಿಸುವ ಗೋಜಿಗೇ ಯಾರೂ ಹೋಗುತ್ತಿಲ್ಲ. ಹಾಗಾಗಿ ಬರಬರುತ್ತಾ ಇಂತಹ ನೃತ್ತ ಪ್ರಕಾರಗಳು ಕಲಿಯುವಿಕೆಗೆ ಮತ್ತು ಪರೀಕ್ಷಾ ದೃಷ್ಠಿಯಿಂದ ಮಾತ್ರ ಗಮನಾರ್ಹವೆನಿಸಿ; ಪ್ರದರ್ಶನ, ರಂಗಪ್ರವೇಶಗಳ ಸಂದರ್ಭದಲ್ಲಿ ಸಾಕಷ್ಟು ಹಿನ್ನಡೆ ಕಂಡುಕೊಂಡಿದೆ. ಒಟ್ಟಿನಲ್ಲಿ ತಮ್ಮ ಇಷ್ಟಾನಿಷ್ಟಕ್ಕೆ, ಅಸಮರ್ಥತೆಗೆ ಪ್ರೇಕ್ಷಕರನ್ನು ಗುರಿಮಾಡಿ ಪಲಾಯನ ಮಾಡುತ್ತಿರುವ ಗುರು-ಕಲಾವಿದರ ಸಂಖ್ಯೆ ಬಹಳ ಎನಿಸುತ್ತದೆ.

ಈ ಹಿನ್ನಲೆಯಲ್ಲಿ ಯೋಚಿಸುವಾಗ ಓರ್ವರು ಮಾತ್ರ ಪ್ರದರ್ಶಿಸಬಹುದಾದ ಅಲರಿಪುವನ್ನು ಸಮೂಹವಾಗಿ ಕಲಾವಿದರು ಪ್ರಸ್ತುತಪಡುವಂತೆ ಮಾಡುವುದು ಒಂದಷ್ಟು ಸ್ವೀಕಾರಾರ್ಹ ಸಂಗತಿ. ಇದು ಪ್ರೇಕ್ಷಕರು ಕುಳಿತು ಆಸಕ್ತಿಯಿಂದ ನೋಡಲು ಸಹಕಾರಿ ಕೂಡಾ.

ಇತ್ತೀಚೆಗೆ ಮಂಗಳೂರಿನ ಕರಾವಳಿ ಉತ್ಸವದ ಅಂಗವಾಗಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಪೈಕಿ ಬೆಂಗಳೂರಿನ ರಸಿಕ ಅಕಾಡೆಮಿಯ ಕಿರಣ್ ಸುಬ್ರಹ್ಮಣ್ಯಂ ಮತ್ತು ಸಂಧ್ಯಾ ಕಿರಣ್ ಬಳಗದವರು ಪ್ರಸ್ತುತಪಡಿಸಿದ ಅಲರಿಪು ಚೇತೋಹಾರಿಯಾಗಿತ್ತು. ಅಲರಿಪುವನ್ನು ಸಮೂಹದಲ್ಲಿ ಪ್ರಸ್ತುತಪಡಿಸುವ ಟ್ರೆಂಡ್ ಬಹಳ ಹಿಂದಿನಿಂದ ಇದ್ದರೂ, ಹೆಚ್ಚಿನ ಬದಲಾವಣೆಗಳಿಲ್ಲದೆ ಕೇವಲ ಕಲಾವಿದರ ಸ್ಥಾನಗಳನ್ನು ಅದಲು ಬದಲು ಮಾಡಿ ನರ್ತಿಸುವ ಚಾಲ್ತಿಯಿದೆ.

ಆದರೆ ‘ರಸಿಕ’ ಬಳಗ ಅಲರಿಪುವಿನ ಚತುರಶ್ರ ಜಾತಿಗೆ ಲೋಪವಾಗದಂತೆ ವಿಭಿನ್ನ ನೆಲೆ, ಗತಿಗಳನ್ನು ಅಳವಡಿಸಿಕೊಂಡು ಲಯಕ್ಕೆ ಲೋಪವಾಗದಂತೆ ನರ್ತಿಸಿದ್ದು ಆಕರ್ಷಣೀಯವೆಸಿತು. ಕ್ಲಿಷ್ಟಕರವೆನಿಸಿದರೂ ಸವಾಲೆನಿಸುವ ಇಂತಹ ಪ್ರಸ್ತುತಿಗಳು ಪ್ರೇಕ್ಷಕರನ್ನು ನೃತ್ತಭಾಗಕ್ಕೆ ಹೆಚ್ಚು ಹಿಡಿದಿಟ್ಟು ನೋಡುವಂತೆ ಮಾಡಬಲ್ಲುದು. ಹಳತಿನ ಭಾವಕ್ಕೆ ತೊಂದರೆಯಾಗದೆ ಆಯಾಯ ಕಾಲದ ಅಗತ್ಯಗಳನ್ನು ಕಂಡುಕೊಂಡು ಹೊಸ ಸ್ಪರ್ಶ ನೀಡುವ ಸಂಗತಿಗಳ ಸಾಂಗತ್ಯ ಹೆಚ್ಚಬೇಕಿದೆ.

 

Leave a Reply

*

code