ಅಂಕಣಗಳು

Subscribe


 

ಅಭಿನಯ ದರ್ಶನ : ನಂದಿಯ ದರ್ಪಣ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಮನೂ ‘ಬನ’

||ಆಂYಕಂ ಭುವನಂ ಯಸ್ಯ ವಾಚಿಕಂ ಸರ್ವ ವಾಙ್ಮಯಂ

ಆಹಾರ್ಯಂ ಚಂದ್ರತಾರಾದಿ ತಂ ವಂದೇ ಸಾತ್ವಿಕಂ ಶಿವಂ||

‘ಯಾರಿಗೆ ಈ ವಿಶ್ವವು ಅಂಗಾಭಿನಯವೋ, ವಾಕ್ (ಮಾತು) ರೂಪವಾದುದೆಲ್ಲವೂ ಯಾರಿಗೆ ವಾಚಿಕಾಭಿನಯವೋ, ಚಂದ್ರ-ನಕ್ಷತ್ರಾದಿಗಳು ಯಾರಿಗೆ ಆಹಾರ್ಯಾಭಿನಯವೋ (ವೇಷಭೂಷಣ) ಅಂಥ ಸಾತ್ವಿಕರೂಪ ಶ್ರೀ ಶಿವನಿಗೆ ನಮಸ್ಕಾರ.

ಭರತನಾಟ್ಯ ಕಲಿಯುವ ಮತ್ತು ಕಲಿಸುವ ಪ್ರತಿಯೊಬ್ಬರಿಗೂ ಈ ಶ್ಲೋಕ ಕಂಠಪಾಠ. ಅಭ್ಯಾಸದ, ಅಥವಾ ರಂಗ ಪ್ರದರ್ಶನದ ಪ್ರಾರಂಭದಲ್ಲಿ ನಾಟ್ಯದ ಅಧಿದೇವತೆಯಾದ ನಟರಾಜನನ್ನು ಸ್ತುತಿಸುವ ಈ ಶ್ಲೋಕ ಜನ ಸಾಮಾನ್ಯರಲ್ಲೂ ಜನಜನಿತ. ಆದರೆ ಎಷ್ಟೊ ಮಂದಿಗೆ ಈ ಶ್ಲೋಕದ ಮೂಲ ಎಲ್ಲಿನದು, ಯಾರು ಇದರ ಕರ್ತೃ ಎಂಬುದು ತಿಳಿದಿದೆಯೋ ಇಲ್ಲವೋ! ಏಕೆಂದರೆ ನೃತ್ಯವೂ ವ್ಯಾಪಾರೀಕರಣಗೊಳ್ಳುವ ಈ ಸಂದರ್ಭದಲ್ಲಿ, ಬರಿಯ ವೇದಿಕೆ, ಪ್ರದರ್ಶನ, ಪರೀಕ್ಷೆಗಳಿಗಷ್ಟೇ ಸೀಮಿತವಾಗುತ್ತಿರುವ ಸಂದಿಗ್ಧದಲ್ಲಿ ಅಧ್ಯಯನದ ಕುರಿತಾಗಿ ಗಮನ ಹರಿಸುವ ಮಂದಿ ಬೆರಳೆಣಿಕೆಯಷ್ಟು ಮಾತ್ರ!

ಹಾಗಾದರೆ ಈ ಶ್ಲೋಕವನ್ನೂ ಒಳಗೊಂಡಂತೆ ನೃತ್ಯ-ನಾಟ್ಯದ ಮಹತ್ವ, ಕ್ರಮವನ್ನು ವಿವರಿಸುವ ಅಂದಾಜು ೩೧೮ ಶ್ಲೋಕದ ಕರ್ತೃ ಯಾರು? ಆ ಗ್ರಂಥ ಯಾವುದು? ಅದರಲ್ಲಿನ ವಸ್ತು-ವಿಷಯವೇನು? ತಿಳಿದುಕೊಳ್ಳುವ ಆಸಕ್ತಿಯಿದೆಯೇ? ಹಾಗಾದರೆ ನಿಮ್ಮ ಹೆಚ್ಚಿನ ಓದಿಗೆ ಈ ಪುಟ್ಟ ಚಿಂತನೆ ಸಹಕಾರಿಯಾಗಬಲ್ಲುದು ಎಂಬುದು ನಮ್ಮ ಆಶಯ.

ನಂದಿಕೇಶ್ವರ.. ಈತ ಮತ್ತು ಈತನ ಗ್ರಂಥ ಅಭಿನಯ ದರ್ಪಣ ಇಂದಿಗೂ ನೃತ್ಯ ಪದ್ಧತಿಯ ದರ್ಪಣ, ಆಕರ. ಇದು ಸಾರ್ವಕಾಲಿಕ ಸತ್ಯ. ಹಾಗಾದರೆ ಎಲ್ಲರೂ ನಂಬಿಕೊಂಡಂತೆ ಈತ ಶಿವನ ಗಣಗಳಲ್ಲೊಬ್ಬನೆನಿಸಿದ ನಂದಿಯೇ? ಉತ್ತರ ಮುಂದಿದೆ.

ನಂದಿಕೇಶ್ವರ ಭರತಾರ್ಣವ ಎಂಬ ಗ್ರಂಥದ ಕರ್ತೃ ಕೂಡಾ! ಹಾಗೆ ನೋಡಿದರೆ ಭರತಾರ್ಣವದ ಸಂಕ್ಷಿಪ್ತ ರೂಪ ಅಥವಾ ಪ್ರಬಂಧ-ಸಂಗ್ರಹವೇ ಅಭಿನಯ ದರ್ಪಣ ಎನ್ನಲಾಗಿದೆ. ಆದರೆ ಕೆಲ ವಿಮರ್ಶಕರು ಈ ಮಾತನ್ನು ಒಪ್ಪುವುದಿಲ್ಲ. ಈ ಎರಡೂ ಗ್ರಂಥಗಳ ಕರ್ತೃ ಓರ್ವನೇ ಎಂಬುದನ್ನು ಬಿಟ್ಟರೆ ಗ್ರಂಥಗಳಿಗೆ ಮತ್ತೇನೂ ಸಂಬಂಧವಿಲ್ಲ ಎನ್ನುವುದು ಇವರ ಅಭಿಪ್ರಾಯ. ಲಭ್ಯವಿರುವ ಭರತಾರ್ಣವ ಗ್ರಂಥದಲ್ಲಿ ೧೫೦೦ ಶ್ಲೋಕಗಳನ್ನು ಕಾಣಬಹುದು.

ಅಭಿನಯ ದರ್ಪಣ ಸಂಸ್ಕೃತ ಭಾಷೆಯಲ್ಲಿದೆ. ವಿದ್ವಾಂಸ ಮನಮೋಹನ್ ಘೋಷ್ ಅವರ ಪರಿಷ್ಕೃತ (ಸಂಸ್ಕೃತ-ಇಂಗ್ಲೀಷ್) ಅನುವಾದ ಸಾಮಾನ್ಯವಾಗಿ ಮೂಲ ಗ್ರಂಥಕ್ಕಿಂತಲೂ ಸರಳವಾಗಿ ಓದುವಂತೆ ಮಾಡುತ್ತದೆ. ವಿದ್ವಾಂಸರುಗಳಾದ ನೀಡಾಮಂಗಲಂ ತಿರುವೆಂಕಟಾಚಾರ್ಯರು ತೆಲುಗು ಅನುವಾದವನ್ನು, ಮ. ಶ್ರೀಧರಮೂರ್ತಿಯವರು ಕನ್ನಡದ ಭಾವಾನುವಾದವನ್ನು ಮಾಡಿದ್ದಾರೆ. ಆನಂದ ಕೆ. ಕುಮಾರಸ್ವಾಮಿ ಅವರ ಮಿರರ್ ಆಫ್ ಜೆಸ್ಚ್ಯುರ್ಸ್ ಎಂಬ ಇಂಗ್ಲೀಷ್ ಅನುವಾದ ಹೆಸರುವಾಸಿ. ನಂದಿಕೇಶ್ವರನ ಕಾಲ, ದೇಶ, ವ್ಯಕ್ತಿತ್ವದ ಬಗ್ಗೆ ಯಾವುದೇ ಖಚಿತ ಅಧಾರಗಳಿಲ್ಲ. ಆದರೂ ಇದುವರೆಗೆ ದೊರಕಿದ ಅಭಿನಯ ದರ್ಪಣದ ಹಸ್ತಪ್ರತಿಗಳು ಸಾಮಾನ್ಯವಾಗಿ ತೆಲುಗಿನಲ್ಲಿಯೇ ಇರುವುದರಿಂದ ಬಹುಷಃ ಆತ ದಕ್ಷಿಣ ಭಾರತದವನಿರಬಹುದೆಂಬ ಊಹೆ. ಕೆಲವು ವಿಮರ್ಶಕರ ಪ್ರಕಾರ ಕ್ರಿ.ಶ. ೫ನೇ ಶತಮಾನಕ್ಕಿಂತ ಮೊದಲು ಈ ಗ್ರಂಥ ರಚಿತವಾಗಿರಲಿಕ್ಕಿಲ್ಲ ಎಂದು ಬಲವಾದ ತೀರ್ಮಾನ! ನಾಟ್ಯಶಾಸ್ತ್ರ ಮತ್ತು ಅಭಿನಯ ದರ್ಪಣದ ಎಷ್ಟೋ ವಿಷಯಗಳಲ್ಲಿ ಸಾಮ್ಯತೆಯಿರುವುದರಿಂದ ಭರತ ಮುನಿ ಮತ್ತು ನಂದಿಕೇಶ್ವರರು ಸಮಕಾಲೀನರು ಅಥವಾ ಭರತನಿಗಿಂತ ನಂದಿಕೇಶ್ವರ ಕಿರಿಯವನಾಗಿರಬಹುದು ವಿಚಾರಗಳಿವೆ. ಆದರೂ ಈ ಎರಡೂ ಬೃಹದ್ಗ್ರಂಥಗಳಿಗೆ ಯಾವುದೋ ಒಂದು ಮೂಲ ಗ್ರಂಥವಿರಬಹುದು ಎಂಬ ಅನುಮಾನವಂತೂ ಇದ್ದೇ ಇದೆ. ಅದರ ಪರಿಷ್ಕೃತ ಮತ್ತು ಉಪಲಬ್ಧವಿರುವ ರೂಪವೇ ಈ ಎರಡೂ ಗ್ರಂಥಗಳಿರಬಹುದು!

ಅಷ್ಟಕ್ಕೂ ಭರತ ಮುನಿಯಂತೆಯೇ ಒಬ್ಬನಿಗಿಂತ ಹೆಚ್ಚು ನಂದಿಕೇಶ್ವರರು ಶಾಸ್ತ್ರ ಸಾಹಿತ್ಯ ಕ್ಷೇತ್ರದಲ್ಲಿದ್ದಾರೆ ಎಂಬ ವಾದವಿದ್ದರೂ ಅದಕ್ಕೆ ಸರಿಯದ ಪುಷ್ಠಿಗಳಿಲ್ಲ. ಉದಾ: ಅಭಿನಯ ಶಾಸ್ತ್ರದ ನಂದಿಕೇಶ್ವರ, ತಾಳಾಭಿನಯ ಲಕ್ಷಣವೆಂಬ ಗ್ರಂಥದ ಕರ್ತೃ ನಂದಿಕೇಶ್ವರ, ತಂತ್ರ-ಯೋಗ-ಕಾಮಶಾಸ್ತ್ರ-ಮೀಮಾಂಸ ಶಾಸ್ತ್ರಗಳ ಕರ್ತೃ ನಂದಿಕೇಶ್ವರ. ಇವರೆಲ್ಲರೂ ಒಬ್ಬರೇಯೇ? ಅಥವಾ ಒಂದೇ ಹೆಸರನ್ನು ಹೊಂದಿದ ಬೇರೆ-ಬೇರೆ ವ್ಯಕ್ತಿಗಳೇ?ಉತ್ತರ ಸಿಕ್ಕಿಲ್ಲ.

ಜೊತೆಗೊಂದು ಊಹೆಯೂ ಸೇರಿಕೊಂಡಿದೆ! ಶಿವನ ಗಣಗಳಲ್ಲಿ ಒಬ್ಬನಾದ ನಂದಿಯೇ ನಂದಿಕೇಶ್ವರ; ಈತನೇ ಶಿವನಿಂದ ನಾಟ್ಯ ಕಲಿತು ಭೂಲೋಕದಲ್ಲಿ ಪ್ರಚಾರ ಮಾಡಿದನು; ಈತನು ಈ ಎರಡೂ ಗ್ರಂಥಗಳಷ್ಟೇ ಅಲ್ಲದೆ, ನಂದಿಕೇಶ್ವರ ಸಂಹಿತ ಎಂಬ ಮತ್ತೊಂದು ಗ್ರಂಥವನ್ನು ರಚಿಸಿದ್ದು, ಈಗ ಉಪಲಬ್ಧವಿಲ್ಲದ ಈ ಸಂಹಿತೆಯ ಒಂದು ಅಧ್ಯಾಯವೇ ಅಭಿನಯ ದರ್ಪಣ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟರೆ, ತಂಡು ಎಂಬ ಮುನಿಯೇ ನಂದಿಕೇಶ್ವರ ಎಂಬುದು ಇನ್ನೂ ಕೆಲವರ ಅನಿಸಿಕೆ.

ಪ್ರಾಚೀನ ಸಂಪ್ರದಾಯದಂತೆ ಪ್ರಾರಂಭದಲ್ಲಿ ದೇವತೆ ಅಥವಾ ಋಷಿಗಳ ಸಂವಾದವನ್ನು ನಿರೂಪಿಸುವ ವಾಡಿಕೆಯನ್ನು ನಾಟ್ಯಶಾಸ್ತ್ರದಂತೆ ಅಭಿನಯ ದರ್ಪಣದಲ್ಲೂ ಕಾಣುತ್ತೇವೆ. ನಾಟ್ಯಶಾಸ್ತ್ರದ ಪೀಠಿಕೆಯಲ್ಲಿ ಬ್ರಹ್ಮನು ಸೃಷ್ಟಿಸಿದನೆನ್ನಲಾದ ನಾಟ್ಯದ ಕುರಿತಾಗಿ ಋಷಿ-ಮುನಿಗಳ ಸಂವಾದ, ಪ್ರಶ್ನೋತ್ತರ- ಪರಿಹಾರಗಳಿದ್ದರೆ ; ಇಲ್ಲಿ ನಂದಿಕೇಶ್ವರ-ಇಂದ್ರರ ಸಂವಾದವನ್ನು ಕಾಣುತ್ತೇವೆ. ಜೊತೆಗೊಂದಿಷ್ಟು ವ್ಯತ್ಯಾಸಗಳೂ ಇವೆ.

ಭರತನ ನಾಟ್ಯಶಾಸ್ತ್ರವು ಪ್ರಧಾನವಾಗಿ ನಾಟ್ಯ-ರೂಪಕ ಪ್ರದರ್ಶನವನ್ನೇ ಗಮನದಲ್ಲಿಟ್ಟು ರಚಿಸಲ್ಪಟ್ಟಿದ್ದರೆ, ಅಭಿನಯ ದರ್ಪಣವು ನೃತ್ಯ ಶಾಸ್ತ್ರವನ್ನು ಮಾತ್ರ ವಿವರಿಸುವ ಗ್ರಂಥವಾಗಿದೆ. ನಾಟ್ಯಶಾಸ್ತ್ರ ಮುಖ್ಯವಾಗಿ ಪ್ರಥಮ ಅಧ್ಯಾಯದಲ್ಲಿಯೇ ತಾನು ವಿವರಿಸುವ ನಾಟ್ಯದ ಉಗಮವನ್ನು ಪ್ರಸ್ತಾಪಿಸಿದರೆ, ಅಭಿನಯ ದರ್ಪಣವು ಸಭಾ ಲಕ್ಷಣ, ರಂಗಮಂಟಪ ಕ್ರಮ, ಗೆಜ್ಜೆ, ನಟ-ನಟಿಯರ ಲಕ್ಷಣಗಳು, ನಾಟ್ಯ, ನೃತ್ತ, ನೃತ್ಯ, ಅಭಿನಯ ಮುಂತಾದ ಪಾರಿಭಾಷಿಕ ಶಬ್ದಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.

ಹಾಗಾಗಿ ಭರತನಾಟ್ಯಕ್ಕೆ ಅಭಿನಯ ದರ್ಪಣವು ಮುಖ್ಯ ಆಕರ ಗ್ರಂಥ ಎನ್ನುವುದು ಸ್ವೀಕರಿತ ಅಂಶ. ನಾಟ್ಯಶಾಸ್ತ್ರವು ಭಾರತದ ಎಲ್ಲಾ ರಂಗಭೂಮಿ, ಜಾನಪದಕ್ಕೂ ಸೇರಿದಂತೆ ಎಲ್ಲಾ ಕಲೆಗಳಿಗೂ ಮೂಲ ಗ್ರಂಥವಾದರೂ, ಭರತನಾಟ್ಯಕ್ಕೇ ಅಭಿನಯ ದರ್ಪಣವನ್ನೇ ಹೆಚ್ಚಾಗಿ ಅನುಸರಿಸಲಾಗುತ್ತದೆ. ಉದಾಹರಣೆಗೆ: ಹಸ್ತ-ಮುದ್ರಾದಿ ಲಕ್ಷಣಗಳು ಅಭಿನಯ ದರ್ಪಣದ ಅನುಸಾರವಾಗಿಯೇ ಬಳಸಲ್ಪಡುತ್ತದೆ.

ಆದರೆ ನೃತ್ಯಾಭಿನಯಗಳಿಗೆ ಮುಖ್ಯವಾದ ರಸ-ಭಾವಾದಿಗಳ ಲಕ್ಷಣವನ್ನು ಈ ಗ್ರಂಥ ಅಷ್ಟಾಗಿ ವಿವರಿಸಹೋಗುವುದಿಲ್ಲ. ಆಂಗಿಕಾಭಿನಯವನ್ನು (ಅಂಗ ಚಲನೆಗಳಿಂದ ಉಂಟಾಗುವ ಅಭಿನಯ) ಇದರಲ್ಲಿ ಪ್ರಧಾನ ವಿಷಯವನ್ನಾಗಿ ಪರಿಗಣಿಸಲಾಗಿರುವುದು ಎದ್ದು ಕಾಣುತ್ತದೆ. ಹಾಗೆಂದ ಮಾತ್ರಕ್ಕೆ ಈ ಗ್ರಂಥದ ಉಪಯುಕ್ತತೆ ಕಡಿಮೆಯಾಗಿಲ್ಲ. ಭರತನಾಟ್ಯದ ಪಠ್ಯ ಮತ್ತು ಪರೀಕ್ಷಾ ಕ್ರಮಗಳು ಅಭಿನಯ ದರ್ಪಣವನ್ನು ಮುಖ್ಯ ಆಧಾರವಾಗಿಟ್ಟುಕೊಂಡಿವೆ.

Leave a Reply

*

code