Author: ಮನೋರಮಾ. ಬಿ.ಎನ್
– ‘ಮನೂ’ ಬನ
ತಮಿಳಿನಲ್ಲಿ ಅರಂಗೇಟ್ರಂ ಎಂದು ಕರೆಸಿಕೊಳ್ಳುವ ರಂಗಪ್ರದರ್ಶನವನ್ನು ಕನ್ನಡದಲ್ಲಿ ರಂಗಪ್ರವೇಶವೆಂದು ಕರೆಯಲಾಗಿದೆ. ಭರತನಾಟ್ಯದ ಅಭ್ಯಾಸದಲ್ಲಿ ಮುಖ್ಯವಾಗಿ ಮೂರು ಹಂತಗಳಿರುತ್ತವೆ. ಮೊದಲನೆಯದು ಸಾಧಕಪೂಜೆ ಅಂದರೆ ನೃತ್ಯ ಅಭ್ಯಾಸಕ್ಕೆ ತೊಡಗುವ ಕಾರ್ಯಕ್ರಮ. ಎರಡನೆಯದು ವದ್ದಿಗೆ ಪೂಜೆ ಅಂದರೆ ಪೂಜೆಯ ಬಳಿಕವೇ ಗೆಜ್ಜೆಕೆಟ್ಟಿಕೊಂಡು ಅಭ್ಯಾಸ ಮಾಡುವುದು. ಕೊನೆಯದು ಗೆಜ್ಜೆ ಪೂಜೆ ಅಂದರೆ ನೃತ್ಯಾಭ್ಯಾಸದಲ್ಲಿ ಪರಿಪೂರ್ಣತೆ ಪಡೆದ ಮೇಲೆ ಸಾರ್ವಜನಿಕವಾಗಿ ಜರುಗುವ ಸಮಾರಂಭ. ಕಳೆದ ಮೂವತ್ತು ವರ್ಷಗಳ ವರೆಗೆ ದೇವದಾಸಿಯರು ನರ್ತನ ಕಲೆಯಲ್ಲಿ ಮಾಡಲೇ ಬೇಕಿದ್ದ ಸಂಸ್ಕಾರ ಕರ್ಮ ಗೆಜ್ಜೆ ಪೂಜೆಯಾಗಿತ್ತು. ಅಂದು ಕಲಾವಿದೆ ಗೆಜ್ಜೆಗಳನ್ನು ಪೂಜೆಗಿಟ್ಟು ಆ ಬಳಿಕ ಗುರುವಿನ ಆಶೀರ್ವಚನ ಪಡೆದು ಅಲ್ಲಿಯತನಕ ತಾನು ಕಲಿತ ನೃತ್ಯಬಂಧಗಳನ್ನು ಪ್ರದರ್ಶಿಸುತ್ತಾಳೆ. ಈಗೀಗ ಗೆಜ್ಜೆಪೂಜೆಯ ಕ್ರಿಯೆಗಳನ್ನು ಆರಂಗೆಟ್ರಂ ಸಮಾರಂಭದಲ್ಲಿಯೇ ಇರಿಸುತ್ತಾರೆ. ಉತ್ತಮ ದಿನವನ್ನು ನಿಷ್ಕರ್ಷಿಸಿ ಪ್ರಥಮ ಬಾರಿಗೆ ತಾನು ಕಲಿತು ಸಾಧಿಸಿದ ನರ್ತನ ವಿದ್ಯೆಯನ್ನು ಸಭೆಯ ಮುಂದೆ ಪ್ರದರ್ಶಿಸುವುದೇ ಅರಂಗೇಟ್ರಮ್. ನಾಟ್ಯ ಕಲಾವಿದೆಯೆನಿಸಿಕೊಳ್ಳುವ ಯೋಗ್ಯತೆ ಪಡೆದಿದ್ದಾಳೆ ಎನ್ನುವುದೇ ಆಗ……
ನಾಟ್ಯಾಚಾರ್ಯರು ನೃತ್ಯದ ಪ್ರಥಮ ಶಿಕ್ಷಣ ಕೊಡುವಾಗ ವಿದ್ಯಾರ್ಥಿಗೆ ಗೆಜ್ಜೆ ಕಟ್ಟಿ ಅಭ್ಯಸಿಸಲು ಅನುಮತಿಸುವುದಿಲ್ಲ; ಕಾರಣ, ಹೆಜ್ಜೆ ವಿನ್ಯಾಸಗಳನ್ನು ಖಚಿತ ದೃಢತೆಯಿಂಡ ಮಾಡಬೇಕಾದರೆ ಗೆಜ್ಜೆ ಕಟ್ಟಿದರೆ ಸಹಕಾರಿಯಾಗುವುದಿಲ್ಲ. ಗೆಜ್ಜೆ ಕಟ್ಟಿದ ಹೆಜ್ಜೆಗಳನ್ನು ಭೂಮಿಯ ಮೇಲೆ ಸ್ವಲ್ಪ ತಟ್ಟಿದರೂ ಧ್ವನಿ ಬರುವ ಕಾರಣ ಗೆಜ್ಜೆ ಕಟ್ಟಿ ಪಾಠ ಮಾಡಿದಲ್ಲಿ ಹೆಜ್ಜೆವಿನ್ಯಾಸಗಳ ಸಂಪೂರ್ಣ ಅರಿವು ಆಗುವುದಿಲ್ಲ. ಆದ್ದರಿಂದ ಸ್ಪಷ್ಟವಾಗಿ ಹೆಜ್ಜೆ ತಟ್ಟಿ ಕಾಲನ್ನು ನೀಡಿ ಅಥವಾ ಮೆಟ್ಟಿ ನೃತ್ಯ ಬಂಧಗಳನ್ನು ಕಲಿತು, ನೃತ್ಯ ಪಾರಂಗತಳಾದ ಮೇಲೆ ಗುರುಗಳು ವಿದ್ಯಾರ್ಥಿಗೆ ಗೆಜ್ಜೆ ಕಟ್ಟಿ ಅಭ್ಯಾಸ ಮಾಡಿಸಿ ವಿದ್ಯಾರ್ಥಿಯ ರಂಗಪ್ರವೇಶ ಮಾಡಿಸುತ್ತಾರೆ.
ದೇವದಾಸಿಗಳು ರಂಗಪ್ರವೇಶವನ್ನೇ ಗೆಜ್ಜೆ ಪೂಜೆಯೆಂದು ಕರೆಯುತ್ತಿದ್ದರು. ಅವರ ಜೀವನದಲ್ಲಿ ಮದುವೆಯ ಸಮಾನವಾದ ಅಸಾಮಾನ್ಯ ಅನುಭವ ಅದು. ಕಲಾವಿದೆಯ ಜಾತಕಕ್ಕೆ ಹೊಂದುವ ಒಂದು ಸುಲಗ್ನದ ದಿನ ಆಕೆ ಪ್ರಾತಃಕಾಲದಲ್ಲಿ ಎದ್ದು ತೈಲಾಭ್ಯಂಜನವಾದ ಮೇಲೆ ದೇವತಾಕಾರ್ಯಗಳನ್ನು ಮುಗಿಸಿ ಸೂಕ್ತವಾದ ಶೃಂಗಾರ ಮಾಡಿಕೊಳ್ಳುತ್ತಿದ್ದಳು. ಗಟ್ಟಿಯಾದ ನೂಲಿನಿಂದ ಕಟ್ಟಿದ ಗೆಜ್ಜೆಗಳ ಮಾಲೆಯನ್ನು ಹರಿವಾಣದಲ್ಲಿಟ್ಟು ನೆರೆದ ಹಿರಿಯ ವಿದ್ವಾಂಸರ ಹಸ್ತಸ್ಪರ್ಶ ಮಾಡಿಸಿ ಆಶೀರ್ವಾದ ಪಡೆದು, ಪದ್ಧತಿಯಂತೆ ಗುರುಗಳೇ ಸ್ವತಃ ಆಕೆಯ ಬಲಗಾಲಿಗೂ ನಂತರ ಎಡಗಾಲಿಗೂ ಕಟ್ಟುತ್ತಿದ್ದರು. ಪೂರ್ವರಂಗ ವಿಧಿಗೆ ಹೆಚ್ಚಿನ ಪ್ರಾಮುಖ್ಯತೆಯೂ ಅಲ್ಲಿತ್ತು. ಕೊನೆಗೆ ನೆರೆದವರೆಲ್ಲರಿಗೂ ವೀಳ್ಯವನ್ನು ಕೊಟ್ಟು ಆಶೀರ್ವಾದವನ್ನು ಪಡೆಯುವುದು ಕ್ರಮ.
ಅಂದಿನ ಕಾಲದ ಗೆಜ್ಜೆಪೂಜೆಗಳು ಇಂದಿನ ಕಾಲದಲ್ಲಿ ರೂಢಿಯಲಿಲ್ಲ. ಆದರೆ ದೇವದಾಸಿಯರೇ ಭರತನಾಟ್ಯವನ್ನು ಅಭ್ಯಸಿಸಿ ಉಳಿಸಿಕೊಂಡು ಬಂದಿದ್ದರಿಂದ ಗೆಜ್ಜೆಪೂಜೆಯ ಪವಿತ್ರ ಕಾರ್ಯಕ್ಕೆ ಕಳಂಕವೂ ಅಂಟಿಕೊಂಡಿತ್ತು.
ಈಗ ಕಲಾರಂಗದಲ್ಲಿ ಕಲಾವಿದೆಗೆ ಸ್ಥಾನ ಗೌರವ ಸಿಗಬೇಕೆಂದಾದರೆ ರಂಗಪ್ರವೇಶ ಕಾರ್ಯಕ್ರಮ ಅನಿವಾರ್ಯವೆನಿಸಿಕೊಂಡಿದೆ. ಸಾಮಾನ್ಯವಾಗಿ ಕಲಾವಿದೆಗೆ ಹಿರಿಯ ಕಲಾವಿದರ, ಕಲಾಭಿಮಾನಿಗಳ, ಹಿರಿಯ ವ್ಯಕ್ತಿಗಳ ಸ್ನೇಹ- ಸಂಪರ್ಕ, ಸೌಹಾರ್ದ ಸಹಾಯಗಳು ದೊರೆಯುವುದಕ್ಕೆ ರಂಗಪ್ರವೇಶ ಮಾಧ್ಯಮವೂ ಆಗಿದೆ. ಅಭಿವೃದ್ಧಿ ಹೊಂದುತ್ತಾ ಬರುವ ಹೊಸ ಕಲಾವಿದೆಯ ಮೇಲೆ ಜನೆತೆಗೆ ಸದಾ ಗಮನವಿರಲೆಂಬುದು ಅರಂಗೆಟ್ರಂನ ಉದ್ದೇಶಗಳಲ್ಲೊಂದು. ಸಂಗೀತಗಾರರು, ಸಾಹಿತಿಗಳು, ವಿವಿಧಕಲಾ ವಿದ್ವಾಂಸರು, ಕಲಾರಸಿಕರು, ಕಲಾಪೋಷಕರನ್ನು ಆಮಂತ್ರಿಸಿ ತುಂಬಿದ ಸಭೆಯೆದುರಿಗೆ ನೃತ್ಯಕಾರ್ಯಕ್ರಮ ನೀಡಿ ಮೆಚ್ಚುಗೆ ಪಡೆಯುವುದೇ ಅಲ್ಲಿ ಕಲಾವಿದೆಗೆ ಪ್ರಶಸ್ತಿ ಪತ್ರ…
ಸಾಮಾನ್ಯವಾಗಿ ಭರತನಾಟ್ಯದ ಮಾರ್ಗಪದ್ಧತಿ- ಅಂದರೆ ಅಲಾರಿಪು, ಜತಿಸ್ವರ, ಶಬ್ದಂ, ವರ್ಣಂ, ಜಾವಳಿ, ಕೀರ್ತನೆ, ಶ್ಲೋಕ, ತಿಲ್ಲಾನಗಳು, ರಂಗಪ್ರವೇಶದ ಮುಖ್ಯವಸ್ತುಗಳಾಗಿರುವುದು ರೂಡಿ. ಆದರೆ ಇತ್ತೀಚೆಗೆ ರಂಗಪ್ರವೇಶ ಕಾರ್ಯಕ್ರಮಗಳು ನವೀನ ಮಾದರಿಯ ನೀತಿಯನ್ನು ಅನುಸರಿಸಲು ಹೋಗಿ ಎಡವಿ ಬೀಳುತ್ತಿದೆ. ನೃತ್ಯಬಂಧಗಳ ಪ್ರದರ್ಶನದಲ್ಲಿ ಬದಲಾವಣೆ, ಕೆಲವು ನೃತ್ಯಬಂಧಗಳ ನಂತರ ಸಭಾಕಾರ್ಯಕ್ರಮದ ಮೂಲಕ ವಿಶ್ರಾಂತಿ, ಅಪರಿಪೂರ್ಣ ವಿನ್ಯಾಸ, ಅಬದ್ಧ ರಂಗಚಲನೆಗಳು ಈಗಿನ ಅರಂಗೇಟ್ರಂ ಕಾರ್ಯಕ್ರಮವನ್ನು ಕಳಪೆ ಮಾಡಿವೆ. ವೈಭವದ, ಶ್ರೀಮಂತಿಕೆಯ ಸೋಗನ್ನಷ್ಟೇ ಹಾಕುವ ಅರಂಗೇಟ್ರಂ ವಿದ್ವಾಂಸರ ತಾಣವಾಗುವುದಕ್ಕಿಂತ ಬಂಧು ಮಿತ್ರರ ಪ್ರತಿಷ್ಟಿತ ವ್ಯಕ್ತಿಗಳ ಭಟ್ಟಂಗಿತನಕ್ಕೆ ವೇದಿಕೆಯಾಗುತ್ತಿದೆ.
ಇಂದಿನ ಪರಿಸ್ಥಿತಿಯಲ್ಲಿ ಅರಂಗೇಟ್ರಂ ವ್ಯಾಪಾರವಾಗಿ ಹೋಗಿದೆ ಎನ್ನುವ ಮಾತು ಅತಿಶಯವೇನಲ್ಲ. ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿಕೊಡಬೇಕಿದ್ದ ಕಾರ್ಯಕ್ರಮ ಹಣ ಚೆಲ್ಲುವ ಸಿರಿವಂತರ ಪಾಲು. ಭೋಜನಕೂಟ, ಸತ್ಕಾರ, ಅತ್ಯಾಕರ್ಷಕ ರಂಗಸಜ್ಜಿಕೆ, ಫಲಾಹಾರ, ಅತ್ಯಾಧುನಿಕ ಬ್ರೋಷರ್ಸ್, ಪಾಂಪ್ಲೆಟ್ಸ್, ವೀಡಿಯೋ ಛಾಯಾಗ್ರಹಣ, ಹಿಮ್ಮೇಳದ ಭರಾಟೆ, ಉಡುಗೊರೆಗಳ ಕರಾಮತ್ತು ಶಾಸ್ತ್ರೀಯತೆಯನ್ನು ಮುಳುಗಿಸಿಬಿಟ್ಟಿವೆ. ನಾಟ್ಯರಂಗದಲ್ಲಿ ಗುರುಗಳಿಗೆ ಸಭಿಕರ ಮುಂದೆ ಗುರುದಕ್ಷಿಣೆ ಕೊಡುವ ಕಾರ್ಯಕ್ರಮವಂತೂ ಚಿನ್ನ, ವಜ್ರಗಳ ಅಳತೆಗೋಲಿನಲ್ಲಿಯೇ ನಿರ್ಧಾರವಾಗುತ್ತಿದೆ. ಇಂತದ್ದೇ, ಇಷ್ಟೇ ಕೊಡಬೇಕು ಎಂಬ ಆಗ್ರಹ, ಪ್ರತಿಷ್ಟೆ ತೋರಿಸಲು ಅರಂಗೇಟ್ರಂ ಒಳ್ಳೆಯ ಉದಾಹರಣೆ ಎನಿಸಿಕೊಳ್ಳುತ್ತಿದೆ. ಇಂದಿಗೆ ಅರಂಗೇಟ್ರಂ ಎಂದರೆ ಹಣ ಮಾಡುವುದು, ವಿಜೃಂಭಣೆ. ಶಿಸ್ತು-ಪರಿಪೂರ್ಣತೆ-ಗುರುಭಕ್ತಿಯ ಮಾಯವಾಗುತ್ತಾ, ವೆಚ್ಚದ ವೇಷಭೂಷಣಗಳು, ಅಲಂಕಾರ, ಸೌಂದರ್ಯವಷ್ಟೇ ಮಾನದಂಡವಾಗುತ್ತಾ ಪೂಜನೀಯಭಾವ ಕಣ್ಮರೆಯಾಗುತ್ತಿದೆ. ಪಕ್ಕವಾದ್ಯ ನುಡಿಸುವವರಿಗೂ ನಡೆಸುವ ಸನ್ಮಾನ ಕಾರ್ಯಕ್ರಮ ಅತಿರಂಜಿತಗೊಳ್ಳುತ್ತಿದೆ.
ರಂಗಪ್ರವೇಶ ಮಾಡುವ ಬಹುಪಾಲು ಕಲಾವಿದೆಯರು ಪ್ರತಿಭಾವಂತ ಸೃಜನಶೀಲ ವ್ಯಕ್ತಿಗಳಾಗಿರುವ ಬದಲು ಗಿಣಿಪಾಠ ಒಪ್ಪಿಸುವ ಕಲಾವಿದೆಯರಾಗುತ್ತಿರುವುದು ದುರದೃಷ್ಟಕರ. ಸಾಮಾನ್ಯವಾಗಿ ಕಲಾವಿದೆಯು ಸುಮಾರು ೩ ಗಂಟೆಗಳಷ್ಟು ಕಾಲ ಸಮರ್ಥವಾಗಿ ಯಾವುದೇ ದೇಹಾಯಾಸಗಳಿಲ್ಲದೆ ಲೀಲಾಜಾಲವಾಗಿ ನರ್ತಿಸಲು ಶಕ್ತವಾದರೆ ರಂಗಪ್ರವೇಶ ಮಾತು ಸಾರ್ಥಕ್ಯ. ಆದರೆ ಎಷ್ಟೋ ಮಂದಿ ನಿರ್ದಿಷ್ಟ ಸಮಯದ ವರೆಗೆ ನರ್ತಿಸಲಾಗದೇ ಅರ್ಧದಲ್ಲೇ ಬಳಲಿ ನೇಪಥ್ಯಕ್ಕೆ ಓಡಿ ಬಂದವರಿದ್ದಾರೆ.
ಪ್ರೌಢ ಕಲಾವಿದರು ಮಾಡಬೇಕಾದ ಅರಂಗೇಟ್ರಂನ್ನು ಪುಟ್ಟ ಮಕ್ಕಳಿಂದ ಮಾಡಿಸುವ ನಾಟ್ಯಗುರುಗಳ ಕ್ರಮವಂತೂ ನರ್ತನವಿದ್ಯೆಗೇ ಅಣಕ! ಕಲಾವಿದೆಯ ಅರ್ಹತೆಗಿಂತ ಗುರು- ವಿದ್ವಜ್ಜನರನ್ನು ಕರೆಸಿ ನಡೆಸಿಕೊಳ್ಳುವ ವೈಭವವೇ ಇಂದಿನ ಮಾನದಂಡ! ಜೊತೆಗೆ ಇಂದು ಎಷ್ಟೋ ಕಲಾವಿದರು(?) ರಂಗಪ್ರವೇಶ ಮಾಡಿ ತೆರೆಮರೆಗೆ ಸರಿಯುತ್ತಿರುವುದು ಖೇದಕರ. ಹಾಗಾದಾಗ ಪ್ರತಿಷ್ಟೆಯ ಪ್ರದರ್ಶನದ ಮುಂದೆ ಕಲಾಸೇವೆಯು ಮುಖ್ಯವಾಗಿಲ್ಲ ಎನ್ನುವುದು ಖಾತ್ರಿಯೇ ಸರಿ.
ಏಕವ್ಯಕ್ತಿಯಿಂದ ಪ್ರಯೋಗಿಸಲು ಅರ್ಹವಾದ ಅರಂಗೇಟ್ರಂನಲ್ಲಿ ಇಂದು ನೃತ್ಯಗಳ ಅಭ್ಯಾಸ ಹಾಗೂ ಪ್ರಯೋಗಕ್ಕೆ ಇರುವ ಕ್ರಮ ಮೀರಲಾಗುತ್ತಿದೆ. ನಿರ್ಣಿತ, ನಿರ್ದಿಷ್ಟ ಚಲನವಲನಗಳಿಂದ ನೃತ್ಯಪ್ರೌಢಿಮೆಯನ್ನು ಪ್ರಯೋಗಿಸುವುದ ಬಿಟ್ಟು ಶಾಸ್ತ್ರೀಯ ನೃತ್ಯಗಳ ರಂಗಪ್ರವೇಶ ಎಂಬ ಫಲಕ ಅಂಟಿಸಿಕೊಳ್ಳುತ್ತಾ ಯಾವೊಂದು ಶಾಸ್ತ್ರೀಯ ನೃತ್ಯದ ಮಾರ್ಗಕ್ಕೂ ಬದ್ದರಾಗದೇ vಚಿಡಿieಣಥಿ ತೋರಿಸಲು ಹೋದ ಸಂದರ್ಭಗಳೂ, ಮತ್ತು ಅದನ್ನೇ ಶಹಬ್ಬಾಸ್ ಎನ್ನುವ ಬುದ್ದಿವಂತರ ಗುಂಪುಗಳೂ ಬೇಕಾದಷ್ಟಿವೆ. ಕೆಲವೊಂದು ಅರಂಗೇಟ್ರಂ ಪತ್ರಕರ್ತರನ್ನೇ ಪ್ರಮುಖ ಉದ್ದೇಶವನ್ನಾಗಿರಿಸಿಟ್ಟು ನಡೆದದ್ದೂ ಇದೆ.!
ಸರಿಯಾಗಿ ಸಹೃದಯರು, ವಿದ್ವಾಂಸರ ಎದುರಿಗೆ ಮನೆಯಲ್ಲಿ ಮಾಡಿಸಿದರೂ ಸಾಕು. ರಂಗ ಪ್ರವೇಶ ಆಡುವರು, ಮಾಡಿಸುವರು ಇದ್ದಾರೆಯೇ ವಿನಃ ನೋಡುವವರ ಸಂಖ್ಯೆ ತೀರ ವಿರಳವಾಗುತ್ತಿದೆ. ದೊಡ್ದಪ್ಪ, ದೊಡ್ಡಮ್ಮ, ಅತ್ತೆ, ಮಾವ…. ಹೀಗೆ ಬಂಧುಮಿತ್ರರು ಮುಖಸ್ತುತಿ ಮಾಡಿದರೆ ಸಾಕೇ? ಎಂದು ಪ್ರಶ್ನಿಸುತ್ತಾರೆ ಶತಾವಧಾನಿ ಡಾ|| ಗಣೇಶ್.
ಮೊದಲೆಲ್ಲಾ ರಂಗಪ್ರವೇಶ ಕಾರ್ಯಕ್ರಮ ದೇವಾಲಯದಲ್ಲಿ, ಗುರುಮನೆಯಲ್ಲಿ ನಡೆಯುವುದು ರೂಢಿ. ಭರತ ಮತ್ತು ನಾಟ್ಯ ಎಂಬ ಶಬ್ಧಾರ್ಥದ ಸಕಲ ಸಂಪದವೂ ಅರಂಗೇಟ್ರಂ ಎಂಬ ಭಾವನೆ ಮೊದಲಿತ್ತು. ಇದು ಉಳಿದು ಬಂದ ಮಾರ್ಗವನ್ನು ಗಮನಿಸುವಾಗ ಎಂಟು ವರ್ಷಗಳ ಸತತ ಕಠಿಣ ಶ್ರಮ ಸಾಧನೆಯಿಂದಲ್ಲದೆ ಸಾಧ್ಯವಾಗದಾಗಿತ್ತು. ಆದರೆ ಈಗ ಬಹುವೆಚ್ಚದ ಸಭಾಂಗಣಗಳೇ ರಂಗಪ್ರವೇಶದ ಗುಣಮಟ್ಟ ಅಳೆಯುವ ಆಧಾರ!.ಕಲಿಯುವ ಪ್ರಾರಂಭಿಕ ಹಂತದಲ್ಲೇ ಅರಂಗೇಟ್ರಂನ ಯೋಚನೆ! ಜೊತೆಗೆ ಜನರಂಜನೆಯೇ ಮುಖ್ಯ ದೃಷ್ಟಿಯಾಗುತ್ತಾ ಸಾಗಿದುದರಿಂದ ಕೊರವಂಜಿ, ಜಾನಪದ, ಲಘು ನೃತ್ಯಗಳು ಅರಂಗೇಟ್ರಂನಲ್ಲಿ ಸೇರಿಕೊಂಡಿವೆ. ಜೊತೆಗೆ ‘ಗುರುವಂದನಂ‘ ಎನ್ನುತ್ತಾ ರಂಗಪ್ರವೇಶಕ್ಕೆ ಮತ್ತೊಂದು ಸಾಧ್ಯತೆ ನೀಡುತ್ತಿರುವ ಕಾರ್ಯಕ್ರಮಗಳು ಜಾಳುಜಾಳಾಗಿ ಹೋಗುತ್ತಿದೆ. ಆದರೆ ಅಲರಿಪುವೇ ಮೊದಲ ನೃತ್ಯವಾಗಿದ್ದರೂ ಕೌತ್ವಂ, ತೋಡೆಯ ಮಂಗಳಂ ಮುಂತಾದವುಗಳನ್ನು ಅಳವಡಿಸುವುದು ಗುಣಾತ್ಮಕ ನವ್ಯ ರೀತಿ.
ರಂಗ ಪ್ರವೇಶ ಎಂಬ ಮಾತುಗಳು ಇಂದು ಎಷ್ಟೋ ಬಡ ಪ್ರತಿಭಾವಂತರ ಪಾಲಿಗೆ ನುಂಗಲಾರದ ತುತ್ತು. ಸಾಧನೆಯ ಫಲಕಗಳು, ಪ್ರತಿಭೆ, ನೃತ್ಯ ಸೇವೆ ಮಾಡುವ ಹಂಬಲವಿದ್ದರೂ ರಂಗಪ್ರವೇಶವಾಗದೇ ಹೋದಲ್ಲಿ ನರ್ತನ ಜಗತ್ತಿನಲ್ಲಿ ನೋಡುವ ದೃಷ್ಟಿಕೋನವೇ ಬೇರೆಯಾಗುತ್ತಿದೆ. ಕಲಾವಿದೆ ಹೇಗೆ ಕುಣಿದರೂ ಪರವಾಗಿಲ್ಲ, ರಂಗಪ್ರವೇಶ ಆಗಿದೆ ಎಂದಾದರೆ ಅದೊಂದು ಕಿರೀಟ ಎಂದು ಭಾವಿಸುವುದೇ ಹೆಚ್ಚು ! ಅಲ್ಲದೆ ಗುರುದಕ್ಷಿಣೆಯ ಅಪೇಕ್ಷೆ ಮಿತಿ ದಾಟುತ್ತಿರುವುದು ಬಡ ಪ್ರತಿಭಾವಂತ ಕಲಾವಿದರಲ್ಲಿ ಆತಂಕ ಹುಟ್ಟಿಸಿದೆ. ಖರ್ಚುವೆಚ್ಚದ ಸರಣಿ ನೋಡಿದಾಗ, ಕಲಾವಿದೆಗೆ ನೃತ್ಯದೊಂದಿಗೆ ಮದುವೆ ಎನ್ನುವುದಕ್ಕಿಂತ, ಮದುವೆ ಮಾಡುವುದಕ್ಕಿಂತಲೂ ಹೆಚ್ಚಿನ ಖರ್ಚು ಅನ್ನುವುದು ಸೂಕ್ತ. ಒಟ್ಟಿನಲ್ಲಿ ಬಡ ಪ್ರತಿಭಾವಂತ ಕಲಾವಿದರಿಗೆ ರಂಗಪ್ರವೇಶವೆಂಬುದು ಮರೀಚಿಕೆಯಾಗುತ್ತಿದೆಯಷ್ಟೇ!
ಕೆಲವು ಬೆರಳೆಣಿಕೆಯ ಸಂಘ ಸಂಸ್ಥೆಗಳು ಬಡ ಪ್ರತಿಭಾವಂತರಿಗೆ ರಂಗ ಪ್ರವೇಶದ ಭಾಗ್ಯವನ್ನು ಒದಗಿಸಿಕೊಡುತ್ತಿರುವುದು ಸಂತಸವಾದರೂ, ನಿರೀಕ್ಷಿತ ಮಟ್ಟವನ್ನು ಮುಟ್ಟುವಲ್ಲಿ ಅವುಗಳೂ ವಿಫಲವಾಗುತ್ತಿದೆ ಎಂದರೆ ತಪ್ಪಾಗಲಾರದು.
ರಂಗ ಪ್ರವೇಶದ ಯಾವ ವಿಧಿಯಲ್ಲೂ ಇಷ್ಟೇ ಖರ್ಚು ಮಾಡಬೇಕು, ಹೀಗೇ ದಕ್ಷಿಣೆ, ಸತ್ಕಾರ ಕೊಡಬೇಕು ಎಂದು ಹೇಳಿಲ್ಲ. ಅದೆಲ್ಲಾಜನರು ರೂಢಿಸಿಕೊಂಡದ್ದು. ಕಡಿಮೆ ಖರ್ಚಿನಲ್ಲಿ, ಹೆಚ್ಚು ಶಿಸ್ತು, ಸಾಂಪ್ರದಾಯಿತೆಯಲ್ಲಿ, ಉತ್ತಮ ಗುಣಮಟ್ಟವನ್ನಿಟ್ಟು ಕಾರ್ಯಕ್ರಮ ರೂಪಿಸಲು ಸಾಧ್ಯವಿದೆ. ಆದರೆ ಅಂತಹ ಮನಸ್ಸುಗಳ ಕೊರತೆಯಿದೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವುದೇನೋ ಸರಿ, ಆದರೆ ಕೋಲ ಕಟ್ಟುತ್ತಾ ಕೋಲಾಹಲ ಮಾಡುವುದು ಎಷ್ಟು ಸರಿ? ಅದ್ಧೂರಿತನ, ಆಧುನಿಕತೆ ಬೇಕು. ಆದರೆ ಅವು ನೃತ್ಯದ ಸಾಂಪ್ರದಾಯಿಕ ಶಿಸ್ತುಗಳನ್ನೇ ಮುರಿಯಬಾರದಲ್ಲವೇ? ರಂಗಪ್ರವೇಶ ರಂಗಕ್ಕೊಂದು ಪ್ರವೇಶವಾಗಬೇಕೇ ವಿನಃ, ಆಡಂಬರದ ಆಟಿಕೆಯಾದರೆ ಅದಕ್ಕೆ ಬೇರೆ ಹೆಸರಿಟ್ಟು ಕರೆಯುವುದು ಒಳಿತು!..